ಸಾರಾಂಶ
ಭಾತಂಬ್ರಾ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸಾಯಿಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣಾ ಸಮಾರಂಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಪಾಟೀಲ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಭಾಲ್ಕಿ
ಶಾಲಾ ವಿದ್ಯಾರ್ಥಿಗಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವುದರಲ್ಲಿ ಸರ್ಕಾರ ಮತ್ತು ಅಂಗ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಫೆ.22ರಿಂದ ರಾಜ್ಯಾದ್ಯಂತ ಮಕ್ಕಳಿಗೆ ಹಾಲಿನೊಂದಿಗೆ ರಾಗಿ ಮಾಲ್ಟ್ ವಿತರಿಸಲಾಗುತ್ತಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಪಾಟೀಲ ಹೇಳಿದರು.ತಾಲೂಕಿನ ಭಾತಂಬ್ರಾ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸಾಯಿಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿನ ಪೌಷ್ಟಿಕಾಂಶ ಕೊರತೆ ನೀಗಿಸುವ ನಿಟ್ಟಿನಲ್ಲಿ ಈಗಾಗಲೇ ಮಧ್ಯಾಹ್ನ ಉಪಾಹಾರ ಯೋಜನೆಯಡಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ಬೆಳಗ್ಗೆ ಸಮಯದಲ್ಲಿ ನಂದಿನಿ ಹಾಲು, ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ ಎಂದರು.
ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ಇರುವ ಕಾರಣ ಸರ್ಕಾರ ಬಹು ಪೋಷಕಾಂಶಯುಕ್ತ ಹಾಲುಮಿಶ್ರಿತ ಸಾಯಿಶ್ಯೂರ್ ರಾಗಿ ಪಾನೀಯ ನೀಡುತ್ತಿರುವುದು ಪ್ರಶಂಶನೀಯ ಕಾರ್ಯವಾಗಿದೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾ.ಪಂ ಅಧ್ಯಕ್ಷ ವಿಜಯಕುಮಾರ ಗಾಮಾ ಉದ್ಘಾಟಿಸಿ ಮಾತನಾಡಿದರು. ಎಸ್‌ಡಿಎಮ್‌ಸಿ ಅಧ್ಯಕ್ಷ ಇಸ್ಮಾಯಿಲ್ ಕಾವಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಶಿಕ್ಷಕ ರಾಜಕುಮಾರ ಪಾಲಾಪೂರೆ ಪ್ರಾಸ್ತಾವಿಕ ಮಾತನಾಡಿದರು. ಅಕ್ಷರ ದಾಸೋಹ ಯೋಜನೆಯ ಸಾಯಕ ನಿದೇರ್ಶಕ ಮಲ್ಲಿನಾಥ ಸಜ್ಜನ ಕಾರ್ಯಕ್ರಮದ ವಿವರ ತಿಳಿಸಿದರು.ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ, ಗ್ರಾಪಂ ಉಪಾಧ್ಯಕ್ಷೆ ಗೋದಾವರಿ ಬೀರಗೆ, ಉರ್ದು ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಸಯ್ಯದ್ ಮುಕರಮ್, ವಿಜಯಲಕ್ಷ್ಮಿ ಮಾನಕಾರ, ದಾವುದ ಜಮಾದಾರ, ಸಿಆರ್‌ಪಿ ಸಂತೋಷಕುಮಾರಿ ವಾಡೆ, ರಾಜಕುಮಾರ.ಪಿ, ಮನೋಹರ.ಎಚ್ ಉಪಸ್ಥಿತರಿದ್ದರು.