ಸಂಪನ್ಮೂಲ ಕ್ರೋಢಿಕರಣಕ್ಕೆ ಆದ್ಯತೆ ನೀಡಿ

| Published : Feb 06 2025, 12:16 AM IST

ಸಾರಾಂಶ

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ೫ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಹಾಗೂ ಆಯೋಗದ ಸದಸ್ಯರು ಜಿಲ್ಲೆಗೆ ಬುಧವಾರ ಭೇಟಿ ನೀಡಿ ಜಿಲ್ಲೆಯ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ೫ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ, ಸದಸ್ಯರಾದ ಮೊಹಮದ್ ಸನಾವುಲ್ಲಾ, ಆರ್.ಎಸ್. ಪೋಂಡೆ, ಸಮಾಲೋಚಕ ಎಂ.ಕೆ.ಕೆಂಪೇಗೌಡ, ಸಿ.ಜಿ.ಸುಪ್ರಸನ್ನ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಕೆ.ಯಾಲಕ್ಕಿಗೌಡ, ವಿಶೇಷ ಕರ್ತವ್ಯ ಅಧಿಕಾರಿ ವಹಬ್ ಖಾನ್ ಸಭೆ ನಡೆಸಿದರು. ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಣಕಾಸು ಆಯೋಗ ಕಳುಹಿಸಿರುವ ಪ್ರಶ್ನಾವಳಿ ಕುರಿತ ಮಾಹಿತಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಪಂಚಾಯಿತಿ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಾಚರಣೆ, ಹುದ್ದೆಗಳು, ಆಯವ್ಯಯ, ವೆಚ್ಚಗಳ ವಿವರ ರಾಜ್ಯ ಮತ್ತು ಕೇಂದ್ರ ಹಣಕಾಸು ಆಯೋಗದ ಅನುದಾನ, ಹಂಚಿಕೆ, ಬಿಡುಗಡೆ, ಮಾಡಲಾದ ವೆಚ್ಚ ಕುರಿತ ವಿವರವನ್ನು ಪಡೆಯಲಾಯಿತು. ಆಡಳಿತ ಸುಧಾರಣೆ, ಮಾಹಿತಿ ತಂತ್ರಜ್ಞಾನ, ರಾಜ್ಯ ಹಣಕಾಸು ಆಯೋಗದ ಪರಿಶೀಲನಾ ಅಂಶಗಳಿಗೆ ಪೂರಕವಾದ ಸಲಹೆಗಳನ್ನು ಪಡೆಯಲಾಯಿತು. ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿ ಖಾತಾ ಪ್ರತಿ ದಾಖಲೆಗಳನ್ನು ತ್ವರಿತವಾಗಿ ನೀಡುವಿಕೆ, ನೀರು ಸರಬರಾಜು, ಒಳಚರಂಡಿ, ಬೀದಿ ದೀಪಗಳು, ಘನತ್ಯಾಜ್ಯ ನಿರ್ವಹಣೆ, ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಿ ಮಾಹಿತಿ ಮತ್ತು ಅಭಿಪ್ರಾಯಗಳನ್ನು ಪಡೆಯಲಾಯಿತು. ಸಭೆಯಲ್ಲಿ ಮಾತನಾಡಿದ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಹಾಗೂ ಇತರೆ ಸದಸ್ಯರು ಆಸ್ತಿತೆರಿಗೆ, ಉದ್ದಿಮೆ ಪರವಾನಗಿ, ಬಾಡಿಗೆ ಆದಾಯ, ಬಳಕೆದಾರರ ಶುಲ್ಕ, ಇನ್ನಿತರ ಸಂಗ್ರಹ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ ಸ್ವಂತ ಸಂಪನ್ಮೂಲ ಕ್ರೊಢೀಕರಣಕ್ಕೆ ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತ್ ರಾಜ್ ಸಂಸ್ಥೆಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಸಭೆಯಲ್ಲಿ ಭಾಗವಹಿಸಿದ್ದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಮೂಲ ಸೌಕರ್ಯ ಒದಗಿಸಲು ಹೆಚ್ಚು ಅನುದಾನ ನೀಡುವುದು ಸೇರಿದಂತೆ ಇತರೆ ಅಭಿಪ್ರಾಯಗಳನ್ನು ಆಯೋಗದ ಮುಂದೆ ಮಂಡಿಸಿದರು. ಅಧಿಕಾರಿಗಳೂ ಸಹ ಸಂಸ್ಥೆಗಳಿಗೆ ಅಗತ್ಯವಿರುವ ಹೆಚ್ಚಿನ ಅನುದಾನ ಹಾಗೂ ನೆರವಿನ ಬಗ್ಗೆ ಪ್ರಸ್ತಾಪಿಸಿ ಆಯೋಗದ ಮುಂದೆ ಅಭಿಪ್ರಾಯಗಳನ್ನು ಮಂಡಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ, ಮುಖ್ಯ ಯೋಜನಾಧಿಕಾರಿ ದೀಪ, ಚಾಮರಾಜನಗರ ನಗರಸಭೆ ಅಧ್ಯಕ್ಷ ಎಸ್.ಸುರೇಶ್, ಉಪಾಧ್ಯಕ್ಷೆ ಮಮತ, ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ಸಿ.ಎನ್.ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಯಳಂದೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಸ್. ಲಕ್ಷ್ಮೀ, ಉಪಾಧ್ಯಕ್ಷೆ ಶಾಂತಮ್ಮ, ಹನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮುಮ್ತಾಜ್ ಭಾನು, ಉಪಾಧ್ಯಕ್ಷ ಆನಂದ್ ಕುಮಾರ್. ಆರ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.