ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಸಂಶೋಧನೆಗೆ ಆದ್ಯತೆ ನೀಡಿ: ನಿರ್ಮಲಾನಂದನಾಥ ಸ್ವಾಮೀಜಿ

| Published : Dec 17 2024, 12:45 AM IST

ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಸಂಶೋಧನೆಗೆ ಆದ್ಯತೆ ನೀಡಿ: ನಿರ್ಮಲಾನಂದನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪದವಿ ಪಡೆದು ಉದ್ಯೋಗ ಗಳಿಸುವುದನ್ನೇ ಗುರಿಯಾಗಿಸಿಕೊಳ್ಳಬಾರದು. ನಿರಂತರ ಕಲಿಕೆಯೊಂದಿಗೆ ಜ್ಞಾನದ ಮಟ್ಟ ಹೆಚ್ಚಿಸಿಕೊಂಡು ನಿರ್ದಿಷ್ಟ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡುವುದಕ್ಕೆ ಯುವ ಮನಸ್ಸುಗಳು ಮುಂದಾಗಬೇಕು. ಅದರಿಂದ ರಾಷ್ಟ್ರದ ಅಭಿವೃದ್ಧಿಯಲ್ಲಿ ಬದಲಾವಣೆ ತರಲು ಸಾಧ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಜ್ಞಾನ- ತಂತ್ರಜ್ಞಾನ ನಾಗಾಲೋಟದಲ್ಲಿ ಬೆಳವಣಿಗೆ ಕಾಣುತ್ತಿರುವ ಯುಗದಲ್ಲಿ ವಿದ್ಯಾರ್ಥಿಗಳು ಸಂಶೋಧನೆಗೆ ಪ್ರಧಾನ ಆದ್ಯತೆ ನೀಡಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಸಿದ್ದಯ್ಯನಕೊಪ್ಪಲು ಗೇಟ್ ಬಳಿ ಇರುವ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿಗೆ ಬೇಕಾದ ಅವಶ್ಯಕತೆಗಳಿಗೆ ಅನುಗುಣವಾಗಿ ಸಂಶೋಧನೆಗಳು ನಡೆಯಬೇಕು. ಅವು ರಾಷ್ಟ್ರದ ಬೆಳವಣಿಗೆಗೆ ಪೂರಕವಾಗಿರಬೇಕು. ಹೊಸ ಆವಿಷ್ಕಾರಗಳು ಯಾರಿಗೂ ಅಪಾಯವನ್ನುಂಟುಮಾಡದೆ ಒಳಿತನ್ನು ಉಂಟು ಮಾಡುವಂತಿದ್ದರೆ ಅವು ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದರು.

ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪದವಿ ಪಡೆದು ಉದ್ಯೋಗ ಗಳಿಸುವುದನ್ನೇ ಗುರಿಯಾಗಿಸಿಕೊಳ್ಳಬಾರದು. ನಿರಂತರ ಕಲಿಕೆಯೊಂದಿಗೆ ಜ್ಞಾನದ ಮಟ್ಟ ಹೆಚ್ಚಿಸಿಕೊಂಡು ನಿರ್ದಿಷ್ಟ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡುವುದಕ್ಕೆ ಯುವ ಮನಸ್ಸುಗಳು ಮುಂದಾಗಬೇಕು. ಅದರಿಂದ ರಾಷ್ಟ್ರದ ಅಭಿವೃದ್ಧಿಯಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.

ಹಿಂದೆಲ್ಲಾ ಶಿಕ್ಷಣ ಕಲಿಯಲು ಹೆಚ್ಚಿನ ಅನುಕೂಲಗಳಿರಲಿಲ್ಲ. ಈಗ ಅವಕಾಶಗಳ ಬಾಗಿಲು ಎಲ್ಲೆಡೆ ತೆರೆದುಕೊಂಡಿದೆ. ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಬೆಳವಣಿಗೆ ಕಂಡುಕೊಳ್ಳಬೇಕು. ತಾವು ಕಲಿತ ವಿದ್ಯೆ ಸಮಾಜದ ಹಾಗೂ ರಾಷ್ಟ್ರದ ಬೆಳವಣಿಗೆಗೆ ಪೂರಕವಾಗುವಂತೆ ಬಳಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಿಗೆ ಶಿಸ್ತು ಎನ್ನುವುದು ಬಹಳ ಮುಖ್ಯ. ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡಾಗ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.

