ಸಾರಾಂಶ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ತಾಕೀತು ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗ್ರಂಥಾಲಯ ನಿರ್ಮಿಸುವಾಗ ಗಾಳಿ ಮತ್ತು ಬೆಳಕಿಗೆ ಹೆಚ್ಚಿನ ಆಧ್ಯತೆ ನೀಡಬೇಕೆಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ತಾಕೀತು ಮಾಡಿದರು.ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿರುವ ನಗರ ಕೇಂದ್ರ ಗ್ರಂಥಾಲಯ ಹಾಗೂ ನಗರದ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ದಿಡೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಮಾತನಾಡಿದರು.
ಗ್ರಂಥಾಲಯದಲ್ಲಿನ ವಾಚನಾಲಯ, ನಿಯತಕಾಲಿಕೆಗಳ ಕೊಠಡಿ ಸೇರಿದಂತೆ ವಿವಿಧೆಡೆ ಭೇಟಿ ನೀಡಿ, ಓದುಗರು ಹಾಗೂ ಸ್ಪರ್ಧಾಕಾಂಕ್ಷಿಗಳೊಂದಿಗೆ ಮುಕ್ತವಾಗಿ ಮಾತನಾಡಿದರು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಸ್ಪರ್ಧಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳು ಈ ಗ್ರಂಥಾಲಯ ಉಪಯೋಗಿಸಿಕೊಂಡು ಉತ್ತಮ ಅಂಕ ಪಡೆಯುವುದರ ಜೊತೆಗೆ, ಉನ್ನತ ಹುದ್ದೆ ಅಲಂಕರಿಸುವಂತಾಗಬೇಕು ಎಂದು ತಿಳಿಸಿದರು. ತಮ್ಮ ವಿದ್ಯಾರ್ಥಿ ಜೀವನದ ಅನುಭವ ಹಂಚಿಕೊಂಡರು.ಕೆಎಂಇಆರ್‌ಸಿ ಅಡಿಯಲ್ಲಿ ಜಿಲ್ಲಾ ಮತ್ತು ನಗರ ಗ್ರಂಥಾಲಯಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ಅತೀ ಶೀಘ್ರದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ನಗರ ಕೇಂದ್ರ ಮುಖ್ಯ ಗ್ರಂಥಾಧಿಕಾರಿ ಕೊಳ್ಳಿ ಬಸವರಾಜ್ ಮಾಹಿತಿ ನೀಡಿದರು.
ಗ್ರಂಥಾಲಯದ ಅವರಣದೊಳಗೆ ಕಾಮಗಾರಿಗಳ ಅನುಷ್ಟಾನ ಮಾಡುವ ಸ್ಥಳ ಪರಿಶೀಲಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಅವರು, ಬಿಡುಗಡೆಗೊಂಡಿರುವ ಅನುದಾನವನ್ನು ಕೆಎಂಇಆರ್‌ಸಿ ನಿಯಮಾನುಸಾರ ಖರ್ಚು ಮಾಡಿ, ಕಾಮಗಾರಿಗಳ ಗುಣಮಟ್ಟ ಕಾಪಾಡಿಕೊಳ್ಳಬೇಕು ಮತ್ತು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಗ್ರಂಥಾಲಯಗಳನ್ನು ನಿರ್ಮಾಣ ಮಾಡಬೇಕು.ಗಾಳಿ ಬೆಳಕು ಸರಾಗವಾಗಿರುವಂತೆ ನೋಡಿಕೊಳ್ಳಬೇಕೆಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿಗೆ ಸೂಚಿಸಿದರು. ನಂತರ ಶೌಚಾಲಯಕ್ಕೆ ಭೇಟಿ ನೀಡಿ, ವಿಶೇಷ ಚೇತನರು ಶೌಚಾಲಯ ಬಳಸಲು ಮತ್ತು ಹೋಗಿ ಬರಲು ಜಾಗವನ್ನು ಮಾಡಿಕೊಡಿ ಎಂದು ಸಲಹೆ ನೀಡಿದರು.
ಅದೇ ರೀತಿಯಾಗಿ ಬ್ರೈಲ್ ಪುಸ್ತಕಗಳು ಮತ್ತು ಉಪಕರಣಗಳಗಳ ಬಗ್ಗೆ ಮಾಹಿತಿ ಪಡೆದರು.ತರುವಾಯ ಚಿತ್ರದುರ್ಗ ನಗರದ ಮೆದೇಹಳ್ಳಿ, ತಮಟಕಲ್ಲು ರಸ್ತೆಯಲ್ಲಿರುವ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಜಿಪಂ ಸಿಇಒ ಭೇಟಿ ನೀಡಿ ಪರಿಶೀಲಿಸಿದರು.
ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ನಿಲಯ ಪಾಲಕರೊಂದಿಗೆ ಕುಂದು ಕೊರತೆ ಆಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ನಿಲಯಕ್ಕೆ ಉತ್ತಮವಾದ ಗ್ರಂಥಾಲಯಬೇಕೆಂದು ಮನವಿ ಮಾಡಿಕೊಂಡರು. ಅಲ್ಲೇ ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಭೋಜನ ಸವಿದರು.ನಂತರ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಮಾಹಿತಿ ಪಡೆದರು. ಹಾಸ್ಟೆಲ್ ವಾರ್ಡನ್ ಮತ್ತು ವಿದ್ಯಾರ್ಥಿನಿಯರೊಂದಿಗೆ ಕುಂದು- ಕೊರತೆಗಳ ಮಾಹಿತಿ ಪಡೆದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುಬ್ರನಾಯಕ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಹಾಗೂ ನಿಲಯ ಪಾಲಕರು ಇದ್ದರು.