ಗಡಿಗ್ರಾಮಗಳ ಅಭಿವೃದ್ಧಿಗೆ ಆದ್ಯತೆ: ಉಮೇಶ್ ಕಾರಜೋಳ

| Published : Apr 18 2024, 02:26 AM IST

ಗಡಿಗ್ರಾಮಗಳ ಅಭಿವೃದ್ಧಿಗೆ ಆದ್ಯತೆ: ಉಮೇಶ್ ಕಾರಜೋಳ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯೂರು ತಾಲೂಕಿನ ಬಿಕೆ ಹಟ್ಟಿ, ಕೋಡಿಹಳ್ಳಿ, ಹರಿಯಬ್ಬೆ ಮುಂತಾದ ಗ್ರಾಮಗಳಲ್ಲಿ ಉಮೇಶ್ ಕಾರಜೋಳ ಮತಯಾಚನೆ ಮಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಆಂಧ್ರ ಗಡಿಭಾಗದ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಭರವಸೆ ನೀಡಿದರು.

ತಾಲೂಕಿನ ಬಿಕೆ ಹಟ್ಟಿ ಗ್ರಾಮದಲ್ಲಿ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ನಡೆದ ಶ್ರೀ ರಂಗನಾಥ ಸ್ವಾಮಿಯ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದ ಬಳಿಕ ಮತಯಾಚನೆ ಮಾಡಿ ಮಾತನಾಡಿದರು.

ನೂರಾರು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಧರ್ಮಪುರ ಕೆರೆಗೆ ನೀರು ಹರಿಸುವ ಯೋಜನೆ ನನ್ನ ತಂದೆ ಕೈಗೆತ್ತಿಕೊಂಡು ಈ ಭಾಗದ ಜನರ ಕನಸು ನನಸು ಮಾಡಿದ್ದಾರೆ. ಧರ್ಮಪುರ ಕೆರೆಗೆ ನೀರು ಬರಲು ಆಗ ಜಲಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳರ ಶ್ರಮವೂ ಕಾರಣವಾಗಿದೆ. ಹಾಗಾಗಿ ಮತ್ತೊಮ್ಮೆ ಅವರನ್ನು ಅತ್ಯಧಿಕ ಮತಗಳಿಂದ ಜಯಶೀಲರನ್ನಾಗಿ ಮಾಡಬೇಕು ಎಂದರು.

ದೇಶದಲ್ಲಿ ಮೂರನೇ ಬಾರಿಗೆ ಎನ್‌ಡಿಎ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ. ವಿಕಸಿತ ಭಾರತ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಲು ಮೈತ್ರಿ ಅಭ್ಯರ್ಥಿಗೆ ಅವಕಾಶ ಮಾಡಿ ಕೊಡುವ ಅವಶ್ಯಕತೆ ಇದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆ ಪೂರೈಸಿರುವುದೇ ದೊಡ್ಡ ಸಾಧನೆ ಎನ್ನುತ್ತಿದೆ. ಹೋದ ಕಡೆಯಲ್ಲೆಲ್ಲ ಅಕ್ಕಿ ಕೊಟ್ಟೆ, ಎರಡು ಸಾವಿರ ದುಡ್ಡು ಕೊಟ್ಟೆ,‌ ಕರೆಂಟ್ ಕೊಟ್ಟೆ, ಹೆಣ್ಣು ಮಕ್ಕಳಿಗೆ ಬಸ್ ಪ್ರೀ ಕೊಟ್ಟೆ ಎನ್ನುವುದು ಬಿಟ್ಟರೆ ಅವರಿಗೆ ಬೇರೆ ಏನು ಗೊತ್ತಿಲ್ಲ. ರಾಜ್ಯದಲ್ಲಿ ಮಳೆ ಇಲ್ಲದೆ ಬರ ತಾಂಡವವಾಡುತ್ತಿದೆ. ಹಿರಿಯೂರು ತಾಲೂಕಿನಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರು ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸೋಲುವ ಕುದುರೆಗೆ ಯಾಕೆ ಮತ ಹಾಕಿ ನಿಮ್ಮ ಅಮೂಲ್ಯ ಮತ ವ್ಯರ್ಥ ಮಾಡಿಕೊಳ್ಳಬೇಡಿ. ಗೆಲ್ಲುವ ಕುದುರೆ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಮತ ನೀಡಿ ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶ ಮಾಡಿ ಕೊಡಿ ಎಂದರು.

ಕೋಡಿಹಳ್ಳಿ, ಹರಿಯಬ್ಬೆ, ಸೇರಿದಂತೆ ವಿವಿಧ ಭಾಗಗಳಲ್ಲೂ ತಂದೆ ಗೋವಿಂದ ಕಾರಜೋಳ ಪರವಾಗಿ ಉಮೇಶ್ ಕಾರಜೋಳ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ರವಿಕುಮಾರ್, ಪುನೀತ್, ರಂಗಸ್ವಾಮಿ, ಶಿವು, ಆದರ್ಶ ಯಾದವ್, ವಿನೋದ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.