ಹಿಂದೆ ಭಾರತಕ್ಕೆ ವಿದ್ಯಾಭ್ಯಾಸ ಮಾಡಲು ದೇಶ-ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಆಧ್ಯಾತ್ಮಿಕ ಶಿಕ್ಷಣಕ್ಕೆ ಭಾರತ ಹೆಸರುವಾಸಿಯಾಗಿತ್ತು. ತಕ್ಷಶಿಲಾ, ನಳಂದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ವಿದೇಶಿಗರು ಕ್ಯೂ ನಿಲ್ಲುತ್ತಿದ್ದರು. ಆ ಕಾಲದಲ್ಲಿ 64 ಶಿಸ್ತುಬದ್ಧ ವಿದ್ಯೆಗಳನ್ನು ಹೇಳಿಕೊಡಲಾಗುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ನಾವು ಸೋಮಾರಿಗಳಾಗಿ ಇಂದು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವಂತಹ ಪರಿಸ್ಥಿತಿ ತಂದುಕೊಂಡಿದ್ದೇವೆ ಎಂದು ವಿಷಾದಿಸಿದರು.

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಹಣವಂತರು, ಉದ್ಯಮಿಗಳನ್ನು ಇಂದಿನ ಸಮಾಜದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ. ಪ್ರಾಮಾಣಿಕತೆಯ ಬಗ್ಗೆ ಮಾತನಾಡುವವರನ್ನು ಲಘುವಾಗಿ ಕಾಣುವಂತಹ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ಎನ್ನುವುದು ದಿನೇ ದಿನೇ ಬೆಳವಣಿಗೆ ಕಾಣುತ್ತಿದೆಯೇ ಹೊರತು, ನಿಯಂತ್ರಣಕ್ಕೆ ತರಲಾಗದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಕಳೆದ ಸರ್ಕಾರದ ಅವಧಿಯಲ್ಲಿ ಶೇ.40ರಷ್ಟು ಕಮೀಷನ್ ಮಾತುಗಳು ಕೇಳಿಬಂದರೆ, ಇಂದಿನ ಸರ್ಕಾರದಲ್ಲಿ 60 ಪರ್ಸೆಂಟ್‌ಗೆ ಏರಿಕೆಯಾಗಿರುವ ಆರೋಪಗಳು ಕೇಳಿಬರುತ್ತಿವೆ. ಹೀಗಾದಾಗ ನಾಡಿನ ಮತ್ತು ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದೆ. ನಮ್ಮ ದೇಶದಲ್ಲಿ ಕಾಲ ಕಾಲಕ್ಕೆ ಆಡಳಿತ ಮಾಡಿದ ಪಕ್ಷಗಳು ಹಲವಾರು ಹಗರಣಗಳನ್ನು ಮಾಡಿವೆ ವಿಷಾದಿಸಿದರು.

ಸಾರ್ವಜನಿಕರ ದೊಡ್ಡ ಮೊತ್ತದ ಹಣ ಭ್ರಷ್ಟರ ಪಾಲಾಗಿದೆ. ಇಷ್ಟೊಂದು ದೊಡ್ಡ ಹಗರಣದ ನಡುವೆ ದೇಶದ ಆರ್ಥಿಕ ಪರಿಸ್ಥಿತಿ ಯಾವ ದುಸ್ಥಿತಿಯಲ್ಲಿದೆ ಎನ್ನುವುದು ಗೊತ್ತಾಗುತ್ತದೆ. ದುರಾಸೆಗೆ ಒಳಗಾದ ವ್ಯಕ್ತಿಗೆ ಕಾನೂನಿನ ಹೆದರಿಕೆ ಇಲ್ಲ. ಭ್ರಷ್ಟಾಚಾರ ಮಾಡಿಯೂ ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿದ್ದಾನೆ. ಚೀನಾದಲ್ಲಿ ಭ್ರಷ್ಟರಿಗೆ ಕಾನೂನಿನ ಪ್ರಕಾರ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ನಮ್ಮಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಶಿಕ್ಷೆ ವಿಧಿಸುವುದಿಲ್ಲ. ಇದು ಹಣದ ಸೋರಿಕೆಗೆ ಮುಖ್ಯ ಕಾರಣವಾಗಿದ್ದರೆ, ಭ್ರಷ್ಟಾಚಾರ ಹೆಚ್ಚಾಗಲು ಮತ್ತೊಂದು ರೀತಿಯಲ್ಲಿ ಅನುಕೂಲ ಮಾಡಿಕೊಟ್ಟಿದೆ ಎಂದರು.

