ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಚುನಾವಣೆ ಸಂದರ್ಭದಲ್ಲಿ ತಮಗೆಲ್ಲರಿಗೂ ನೀಡಿರುವ ಭರವಸೆಗಳನ್ನು ಈಗ ನಾನು ಹಂತ ಹಂತವಾಗಿ ಈಡೇರಿಸುತ್ತಿದ್ದೇನೆ, ಮುಧೋಳ ನಗರದ ಸರ್ವಾಂಗೀಣ ಅಭಿವದ್ಧಿಗೆ ಪ್ರಥಮ ಆದ್ಯತೆ ನೀಡುತ್ತಿದ್ದೇನೆ, ನಗರದ ಜನತೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜೊತೆಗೆ ಇತರೆ ಸೌಕರ್ಯ ಮತ್ತು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಿರಂತರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.2023-24ನೇ ಸಾಲಿನ ಜಿಲ್ಲಾ ಗಣಿಬಾದಿತ ಪ್ರದೇಶಾಭಿವೃದ್ಧಿ ಯೋಜನೆ ₹1 ಕೋಟಿ ಅನುದಾನಡಿಯಲ್ಲಿ ನಗರದ ರನ್ನ ಕ್ರೀಡಾಂಗಣದ ಆವರಣದಲ್ಲಿ ಮಂಗಳವಾರ ಬೆಳಗ್ಗೆ ರನ್ನಿಂಗ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, 1989ರಲ್ಲಿ ಪ್ರಥಮ ಬಾರಿಗೆ ಶಾಸಕನಾದ ಸಂದರ್ಭದಲ್ಲಿ ರನ್ನ ಕ್ರೀಡಾಂಗಣ, ನ್ಯಾಯಾಲಯದ ಕಟ್ಟಡ, ಬಸ್ ಡಿಪೋ, ರನ್ನ ಭವನ, ರನ್ನ ಶುಗರ್ಸ್ ಆರಂಭಿಸಲು ಚಾಲನೆ ನೀಡಿದ್ದೇನೆ, ₹5 ಕೋಟಿ ಅನುದಾನದಲ್ಲಿ ನಗರಸಭೆ ವ್ಯಾಪ್ತಿಯ ಗಾರ್ಡನ್ ಸುಧಾರಿಸುವುದು, ₹6 ರಿಂದ 7 ಕೋಟಿ ಅನುದಾನದಲ್ಲಿ ನಗರದ ಎಲ್ಲ ಶೌಚಾಲಯ ಹೈಟಿಕ್ ಶೌಚಾಲಯಗಳನ್ನಾಗಿ ಮಾಡಲಾಗುವುದು,
ನಗರದ ನಾಲ್ಕು ಭಾಗಗಳಲ್ಲಿ ಪ್ರತ್ಯೇಕ ಸ್ಮಶಾನಗಳನ್ನು ಅಲ್ಲದೆ ವಿದ್ಯುತ್ ಶವಾಗಾರ ಮಾಡಲಾಗುವುದು, ರನ್ನ ಕ್ರೀಡಾಂಗಣದ ಒಳಾಂಗಣದಲ್ಲಿ ಟೆನಿಸ್ ಮತ್ತು ಕುಸ್ತಿ ಮ್ಯಾಟ್ ಮಾಡಲಾಗುವುದು, ಹೀಗೆ ಹತ್ತಾರು ಯೋಜನೆ ಮಾಡುವ ಉದ್ದೇಶ ತಮ್ಮದಾಗಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ತಮಗೆ ಸೂಕ್ತ ಸಲಹೆ ಸೂಚನೆ ನೀಡುವಂತೆ ಕೋರಿದರು.ಡಾ.ಶಿವಾನಂದ ಕುಬಸದ ಮಾತನಾಡಿ, ರನ್ನಿಂಗ್ ಟ್ರ್ಯಾಕ್ ಮಾಡಿರುವುದಕ್ಕೆ ಧನ್ಯವಾದ ತಿಳಿಸಿ, ಸ್ವಿಮಿಂಗ್ ಫೂಲ್ ಮಾಡುವಂತೆ ಸಚಿವರನ್ನು ವಿನಂತಿಸಿದರು, ವೆಂಕಣ್ಣ ಗಿಡಪ್ಪನವರ ಸಾಂದರ್ಭಿಕ ವಾಗಿ ಮಾತನಾಡಿ ಸಚಿವರ ಅಭಿವೃದ್ಧಿ ಕೆಲಸ ಮೆಚ್ಚಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಮೈಸೂರು ದಸರಾ ವೈಭವದಲ್ಲಿ ಭಾಗವಹಿಸಿ ಬಹುಮಾನ ತಂದಿದ್ದ ಬಾಲ ಕುಸ್ತಿಪಟುಗಳನ್ನು ಸಚಿವರು ಅಭಿನಂದಿಸಿ, ಛಾಯಾಚಿತ್ರ ತೆಗೆಯಿಸಿಕೊಂಡು ಪ್ರೊತ್ಸಾಹಿಸಿ, ಬೆಂಬಲಿಸಿದರು.ಅಶೋಕ ಕಿವಡಿ, ಡಾ.ಎಸ್.ಎಂ.ಕುಬಸದ, ಗೋವಿಂದಪ್ಪ ಗುಜ್ಜನ್ನವರ, ಮುದಕನ್ನ ಅಂಬಿಗೇರ, ಪರಮಾನಂದ ಕುಟ್ರಟ್ಟಿ, ಎಸ್.ಪಿ.ದಾನಪ್ಪಗೋಳ, ಚಿನ್ನು ಅಂಬಿ, ರಾಘು ಮೋಕಾಸಿ, ನಾರಾಯಣ ಹವಾಲ್ದಾರ್, ಕಲ್ಮೇಶ ಪಂಚಗಾಂವಿ, ಸಂಜು ನಾಯಿಕ, ರಾಜು ಬಾಗವಾನ, ಸದೂಗೌಡ ಪಾಟೀಲ, ರಾಜೂಗೌಡ ಪಾಟೀಲ, ಮಹಾಂತೇಶ ಮಾಚಕನೂರ, ರಾಜೂಗೌಡ ನ್ಯಾಮಗೌಡ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.