ಗ್ರಾಮ ಸಡಕ್‌ ಯೋಜನೆಯಡಿ ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ

| Published : Oct 26 2023, 01:00 AM IST / Updated: Oct 26 2023, 01:01 AM IST

ಗ್ರಾಮ ಸಡಕ್‌ ಯೋಜನೆಯಡಿ ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

₹3.96 ಕೋಟಿ ಅನುದಾನ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಕೋಟ್ಯಂತರ ಅನುದಾನ ಹರಿದು ಬರುತ್ತಿದೆ. ಈ ಅನುದಾನದಲ್ಲಿ ರಸ್ತೆ ಮತ್ತು ಸೇತುವೆಗಳ ನಿರ್ಮಿಸುವ ಮೂಲಕ ಸಂಪರ್ಕ ವ್ಯವಸ್ಥೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು. ತಾಲೂಕಿನ ಹೆದ್ದೂರಿನ ಸಮೀಪ ಬುಧವಾರ ಮುಂಡವಳ್ಳಿ- ಮೃಗವಧೆ ಸಂಪರ್ಕದ ನೇರಲಮನೆ ಹಳ್ಳದ ಸೇತುವೆ ನಿರ್ಮಾಣಕ್ಕೆ ಗ್ರಾಮ ಸಡಕ್ ಯೋಜನೆಯಡಿ ಮಂಜೂರಾದ ₹3.96 ಕೋಟಿ ಅನುದಾನದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಯೋಜನೆಯಲ್ಲಿ ಶಿವಮೊಗ್ಗ ವಿಭಾಗಕ್ಕೆ ಮಂಜೂರಾಗಿರುವ ₹12.21 ಕೋಟಿ ಅನುದಾನದಲ್ಲಿ ಈ ದಿನ ಗ್ರಾಮೀಣ ಪ್ರದೇಶದ 4 ಸೇತುವೆಗಳಿಗೆ ಚಾಲನೆ ನೀಡುತ್ತಿದ್ದೇವೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿ ಮಾತ್ರವಲ್ಲದೇ, ಗ್ರಾಮೀಣ ರಸ್ತೆಗಳಿಗೂ ಆದ್ಯತೆ ನೀಡುವ ಅಗತ್ಯವಿದೆ. ಮಲೆನಾಡು ಭಾಗದ ಜನತೆಗೆ ಶಿವಮೊಗ್ಗದ ವಿಮಾನ ನಿಲ್ದಾಣದ ಮೂಲಕ ವಿಮಾನಯಾನ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ ಎಂದರು. ಈ ಮೊದಲು ಕೇಂದ್ರದಿಂದ ಲಕ್ಷ ರು. ತರೋದು ಸುಲಭವಾಗಿರಲಿಲ್ಲ. ನಮ್ಮ ಸರ್ಕಾರ ತೆರಿಗೆ ಸೋರಿಕೆ ತಡೆದು ಅಭಿವೃದ್ದಿಗೆ ಆದ್ಯತೆ ನೀಡುತ್ತಿದ್ದು, ಕೋಟಿ ಕೋಟಿ ಹಣ ಮಂಜೂರಾಗುತ್ತಿದೆ. ಈ ತಾಲೂಕಿನ 49 ಸಮುದಾಯ ಭವನಗಳಿಗೆ ₹19 ಕೋಟಿ ಮಂಜೂರಾಗಿದೆ. ದೂರವಾಣಿ ಸಂಪರ್ಕ ಅಭಿವೃದ್ಧಿಪಡಿಸಲು ಕ್ಷೇತ್ರ ವ್ಯಾಪ್ತಿಯಲ್ಲಿ 262 ಬಿಎಸ್‍ಎನ್‍ಎಲ್ ಟವರ್‌ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ನೇರಲಮನೆ ಹಳ್ಳದ ಸೇತುವೆಗೆ ಮಳೆಗಾಲದ ಹೊರ ಜಗತ್ತಿನ ಸಂಪರ್ಕವನ್ನೇ ಕಡಿದುಕೊಳ್ಳುತ್ತಿದ್ದ ಈ ಭಾಗದ ಜನತೆಯ ದಶಕಗಳ ಬೇಡಿಕೆಯಾಗಿದೆ. ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದಲ್ಲಿ ಅನುದಾನ ಮಂಜೂರಾಗಿದೆ. ಮುಂಬರುವ ಮಳೆಗಾಲಕ್ಕೆ ಮುನ್ನ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಬಿಸಿ ಜನರಿಗೆ ಈಗ ತಾಗುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದು 5 ತಿಂಗಳು ಕಳೆದಿದ್ದರೂ ಈವರೆಗೆ ಗುತ್ತಿಗೆದಾರರ ಹಣವನ್ನು ಬಿಡುಗಡೆ ಮಾಡಿಲ್ಲ. ಈ ಹಿಂದಿನ ಸರ್ಕಾರ ಬಜೆಟ್ಟಿನಲ್ಲಿ ಎಲೆಚುಕ್ಕಿ ರೋಗದ ಸಲುವಾಗಿ ಇಟ್ಟಿದ್ದ ₹10 ಕೋಟಿ ಅನುದಾನವನ್ನು ಈ ಸರ್ಕಾರ ರದ್ದು ಮಾಡಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದರು. ಹೆದ್ದೂರು ಗ್ರಾಪಂ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷೆ ಸುಚಲಾ, ಚಂದ್ರಶೇಕರ್, ಹೆದ್ದೂರು ನವೀನ್, ಬೇಗುವಳ್ಳಿ ಸತೀಶ್, ಆರ್.ಮದನ್, ಬೇಗುವಳ್ಳಿ ಕವಿರಾಜ್ ಇದ್ದರು. - - - -25ಟಿಟಿಎಚ್01: ಹೆದ್ದೂರಿನ ಸಮೀಪ ಮುಂಡವಳ್ಳಿ- ಮೃಗವಧೆ ಸಂಪರ್ಕದ ₹3.96 ಕೋಟಿ ಅನುದಾನದ ನೇರಲಮನೆ ಹಳ್ಳದ ಸೇತುವೆ ನಿರ್ಮಾಣಕ್ಕೆ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಶಂಕುಸ್ಥಾಪನೆ ನೆರವೇರಿಸಿದರು.