ಒಂದು ರಾಜಕೀಯ ಪಕ್ಷದ ವ್ಯಕ್ತಿ, ಮತ್ತೊಂದು ಪಕ್ಷಕ್ಕೆ ನೀವು ದೊಡ್ಡ ಭ್ರಷ್ಟರು ಎಂದು ಹೇಳಿದರೆ, ಇನ್ನೊಂದು ಪಕ್ಷದವರು ನಿಮ್ಮಷ್ಟು ಭ್ರಷ್ಟಾಚಾರ ಮಾಡಿಲ್ಲ ಬಿಡಿ ಎಂದು ಹೇಳುತ್ತಾರೆ. ಇದನ್ನು ನೋಡಿದಾಗ ನಾವು ಎಂತಹ ಸಮಾಜದಲ್ಲಿದ್ದೇವೆ ಎನ್ನುವುದು ವೇಧ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ತೃಪ್ತಿಯನ್ನು ಅಳವಡಿಸಿಕೊಂಡರೆ ಮಾನಸಿಕ ನೆಮ್ಮದಿ ಸಂತೋಷ ದೊರೆಯುತ್ತದೆ ಎಂದರು.

ಈ ಹಿಂದೆ ಶಾಲೆಗಳಲ್ಲಿ ನೀತಿ ಪಾಠ ಎಂಬ ವಿಷಯ ಇರುತ್ತಿತ್ತು. ಆದರೆ, ಇಂದಿನ ಶಿಕ್ಷಣದಲ್ಲಿ ನೀತಿ ಪಾಠ ಹೇಳಿಕೊಡುತ್ತಿಲ್ಲ. ಎಷ್ಟೋ ಮಂದಿ ಪೋಷಕರು ಮಕ್ಕಳ ಮುಂದೆ ಕುಳಿತು ಅವರ ಸಮಸ್ಯೆಗಳು, ವಿದ್ಯಾಭ್ಯಾಸದ ಬಗ್ಗೆ ಮಾತನಾಡುವುದನ್ನೇ ಮರೆತಿದ್ದಾರೆ. ಮಕ್ಕಳು ಮೊಬೈಲ್ ಫೋನ್‌ಗಳಲ್ಲಿ, ಪೋಷಕರು ಧಾರಾವಾಹಿಗಳಲ್ಲಿ ಕಳೆದುಹೋಗುತ್ತಿದ್ದಾರೆ. ಎಲ್ಲಾ ಪೋಷಕರು ಮಕ್ಕಳು ಶ್ರೀಮಂತನಾಗಬೇಕೆಂದು ಬಯಸುತ್ತಿದ್ದಾರೆಯೇ ಹೊರತು, ಮಾನವಂತನಾಗಬೇಕು ಎಂದು ಹೇಳುತ್ತಿಲ್ಲ ಎಂದರು.

ಸಮಾರಂಭದಲ್ಲಿ ಆದಿಚುಚನಗಿರಿ ಮಠದ ಪ್ರಧಾನ ಕಾರ್‍ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕಾವೇರಿ ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಚ್.ಪಿ.ರಾಜು, ಕಾರ್‍ಯದರ್ಶಿ ಪ್ರೊ.ಟಿ.ನಾಗೇಂದ್ರ, ಪ್ರಾಂಶುಪಾಲ ಪ್ರೊ.ಶ್ರೀಕಂಠಪ್ಪ, ಆಡಳಿತ ಮಂಡಳಿಯ ಪ್ರೊ.ಡಿ.ಕೃಷ್ಣೇಗೌಡ, ಡಾ.ಸಿ.ಜೆ.ಗಂಗಾಧರಗೌಡ, ಕೆ.ಎಸ್.ಶಿವಕುಮಾರ್, ಕೆ.ಟಿ. ಶ್ರೀಧರ್, ಪ್ರೊ. ಕೆ. ಮಲ್ಲಿಕಾರ್ಜುನ್, ಡಾ.ಬಿ.ಎಂ.ತಮ್ಮಣ್ಣ, ಎ.ಎಸ್. ಶಶಿಧರ್ ಇತರರು ಭಾಗವಹಿಸಿದ್ದರು.

ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳಾದ ಮೋನಿಷಾ, ಅಜೆಯ್, ಅನಿತಾ ಅವರು ಸಂತೋಷ್ ಹೆಗ್ಡೆ ಅವರೊಂದಿಗೆ ಸಂವಾದ ನಡೆಸಿದರು.