ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ: ಡಾ.ಮೋಹನ ಪಾಟೀಲ

| Published : Mar 07 2025, 11:45 PM IST

ಸಾರಾಂಶ

ಇಂದು ಒತ್ತಡದ ಬದುಕಿನಲ್ಲಿ ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ.

ದಾಂಡೇಲಿ: ಇಂದು ಒತ್ತಡದ ಬದುಕಿನಲ್ಲಿ ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಹಾಗಾಗಿ ಆರೋಗ್ಯ ಹದಗೆಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಬ್ಬರು ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ದಾಂಡೇಲಿಯ ಹಿರಿಯ ವೈದ್ಯ ಡಾ.ಮೋಹನ ಪಾಟೀಲ ನುಡಿದರು.ಅವರು ನಗರದ ರೋಟರಿ ಕ್ಲಬ್, ಸಾರ್ವಜನಿಕ ಆಸ್ಪತ್ರೆ ಹಾಗೂ ಹುಬ್ಬಳ್ಳಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳ ಸಂಯುಕ್ತ ಆಶ್ರಯದಡಿ ಶುಕ್ರವಾರ ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕ್ಯಾನ್ಸರ್‌ನ ರೋಗ ಲಕ್ಷಣಗಳು ಕಂಡುಬಂದಲ್ಲಿ ಆತಂಕ ಪಡುವ ಅವಶ್ಯಕತೆ ಇಲ್ಲ. ಸ್ಥಳೀಯ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು. ಬಿಪಿಎಲ್, ಅಂತ್ಯೋದಯ ಮುಂತಾದವುಗಳ ಯೋಜನೆಯಡಿ ಫಲಾನುಭವಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತ ಇಲ್ಲವೇ ರಿಯಾಯಿತಿ ದರದಲ್ಲಿ ಚಿಕಿತ್ಸೆಯನ್ನು ನೀಡುವ ಸೌಲಭ್ಯಗಳಿವೆ. ಕ್ಯಾನ್ಸರ್ ಆರಂಭದ ಹಂತದಲ್ಲಿ ಚಿಕಿತ್ಸೆ ಪಡೆದುಕೊಂಡಲ್ಲಿ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದರು. ರೋಟರಿ ಕ್ಲಬ್‌ನ ಅಧ್ಯಕ್ಷ ರಾಹುಲ ಬಾವಜಿ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹೇಳಿದರು.

ಹುಬ್ಬಳ್ಳಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ.ಆದಿತ್ಯ ನಂದನ, ಕ್ಯಾನ್ಸರ್‌ನ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಚಿಕಿತ್ಸೆಗಾಗಿ ಆಯ್ಕೆಯಾದವರನ್ನು ಚಿಕಿತ್ಸೆಗೆ ಕಳಿಹಿಸುವ ಮುನ್ನ ನಗರದ ವೈದ್ಯರು ಪರೀಕ್ಷಿಸಿದ ನಂತರವೇ ಕಳುಹಿಸಲಾಗುತ್ತದೆ. ಇಲ್ಲವೇ ಆಯ್ಕೆಯಾದವರು ಸ್ಥಳೀಯ ವೈದ್ಯರಲ್ಲಿ ಪರೀಕ್ಷೆಗೊಳಪಡುವಂತೆ ಸೂಚನೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅನಿಲಕುಮಾರ ನಾಯ್ಕ, ರೋಟರಿ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಆಶಿತೋಷಕುಮಾರ ರಾಯ, ಖಜಾಂಚಿ ಲಿಯೋ ಪಿಂಟೋ, ಇವೆಂಟ್ ಚೇರ್‌ಮನ್ ಡಾ.ಅನುಪ ಮಾಡದೊಳಕರ, ರೋಟರಿ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಡಾ.ಜ್ಞಾನದೀಪ ಗಾಂವಕರ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮ ಮುಗಿದ ಬಳಿಕ ಕ್ಯಾನ್ಸರ್ ರೋಗ ತಪಾಸಣಾ ಶಿಬಿರ ಜರುಗಿತು.