ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸುವ ಜತೆಗೆ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು.

ಹೊನ್ನಳ್ಳಿ ತಾಂಡಾದಲ್ಲಿ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

ಕೂಲಿಕಾರ್ಮಿಕರೊಂದಿಗೆ ನೇರ ಸಂವಾದ ನಡೆಸಿದ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಕನ್ನಡಪ್ರಭ ವಾರ್ತೆ ಬಳ್ಳಾರಿ

ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸುವ ಜತೆಗೆ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಲೋಪ-ದೋಷಗಳಿಗೆ ಅವಕಾಶ ನೀಡಬಾರದು ಎಂದು ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅಧಿಕಾರಿಗಳಿಗೆ ಸೂಚಿಸಿದರು.

ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಪಂ ವ್ಯಾಪ್ತಿಯ ಹೊನ್ನಳ್ಳಿ ತಾಂಡಾ ಗ್ರಾಮದಲ್ಲಿ ವಿಬಿ–ಜಿ ರಾಮ್ ಜಿ ಯೋಜನೆಯಡಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.

ಗ್ರಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ, ಗುಣಮಟ್ಟ ಹಾಗೂ ಯೋಜನೆಯ ಅನುಷ್ಠಾನದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಿಇಒ, ಕಾಮಗಾರಿಗಳನ್ನು ನಿಗದಿತ ಮಾನದಂಡಗಳ ಅನುಸಾರ ಕೈಗೊಳ್ಳಬೇಕು. ಯೋಜನೆಯ ಉದ್ದೇಶಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಕೂಲಿಕಾರ್ಮಿಕರೊಂದಿಗೆ ನೇರ ಸಂವಾದ:

ಕಾಮಗಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿಕಾರ್ಮಿಕರೊಂದಿಗೆ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ನೇರವಾಗಿ ಸಮಾಲೋಚನೆ ನಡೆಸಿದರು. ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಕೂಲಿ ಹಣ ಪಾವತಿಯಾಗುತ್ತಿದೆಯೇ? ಕೆಲಸದ ಸ್ಥಳದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆಯೇ? ಎಂಬುದರ ಕುರಿತು ಮಾಹಿತಿ ಪಡೆದುಕೊಂಡರು.

ವಿಶೇಷವಾಗಿ ಕೂಲಿ ಪಾವತಿಯಲ್ಲಿ ವಿಳಂಬವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಕಾರ್ಮಿಕರು ತಮ್ಮ ದುಡಿಮೆಯ ಹಣಕ್ಕಾಗಿ ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರು, ಬಿಸಿಲಿನಿಂದ ರಕ್ಷಿಸಿಕೊಳ್ಳಲು ನೆರಳಿನ ವ್ಯವಸ್ಥೆ ಹಾಗೂ ತುರ್ತು ಸಂದರ್ಭಗಳಲ್ಲಿ ಬಳಸಲು ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾಮಗಾರಿಗಳ ಗುಣಮಟ್ಟಕ್ಕೆ ಆದ್ಯತೆ:

ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನಗೊಳ್ಳುವ ಅಭಿವೃದ್ಧಿ ಕಾಮಗಾರಿಗಳು ಜನರಿಗೆ ದೀರ್ಘಕಾಲ ಉಪಯೋಗವಾಗುವಂತಿರಬೇಕು. ಕೇವಲ ಕಾಮಗಾರಿಗಳನ್ನು ಪೂರ್ಣಗೊಳಿಸುವುದಷ್ಟೇ ಅಧಿಕಾರಿಗಳ ಜವಾಬ್ದಾರಿಯಲ್ಲ. ಅವುಗಳ ಗುಣಮಟ್ಟ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಸಿಇಒ ತಿಳಿಸಿದರು.

ಕಾಮಗಾರಿಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಜತೆಗೆ ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿರ್ದೇಶನ ನೀಡಿದರು.

ಗ್ರಾಮೀಣ ಜನರ ಆರ್ಥಿಕ ಸಬಲೀಕರಣ:

ಗ್ರಾಮೀಣ ಭಾಗದ ಜನರಿಗೆ ಅವರ ವಾಸಸ್ಥಳದ ಸಮೀಪದಲ್ಲಿಯೇ ಉದ್ಯೋಗಾವಕಾಶ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದರಿಂದ ಕೂಲಿಕಾರ್ಮಿಕರಿಗೆ ಆದಾಯದ ಮೂಲ ಸೃಷ್ಟಿಯಾಗುವ ಜತೆಗೆ ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಲು ನೆರವಾಗಲಿದೆ.

ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ಪರಸ್ಪರ ಪೂರಕವಾಗಿವೆ. ಹೀಗಾಗಿ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಗ್ರಾಪಂ ಮಟ್ಟದಲ್ಲಿ ಅನುಷ್ಠಾನಗೊಳ್ಳುವ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಒದಗಿಸಬೇಕು. ಅರ್ಹರಿಗೆ ಉದ್ಯೋಗಾವಕಾಶ ದೊರೆಯುವಂತೆ ನೋಡಿಕೊಳ್ಳಬೇಕು. ಕಾಮಗಾರಿಗಳ ಅನುಷ್ಠಾನದಲ್ಲಿ ಸ್ಥಳೀಯ ಜನರ ಸಹಭಾಗಿತ್ವಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಲೋಪ-ದೋಷಗಳಿಗೆ ಅವಕಾಶ ನೀಡಬೇಡಿ:

ಯೋಜನೆಯ ಅನುಷ್ಠಾನದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ, ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ನಿರ್ದೇಶಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಬಾರಿಕರ ಉಪಸ್ಥಿತರಿದ್ದರು.