ರಾಮನಗರ: ನಗರ ಮತ್ತು ಗ್ರಾಮೀಣ ಪ್ರದೇಶಗಳ ವೃತ್ತಗಳಲ್ಲಿ ಹೈಮಾಸ್ಟ್ ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ಅನುಕೂಲವಾಗುವಂತೆ ಸಮುದಾಯ ಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು

ರಾಮನಗರ: ನಗರ ಮತ್ತು ಗ್ರಾಮೀಣ ಪ್ರದೇಶಗಳ ವೃತ್ತಗಳಲ್ಲಿ ಹೈಮಾಸ್ಟ್ ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ಅನುಕೂಲವಾಗುವಂತೆ ಸಮುದಾಯ ಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.

ತಾಲೂಕಿನ ಕಸಬಾ ಹೋಬಳಿ ಸುಗ್ಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿ 50 ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡುವುದು ಪ್ರಮುಖ ಧ್ಯೇಯವಾಗಿದೆ. ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಅಗತ್ಯ ಮೂಲಸೌಕರ್ಯಗಳು ದೊರಕುವಂತೆ ನೋಡಿಕೊಳ್ಳಲಾಗುವುದು ಎಂದರು.

ಗ್ರಾಮಗಳಲ್ಲಿ ರಸ್ತೆ, ಚರಂಡಿ ಮತ್ತಿತರ ಮೂಲ ಸೌಕರ್ಯ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನನ್ನ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡಿದ್ದಾರೆ. ಆ ಅನುದಾನದಲ್ಲಿ ಆದ್ಯತೆ ಮೇರೆಗೆ ಜನರ ಅನುಕೂಲವಾಗುವಂತಹ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಹಾಗಲಹಳ್ಳಿ ಗ್ರಾಮದ ಶಾಲಾ ಕಟ್ಟಡ 15 ಲಕ್ಷ, ಬಸ್ ನಿಲ್ದಾಣ 5 ಲಕ್ಷ, ರಾಂಪುರ ಸಮುದಾಯ ಭವನಕ್ಕೆ 50 ಲಕ್ಷ, ಕಟ್ಟಮಾನದೊಡ್ಡಿ ಸಮುದಾಯ ಭವನಕ್ಕೆ 50 ಲಕ್ಷ, ಲಕ್ಕನದೊಡ್ಡಿ ಗ್ರಾಮದಲ್ಲಿ ಕ್ರೈಸ್ ಕಾಲೇಜು ವಸತಿ ಶಾಲಾ ಕಟ್ಟಡಕ್ಕೆ 22 ಕೋಟಿ ವೆಚ್ಚದ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಇದೇ ವೇಳೆ ಮನಮಾನಹಳ್ಳಿ ಗ್ರಾಮಸ್ಥರು ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆಯಡಿ ಬೆಜ್ಜರಹಳ್ಳಿಕಟ್ಟೆವರೆಗೆ ಪೈಪ್ ಲೈನ್ ಅಳವಡಿಸಿದ್ದು, ಅದನ್ನು ವಿಸ್ತರಣೆ ಮಾಡಿ ಮನಮಾನಹಳ್ಳಿ ಕೆರೆಗೆ ನೀರು ತುಂಬಿಸಲು ಕ್ರಮ ವಹಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಶಾಸಕರು ಈ ವಿಷಯವಾಗಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮಾಜಿ‌ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಚಿತ್ರನಟ ಸಾಧುಕೋಕಿಲ, ಗ್ಯಾರಂಟಿ‌ ಯೋಜನೆಗಳ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ಸುಗ್ಗನಹಳ್ಳಿ ಗ್ರಾಪಂ ಮಾಜಿ‌ ಉಪಾಧ್ಯಕ್ಷರಾದ ರಾಂಪುರ ಗೋವಿಂದರಾಜು, ಚಿಕ್ಕಸ್ವಾಮಿ, ಕೆಡಿಪಿ ಸದಸ್ಯ ಮುಕುಂದ, ಮುಖಂಡರಾದ ಸಿ.ರಾಮಯ್ಯ, ಹಾಗಲಹಳ್ಳಿ ವಾಸು, ಗೋವಿಂದು, ಉಮಾಶಂಕರ್, ಕಗ್ಗಲ್ಲಯ್ಯ, ವಸಂತ, ಉಮೇಶ್, ಅರುಣ್, ದೊಡ್ಡಯ್ಯ ಮತ್ತಿತರರು ಹಾಜರಿದ್ದರು.

23ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ತಾಲೂಕಿನ ರಾಂಪುರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಇಕ್ಬಾಲ್ ಹುಸೇನ್ ಭೂಮಿಪೂಜೆ ನೆರವೇರಿಸಿದರು.