ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ತಮ್ಮ ಸರ್ಕಾರ ಬದ್ಧವಾಗಿದ್ದು, ದಾವಣಗೆರೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯೇ ತಮ್ಮ ಮೊದಲ ಆದ್ಯತೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ತಮ್ಮ ಸರ್ಕಾರ ಬದ್ಧವಾಗಿದ್ದು, ದಾವಣಗೆರೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯೇ ತಮ್ಮ ಮೊದಲ ಆದ್ಯತೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಹೇಳಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅಭಿವೃದ್ಧಿಯ ಪಥದಲ್ಲಿ ದಾವಣಗೆರೆ ಜಿಲ್ಲೆಯ ಸಾಗಿದ್ದು, ಪಂಚ ಗ್ಯಾರಂಟಿ ಮೂಲಕ ಸಾಮಾಜಿಕ ನ್ಯಾಯಕ್ಕೂ ತಮ್ಮ ಸರ್ಕಾರ ಬದ್ಧವಿದೆ ಎಂದರು.

ಆಂಗ್ಲರ ಗುಲಾಮಗಿರಿಯಿಂದ 1947ರಲ್ಲಿ ಸ್ವತಂತ್ರವಾದ ನಮ್ಮ ದೇಶವು 1950ರ ಜ.26ರಲ್ಲಿ ಸಂವಿಧಾನ ಜಾರಿಗೆ ತಂದಿತು. ಈ ಮೂಲಕ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮುನ್ನಡೆಯುತ್ತಿದೆ. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನವು ನಮಗೆ ಸ್ವಾತಂತ್ರ್ಯ, ಸಮಾನತೆ, ನ್ಯಾಯ ನೀಡಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ಆಸರೆಯಾಗಿದೆ. ಜಿಲ್ಲೆಯಲ್ಲಿ ಶಕ್ತಿ ಯೋಜನೆಯಲ್ಲಿ 12.30 ಕೋಟಿ ಮಹಿಳೆಯರು ಈವರೆಗೆ ಪ್ರಯಾಣಿಸಿದ್ದು, ಇದರ ಟಿಕೆಟ್ ವೆಚ್ಚ 361.67 ಕೋಟಿ ರು.ಗಳನ್ನು ಸರ್ಕಾರ ಭರಿಸಿದೆ. ಗೃಹಲಕ್ಷ್ಮಿಯಲ್ಲಿ 3.74 ಲಕ್ಷ ಮನೆ ಯಜಮಾನಿಯರ ಖಾತೆಗೆ ಮಾಸಿಕ 2 ಸಾವಿರ ರು.ನಂತೆ ಒಟ್ಟು 1690 ಕೋಟಿ ರು. ಜಮಾ ಮಾಡಿದೆ. ಅನ್ನ ಭಾಗ್ಯದಡಿ 13.95 ಲಕ್ಷ ಫಲಾನುಭವಿಗಳು ಲಾಭ ಪಡೆಯುತ್ತಿದ್ದು, ಕಳೆದ ಫೆಬ್ರುವರಿಯಿಂದ ನಗದು ಬದಲು ಅಕ್ಕಿ ನೀಡಲಾಗುತ್ತಿದೆ ಎಂದು ವಿವರಿಸಿದರು.

​ಗೃಹಜ್ಯೋತಿಯಡಿ 4.62 ಲಕ್ಷ ಕುಟುಂಬ 200 ಯುನಿಟ್‌ವರೆಗೆ ಸಬ್ಸಿಡಿ ಪಡೆಯುತ್ತಿವೆ. ​ಯುವನಿಧಿಯಡಿ 9,858 ಪದವೀಧರರಿಗೆ 28.63 ಕೋಟಿ ರು., ಡಿಪ್ಲೊಮಾ ಪದವೀಧರರಿಗೆ 23.29 ಲಕ್ಷ ರು. ನಿರುದ್ಯೋಗ ಭತ್ಯೆ ನೀಡಲಾಗಿದೆ. ಜಿಲ್ಲೆಯ 1.30 ಲಕ್ಷ ಭೂ ದಾಖಲೆಗಳ ಡಿಜಿಟಲೀಕರಣ ಮಾಡಿದ್ದು, ಈ ಮೂಲಕ ಕಂದಾಯ ಕ್ರಾಂತಿ ಮಾಡಲಾಗಿದೆ. ಹಾವೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ 10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. ಜಿಲ್ಲೆಯ 62 ಗ್ರಾಮಗಳು 24*7 ನೀರು ಪೂರೈಕೆ ಗ್ರಾಮಗಳೆಂದು ಘೋಷಿಸಲ್ಪಟ್ಟಿವೆ ಎಂದು ಮಾಹಿತಿ ನೀಡಿದರು .

