ಮಕ್ಕಳ ಶೈಕ್ಷಣಿಕ ಬಲವರ್ಧನೆಗೆ ಕಲಿಕೆಗೆ ಆದ್ಯತೆ: ಬಸವರಾಜಪ್ಪ

| Published : Feb 21 2025, 11:49 PM IST

ಸಾರಾಂಶ

ಶೈಕ್ಷಣಿಕ ಬಲವರ್ಧನೆಗಾಗಿ ಮಕ್ಕಳಿಗೆ ಪಠ್ಯಕ್ಕೆ ಸೀಮಿತವಾದ ಕಲಿಕೆಗೆ ಆದ್ಯತೆ ನೀಡಲಾಗಿದ್ದು ವಿಶೇಷ ಕಲಿಕಾ ಹಬ್ಬವಾಗಿ ಆಚರಿಸಲಾಗುತ್ತದೆ ಎಂದು ಶಿಕ್ಷಣ ಸಂಯೋಜಕ ಬಸವರಾಜಪ್ಪ ಅಭಿಪ್ರಾಯಪಟ್ಟರು.

ಕಲಿಕಾ ಹಬ್ಬ ಆರಂಭ

ಮಲೇಬೆನ್ನೂರು: ಶೈಕ್ಷಣಿಕ ಬಲವರ್ಧನೆಗಾಗಿ ಮಕ್ಕಳಿಗೆ ಪಠ್ಯಕ್ಕೆ ಸೀಮಿತವಾದ ಕಲಿಕೆಗೆ ಆದ್ಯತೆ ನೀಡಲಾಗಿದ್ದು ವಿಶೇಷ ಕಲಿಕಾ ಹಬ್ಬವಾಗಿ ಆಚರಿಸಲಾಗುತ್ತದೆ ಎಂದು ಶಿಕ್ಷಣ ಸಂಯೋಜಕ ಬಸವರಾಜಪ್ಪ ಅಭಿಪ್ರಾಯಪಟ್ಟರು.

ಸಮೀಪದ ಹಾಲಿವಾಣ ಎಕೆ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಲೇಬೆನ್ನೂರು ಸಮೂಹ ಸಂಪನ್ಮೂಲ ವ್ಯಾಪ್ತಿಯ ಕಲಿಕಾ ಹಬ್ಬದಲ್ಲಿ ಮಾತನಾಡಿ, ೧-೩ ತರಗತಿವರೆಗೆ ಆರು ಚಟುವಟಿಕೆಗಳು, ೪-೫ನೇ ತರಗತಿ ಏಳು ಮತ್ತು ೫-೭ ತರಗತಿಯ ಮಕ್ಕಳಿಗೆ ಏಳು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು ತಲಾ ಶಾಲೆಯಿಂದ ಇಬ್ಬರು ಮಕ್ಕಳು ಭಾಗವಹಿಸಲು ಅವಕಾಶವಿದೆ. ಆ ಮಕ್ಕಳಿಗೆ ಪ್ರತ್ಯೇಕ ಸ್ಥಳದಲ್ಲಿ ಬುನಾದಿ ಸಾಕ್ಷರತೆ ತಿಳಿಸುವ ರಸ ಪ್ರಶ್ನೆ, ಗಟ್ಟಿ ಓದು, ಕಥೆ ಹೇಳುವುದು, ಕೈ ಬರಹ, ಸಂತೋಷದ ಗಣಿತ, ನೆನಪಿನ ಶಕ್ತಿ ಮತ್ತು ಮಕ್ಕಳು ಹಾಗೂ ಪೋಷಕರ ಸಹ ಸಂಬಂಧ ಇವುಗಳ ಚಟುವಟಿಕೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಗ್ರಾಮದ ಮುಖಂಡ ಪರಮೇಶ್ವರಪ್ಪ ಮಾತನಾಡಿ, ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಏನಲ್ಲ ಎಂಬುದನ್ನು ಕಲಿಕಾ ಹಬ್ಬದಲ್ಲಿ ಸರ್ಕಾರಿ ಶಾಲಾ ಮಕ್ಕಳು ತೋರಿಸಿದ್ದಾರೆ ಎಂದರು.

ಸಂಜೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು, ಕಲಾವಿದ ಮಂಜುನಾಥ್ ವಿವಿಧ ಚಲನಚಿತ್ರ ನಟರ ಮಿಮಿಕ್ರಿ ಮಾಡಿ ಮಕ್ಕಳನ್ನು ರಂಜಿಸಿದರು. ಕರಿಯಮ್ಮದೇವಿ ದೇವಾಲಯದಿಂದ ಎತ್ತಿನ ಗಾಡಿ ಮೂಲಕ ಪುರ್ಣಕುಂಭ ಹೊತ್ತ ವಿದ್ಯಾರ್ಥಿಗಳ ಮೆರವಣಿಗೆ ಶಾಲೆಗೆ ಕರೆತರಲಾಯಿತು. ಕಲಿಕಾ ಹಬ್ಬದ ಕಾರಣ ಶಾಲೆಯನ್ನು ಬಹಳ ಸಿಂಗರಿಸಲಾಗಿತ್ತು.

ವಿವಿಧ ಸಂಘಟನೆಗಳ ಶಿಕ್ಷಕರಾದ ಚಂದ್ರಪ್ಪ, ಶರಣ್‌ಹೆಗಡೆ, ಆರ್ ಮಠ, ಕರಿಸಬಪ್ಪ ಬಸಲಿ, ಮಲ್ಲಿಕಾರ್ಜುನ್, ಜ್ಯೋತಿ, ಸುಧಾ, ಮಂಜುಶ್ರೀ,ನೇತ್ರಾವತಿ,ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ, ಮುಖ್ಯ ಶಿಕ್ಷಕಿ ಸುನೀತಾ, ಯುವಕ ಚಿದಾನಂದ, ಹಾಗೂ ಮಲೇಬೆನ್ನೂರು, ಕೊಪ್ಪ, ಕೊಮಾರನಹಳ್ಳಿ, ಹಾಲಿವಾಣ ಗ್ರಾಮಗಳ ಮಕ್ಕಳು, ಶಿಕ್ಷಕರು, ಪೋಷಕರು ಇದ್ದರು,