ಸಾರಾಂಶ
ಸಿದ್ದಾಪುರ: ಜಿಲ್ಲೆಯಲ್ಲಿ ಮಂಗನಕಾಯಿಲೆ ಉಲ್ಬಣಗೊಳ್ಳುತ್ತಿದ್ದು, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕೂಡಲೇ ಹೆಚ್ಚಿನ ಗಮನ ಹರಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾ ಉಸ್ತುವಾರಿ ಹರತಾಳು ಹಾಲಪ್ಪ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಯಿಲೆ ಶಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕು. ಮಂಗನ ಕಾಯಿಲೆಯಿಂದ ಮೃತಪಟ್ಟವರಿಗೆ ₹೧೦ ಲಕ್ಷ ಪರಿಹಾರ ಒದಗಿಸಬೇಕು. ಈ ಕಾಯಿಲೆಯಿಂದ ಜೀವಹಾನಿಯಾದರೆ ಅದಕ್ಕೆ ಜಿಲ್ಲಾಡಳಿತ ಹೊಣೆ ಎಂದು ಎಚ್ಚರಿಸಿದರು.ಜಿಲ್ಲೆಯಲ್ಲಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಗೆಲುವು ನಿಶ್ಚಿತವಾಗಿದೆ. ಬಿಜೆಪಿ ಕಾರ್ಯಕರ್ತರು, ಮುಖಂಡರು ಉತ್ತಮವಾಗಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಹೆಚ್ಚಿನ ಲೀಡ್‌ನಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸುತ್ತದೆ. ಪ್ರಚಾರ ಕಾರ್ಯ ಒಳ್ಳೆಯ ಟೇಕ್‌ಅಪ್ ಆಗಿದ್ದು, ದಿನದಿಂದ ದಿನಕ್ಕೆ ಉತ್ತಮವಾಗುತ್ತಿದೆ ಎಂದರು.
ಅತಿ ದೊಡ್ಡ ಪಕ್ಷ ಬಿಜೆಪಿ. ಇಲ್ಲಿ ಸಣ್ಣಪುಟ್ಟ ಭಿನ್ನತೆ, ಬಂಡಾಯ ಸಹಜ. ಮುಖಂಡರ ಮತ್ತು ಕಾರ್ಯಕರ್ತರ ನಡುವೆ ಇರುವ ವೈಮನಸ್ಸನ್ನು ಸರಿಪಡಿಸಲಾಗುತ್ತಿದೆ. ಖಾಸಗಿಯಾಗಿ ಹೊಂದಾಣಿಕೆ ಮಾಡಲಾಗುತ್ತಿದೆ. ಎಲ್ಲರೂ ಒಟ್ಟಿಗೇ ಹೋಗುತ್ತಿದ್ದೇವೆ ಎಂದರು. ರಾಷ್ಟ್ರ ಮೊದಲು ಎನ್ನುವ ಧ್ಯೇಯ ನಮ್ಮೆಲ್ಲರದ್ದು. ನಮ್ಮ ಪಕ್ಷದ ಪ್ರಣಾಳಿಕೆ ಜನಪರವಾಗಿದೆ. ಅಭ್ಯರ್ಥಿಗಳು ಮೂಲ ಸೌಕರ್ಯದ ಬಗ್ಗೆ ಆದ್ಯತೆ ನೀಡಿ ಅದನ್ನು ಹೇಳಬೇಕು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ನಮ್ಮ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಮೊದಲ ಸುತ್ತಿನಲ್ಲಿ ಕ್ಷೇತ್ರದ ಎಲ್ಲೆಡೆ ಭೇಟಿ ನೀಡಿ ಸಮಾವೇಶ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ, ಮತದಾರರ ಭೇಟಿ ನಡೆಸಲಿದ್ದೇವೆ. ಮಹಾ ಸಂಪರ್ಕ, ಮನೆ, ಮನೆ ಸಂಪರ್ಕ ಆಯೋಜಿಸಲಾಗುತ್ತಿದೆ. ಮತದಾರರು ಬಿಜೆಪಿಯ ಪರವಾಗಿರುವುದು ಎಲ್ಲೆಡೆ ಕಂಡುಬರುತ್ತಿದೆ. ಉಲ್ಬಣಗೊಳ್ಳುತ್ತಿರುವ ಮಂಗನಕಾಯಿಲೆ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಕಾಯಿಲೆ ಪೀಡಿತರಿಗೆ ಉಚಿತ ಚಿಕಿತ್ಸೆ, ಮೃತಪಟ್ಟವರಿಗೆ ₹೧೦ ಲಕ್ಷ ಪರಿಹಾರ ನೀಡಲು ರಾಜ್ಯ ಸರ್ಕಾರವನ್ನು ಜಿಲ್ಲಾ ಬಿಜೆಪಿ ಆಗ್ರಹಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ಧುರೀಣರಾದ ಕೆ.ಜಿ.ನಾಯ್ಕ, ತೋಟಪ್ಪ ನಾಯ್ಕ, ಎಸ್.ಕೆ. ಮೇಸ್ತ, ಮಾರುತಿ ನಾಯ್ಕ ಹೊಸೂರು ಮುಂತಾದವರಿದ್ದರು.