ದಾವಣಗೆರೆ ಜಿಲ್ಲಾ ಕೇಂದ್ರದ ಎಲ್ಲಾ ಭಾಗಕ್ಕೂ 2026ರ ಏಪ್ರಿಲ್ ಒಳಗಾಗಿ ನಿರಂತರ ನೀರೊದಗಿಸಲಾಗುವುದು. ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಕೈಗೊಂಡ ವೈಜ್ಞಾನಿಕ ಕ್ರಮಗಳಿಂದ ದಾವಣಗೆರೆಗೆ ರಾಜ್ಯ ಮಟ್ಟದ ‘ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ’ ಲಭಿಸಿದೆ. ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ‘ಐ.ಟಿ. ಹಬ್’ ಮೂಲಕ ಪ್ರತಿಷ್ಠಿತ ಕಂಪನಿಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ಅಧ್ಯಕ್ಷರಾಗಿ ಸಾಕಷ್ಟು ಜನರ ಸೇವೆ ಮಾಡಿದ ದಾವಣಗೆರೆಯ ಡಾ.ಸುರೇಶ ಹನಗವಾಡಿಯವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು ಇದು ಜಿಲ್ಲೆಯ ಹೆಮ್ಮೆ ವಿಷಯವಾಗಿದೆ, ಇವರಿಗೆ ಸರ್ಕಾರದಿಂದ ಅಭಿನಂದನೆ ಸಲ್ಲಿಸುತ್ತೇನೆ. ತಮ್ಮ ಬಾಪೂಜಿ ವಿದ್ಯಾಸಂಸ್ಥೆಯಲ್ಲೇ ವೈದ್ಯಕೀಯ ಶಿಕ್ಷಣ ಪಡೆದ ಒಟ್ಟು ಇಬ್ಬರಿಗೆ ಪದ್ಮಶ್ರೀ, ಪದ್ಮವಿಭೂಷಣ ಸಿಕ್ಕಂತಾಗಿದೆ. ಇನ್ನೊಬ್ಬರು ತಮಿಳುನಾಡು ಮೂಲದವರು. ಇದು ನಾವೆಲ್ಲರೂ ಹೆಮ್ಮೆಪಡುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ, ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಜಿಪಂ ಸಿಇಓ ಗಿತ್ತೆ ಮಾಧವ ವಿಠ್ಠಲರಾವ್, ಮಾಜಿ ಮೇಯರ್ ಕೆ.ಚಮನ್ ಸಾಬ್‌, ಎ.ನಾಗರಾಜ, ಡಿ.ಬಸವರಾಜ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸ್ವಾತಂತ್ರ್ಯ ಯೋಧರು ಇದ್ದರು. ಇದೇ ವೇಳೆ ಪಥಸಂಚಲನ, ರಾಷ್ಟ್ರಭಕ್ತಿ ಸಾರುವ ನೃತ್ಯ ರೂಪಕಗಳು ಗಮನ ಸೆಳೆದವು.

ಪಥಸಂಚಲನದ ತಂಡ, ತಂಡದ ಮುಖ್ಯಸ್ಥರು

ಡಿಎಆರ್ ಪೋಲೀಸ್ ತಂಡ ಮಹೇಶ್ ಪಾಟೀಲ್, ಆರ್‌ಎಸ್‌ಐ, ಡಿಎಆ‌ರ್ ದಾವಣಗೆರೆ,

ನಗರ ಉಪ ವಿಭಾಗ ಪೋಲೀಸ್ ತಂಡ ಸಚಿನ್ ಬಿರಾದಾರ್, ಪಿಎಸ್‌ಐ, ಆರ್‌ಎಂಸಿ ಠಾಣೆ,

ಗೃಹ ರಕ್ಷಕ ದಳ ಆರ್.ತಿಪ್ಪೇಸ್ವಾಮಿ, ಪ್ಲಟೂನ್ ಕಮಾಂಡರ್, ಅರಣ್ಯ ರಕ್ಷಕ ದಳ ಚೇತನ್, ಜಿಲ್ಲಾ ಅಗ್ನಿಶಾಮಕ ದಳ. ಖಾಸಿಂ ಸಾಬ್.

