ಸಾರಾಂಶ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಶಾಲಾ ವಾಹನ ಹಾಗೂ ಆಟೋ ಚಾಲಕರು ಹಾಗೂ ಮಾಲೀಕರು ಮೊದಲು ಮಕ್ಕಳ ಸುರಕ್ಷತೆಗೆ ಆದ್ಯತೆ ಕೊಡಬೇಕು. ಸಾರಿಗೆ ನಿಯಮದ ಅನ್ವಯ ಮಕ್ಕಳ ಸುರಕ್ಷತೆಗೆ ಮೊದಲು ಆದ್ಯತೆ ಕೊಡಬೇಕು ಎಂದು ಎಸ್ಪಿ ಶ್ರೀಹರಿಬಾಬು ಹೇಳಿದರು.ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಸಂಚಾರ ಸಪ್ತಾಹದ ನಿಮಿತ್ತ ಶಾಲಾ ವಾಹನ ಹಾಗೂ ಆಟೋ ಚಾಲಕರು ಮತ್ತು ಮಾಲೀಕರ ಜತೆಗೆ ಸಂವಾದ ನಡೆಸಿದ ಅವರು, ಮಕ್ಕಳ ಸುರಕ್ಷತೆಗೆ ನಾವು ಆದ್ಯತೆ ನೀಡಬೇಕು. ಒಂದು ಆಪಿ ಆಟೋದಲ್ಲಿ ಎಂಟು ಮಕ್ಕಳನ್ನು ಮಾತ್ರ ಶಾಲೆಗಳಿಗೆ ಕರೆದುಕೊಂಡು ಹೋಗಬೇಕು. ಆದರೆ, ಹೊಸಪೇಟೆಯಲ್ಲಿ ಈಗಾಗಲೇ ಗಮನಿಸಿರುವಂತೆ 10ಕ್ಕೂ ಅಧಿಕ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲಾಗುತ್ತಿದೆ. ಮಕ್ಕಳ ಸುರಕ್ಷತೆಗೆ ನಾವು ಆದ್ಯತೆ ಕೊಡಬೇಕು. ಹಾಗಾಗಿ ಆಟೋಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದರು.ಹೊಸಪೇಟೆ ಪ್ರವಾಸಿ ತಾಣವಾಗಿದೆ. ಪಕ್ಕದಲ್ಲೇ ವಿಶ್ವವಿಖ್ಯಾತ ಹಂಪಿ ಇದೆ. ಹಾಗಾಗಿ ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿ ಮಕ್ಕಳನ್ನು ಶಾಲೆಗಳಿಗೆ ಕರೆದುಕೊಂಡು ಹೋಗುವುದು ಸರಿಯಲ್ಲ ಎಂದರು.ಆಟೋ ಹಾಗೂ ವಾಹನಗಳ ಚಾಲಕರು ಮೊದಲು ತಮ್ಮ ದಾಖಲಾತಿಗಳನ್ನು ಆಯಾ ಶಾಲೆಗಳಿಗೆ ನೀಡಬೇಕು. ಈ ಶಾಲೆಗಳಿಗೆ ಆಟೋಗಳಲ್ಲಿ ಮಕ್ಕಳನ್ನು ಬಿಡುವ ಚಾಲಕರು ತಮ್ಮ ದಾಖಲಾತಿಗಳನ್ನು ಶಾಲೆಗೆ ಸಲ್ಲಿಸಬೇಕು. ಆಯಾ ಶಾಲೆಗಳಿಗೆ ಒಬ್ಬೊಬ್ಬ ಪೇದೆಗಳನ್ನು ನಿಯೋಜನೆ ಮಾಡಲಾಗುವುದು. ಸಂಚಾರ ಪೊಲೀಸರು ಎಲ್ಲ ದಾಖಲಾತಿಗಳನ್ನು ಪರಿಶೀಲನೆ ನಡೆಸಲಿದ್ದಾರೆ ಎಂದರು.
ಆಟೋ ಚಾಲಕರ ಸಂಘದ ಕೆ.ಎಂ. ಸಂತೋಷ್ ಹಾಗೂ ಬಾಬು ಮಾತನಾಡಿ, ಈಗಾಗಲೇ ಪಾಲಕರಿಂದ ಆಟೋ ಚಾಲಕರು ಅಡ್ವಾನ್ಸ್ ಆಗಿ ಹಣ ತೆಗೆದುಕೊಂಡಿರುತ್ತಾರೆ. ಹಾಗಾಗಿ ಮಾರ್ಚ್ ಅಂತ್ಯದವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಅವಕಾಶ ನೀಡಬೇಕು ಎಂದರು.ಈ ಕುರಿತು ಎಸ್ಪಿ ಶ್ರೀಹರಿಬಾಬು ಪ್ರತಿಕ್ರಿಯಿಸಿ ಡಿ. 31ರ ವರೆಗೆ ಅವಕಾಶ ನೀಡಲಾಗುವುದು. ಆ ಬಳಿಕ ಆಪೆ ಆಟೋಗಳಲ್ಲಿ ಎಂಟು ಮಕ್ಕಳನ್ನು ಮಾತ್ರ ಶಾಲೆಗೆ ಕರೆದುಕೊಂಡು ಬರಲು ಅವಕಾಶ ನೀಡಲಾಗುವುದು. ಸರಕು ಸಾಗಾಣಿಕೆ ಆಟೋಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಬಾರದು. ಕಡ್ಡಾಯವಾಗಿ ಸಾರಿಗೆ ಹಾಗೂ ಸಂಚಾರ ನಿಯಮ ಪಾಲನೆ ಮಾಡಬೇಕು ಎಂದು ತಾಕೀತು ಮಾಡಿದರು. ಸಂಚಾರ ಠಾಣೆ ಪಿಐ ಶ್ರೀನಿವಾಸ್ ಹಾಗೂ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು, ಆಟೋ ಚಾಲಕರು, ಮಾಲೀಕರು ಇದ್ದರು.