ಎನ್‌ಸಿಸಿ ವಿಭಾಗ:

ಡಿಆರ್‌ಎಂ ಕಾಲೇಜ್ ತಂಡ ಅಭಿಷೇಕ್, ಎಆರ್‌ಜಿ ಕಾಲೇಜ್ ತಂಡ ಲೋಕೇಶ, ಜಿ ಎಫ್ ಜಿ ಸಮೀರ್, ಡಿಆರ್‌ಆರ್ ಗಣೇಶ, ಎವಿಕೆ(ಎನ್‌ಸಿಸಿ ಕಾಲೇಜು ವಿಭಾಗ) ಕುಮಾರಿ ಪಲ್ಲವಿ ಶಾಂತ ಕುಮಾರ, ಜಿಎಂಐಟಿ ಕಾಲೇಜ್ ತಂಡ ಯಶ್ ರಾಜ್ ಶಿಂಧೆ, ಸೇಂಟ್ ಪೌಲ್ ಸ್ಕೂಲ್ ಹೈಸ್ಕೂಲ್ ವಿಭಾಗ ಕುಮಾರಿ ಸಾಚಿ ಪಿ ಕೊಲ್ವಿಕಾರ್, ಪ್ಲಟೂನ್ ಕಮಾಂಡರ್, ಎಸ್‌ಟಿಜೆ(ತರಳ ಬಾಳು) ತಂಡ ಮಂಜುನಾಥ, ಭಾರತ ಸೇವಾದಳ ಆರ್‌ಎಂಎಸ್‌ಎ ನಿಟ್ಟುವಳ್ಳಿ ಕುಮಾರಿ ಬಿಂಧು, ಪ್ಲಟೂನ್ ಕಮಾಂಡರ್ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಡಿಸ್ಟ್ರಿಕ್ ಟ್ರೂಪ್ ಗರ್ಲ್ಸ್ ಕುಮಾರಿ ಪ್ರಿಯಾ, ಎಸ್‌ಎಸ್‌ಎನ್‌ಪಿಎಸ್ ಶಾಲೆ(ಸೌಟ್ಸ್ ಮತ್ತು ಗೈಡ್ಸ್) ತನುಶ್ರೀ, ಜೈನ್ ಪಬ್ಲಿಕ್ ಸ್ಕೂಲ್ ಕುಮಾರಿ ನಿಧಿ, ಬಾಪೂಜಿ ಹೈಯರ್ ಪ್ರೈಮರಿ ಸ್ಕೂಲ್ ಕುಮಾರಿ ಸಂಜನಾ, ರಾಷ್ಟೋತ್ಥಾನ ಪ್ರೌಢಶಾಲೆ ಕುಮಾರಿ ಜನತಾ ರಜಪೂತ, ಶ್ರೀ ಮೌನೇಶ್ವರ ಕಿವುಡ ಮತ್ತು ಮೂಗರ ಶಾಲೆ ಕುಮಾರಿ ಪಿ.ಎಂ.ಸಂಜನಾ, ಜವಾಹರ ನವೋದಯ ವಿದ್ಯಾಲಯ ಪವನ್, ಜಿಲ್ಲಾ ಪೊಲೀಸ್ ವಾದ್ಯ ತಂಡ ಹೊನ್ನೂರಪ್ಪ, ಬ್ಯಾಂಡ್ ಮಾಸ್ಟರ್ ಡಿಎಆರ್ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಸಿಕೊಟ್ಟರು.

ಪಥಸಂಚಲನ ವಿಜೇತರು:

ಮೊದಲನೇ ಬಹುಮಾನ ಜಿಎಂಐಟಿ ಕಾಲೇಜು

ದ್ವಿತೀಯ ಬಹುಮಾನ ಡಿಆರ್‌ಎಂ ಶಾಲೆ

ತೃತೀಯ ಬಹುಮಾನ ಸೇಂಟ್ ಪೌಲ್ ಶಾಲೆ

ಶಾಲಾ ವಿಭಾಗ:

ಮೊದಲನೇ ಬಹುಮಾನ ಜೈನ್ ಪಬ್ಲಿಕ್ ಶಾಲೆ

ದ್ವಿತೀಯ ಬಹುಮಾನ ರಾಷ್ಟ್ರೋತ್ಥಾನ ಶಾಲೆ

ತೃತೀಯ ಬಹುಮಾನ ಜವಹರ್ ನವೋದಯ ಶಾಲೆ

ಸಾಂಸ್ಕೃತಿಕ ಕಾರ್ಯಕ್ರಮದ ವಿಜೇತರು:

ಅಬ್ದುಲ್ ಕಲಾಂ ಅಲ್ಪಸಂಖ್ಯಾತರ ಶಾಲೆ, ಬಿಡಿ ಲೇಔಟ್

ಸರ್ಕಾರಿ ಸೀತಮ್ಮ ಪ್ರೌಢಶಾಲೆ, ದಾವಣಗೆರೆ

ಮಿಲ್ಲತ್ ಪ್ರೌಢಶಾಲೆ, ದಾವಣಗೆರೆ