ಪುನರ್‌ವಸತಿ ಕೇಂದ್ರಗಳ ಅಭಿವೃದ್ಧಿಗೆ ಆದ್ಯತೆ: ಶಾಸಕ ಜೆ.ಟಿ.ಪಾಟೀಲ

| Published : Jan 03 2025, 12:30 AM IST

ಪುನರ್‌ವಸತಿ ಕೇಂದ್ರಗಳ ಅಭಿವೃದ್ಧಿಗೆ ಆದ್ಯತೆ: ಶಾಸಕ ಜೆ.ಟಿ.ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಪುನರ್‌ವಸತಿ ಕೇಂದ್ರಗಳ ಅಭಿವೃದ್ಧಿಗೆ ಬೇಕಿರುವ ಅನುದಾನದ ಕುರಿತಾಗಿ ಅಧಿಕಾರಿಗಳೊಂದಿಗೆ ಸಭೆ ಮಾಡಿ ಸಮಗ್ರ ಯೋಜನೆ ಸಿದ್ಧ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಬೀಳಗಿ

ಮತಕ್ಷೇತ್ರಗಳಲ್ಲಿ ಬರುವ ಎಲ್ಲ ಪುನರ್‌ವಸತಿ ಕೇಂದ್ರಗಳ ಸಂಪೂರ್ಣ ಅಭಿವೃದ್ಧಿ ಜೊತೆಗೆ ಅಲ್ಲಿನ ಮೂಲಸೌಕರ್ಯಗಳು ಸಿಗುವಂತೆ ಮಾಡಲು ಈಗಾಗಲೇ ಯೋಜನೆ ರೂಪಿಸಲಾಗಿದ್ದು ಬರುವ ದಿನಗಳಲ್ಲಿ ಎಲ್ಲ ಪುನರ್‌ವಸತಿ ಕೇಂದ್ರಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಶಾಸಕ ಜೆ.ಟಿ.ಪಾಟೀಲ ತಿಳಿಸಿದರು.

ತಾಲೂಕಿನ ಸೊನ್ನ, ಡವಳೇಶ್ವರ, ಗರಡದಿನ್ನಿ, ಕೊರ್ತಿ, ಹೆಗ್ಗೂರ, ಗೂಡಿಹಾಳ, ಬೀಳಗಿ ಕ್ರಾಸ್‌-4 ಪುನರ್ವಸತಿ ಕೇಂದ್ರಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್‌ವಸತಿ ಉಪವಿಭಾಗ 5ರ ಕೆಬಿಜೆಎನಎಲ್ ವಿಶೇಷ ಅನುದಾನದಡಿಯಲ್ಲಿ ಆಂತರಿಕ ರಸ್ತೆ ನಿರ್ಮಾಣ ಕಾಮಗಾರಿ, ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ, ಸ್ಮಶಾನಗಳಲ್ಲಿ ತಂಗುದಾನ, ಚಿತಾಗಾರ ಕಟ್ಟಡ ಕಾಮಗಾರಿ, ನೂತನ ಶಾಲಾ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪುನರ್‌ವಸತಿ ಕೇಂದ್ರಗಳ ಅಭಿವೃದ್ಧಿಗೆ ಬೇಕಿರುವ ಅನುದಾನದ ಕುರಿತಾಗಿ ಅಧಿಕಾರಿಗಳೊಂದಿಗೆ ಸಭೆ ಮಾಡಿ ಸಮಗ್ರ ಯೋಜನೆ ಸಿದ್ಧ ಮಾಡಲಾಗಿದೆ ಎಂದು ತಿಳಿಸಿದರು.

ಯಾವ ಪುನರ್‌ವಸತಿ ಕೇಂದ್ರಗಳಲ್ಲಿ ಶೇ.50ಕ್ಕೂ ಹೆಚ್ಚು ಜನಸಂಖ್ಯೆ ವಾಸವಾಗಿದ್ದಾರೋ ಅಂತಹ ಸ್ಥಳಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದ್ದು ಬರುವ ಬಜೆಟ್‌ನಲ್ಲಿ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸ ಜತೆಗೆ ಹೊಸ ನೀರಾವರಿ ಯೋಜನೆಗಳನ್ನು ಸಿದ್ಧ ಮಾಡಿ ಅವುಗಳನ್ನು ಜಾರಿಗೆ ತರಲಾಗುವುದು. ಬಿಜೆಪಿ ಅವಧಿಯಲ್ಲಿ ಕಾಮಗಾರಿಗಳ ಬಾಕಿ ಬಿಲ್ ವಿತರಣೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡುವುದಕ್ಕಾಗಿಯೇ ಸ್ವಲ್ಪ ಮಟ್ಟಿನ ಅಭಿವೃದ್ಧಿ ಕೆಲಸಗಳು ಅಡ್ಡಿಯಾಗಿದ್ದು ಬರುವ ಬಜೆಟ್ ನಂತರ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದು ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಿ ಅಭಿವೃದ್ಧಿಯತ್ತ ದಾಪುಗಾಲು ಹಾಕಲಾಗುವುದು ಎಂದರು.

ಕಾಮಗಾರಿಗಳ ಕುರಿತು ನಿಗಾವಹಿಸಿ:

ಸರ್ಕಾರದಿಂದ ಮಂಜೂರಾಗಿರುವ ಕಾಮಗಾರಿಗಳನ್ನು ಅಧಿಕಾರಿಗಳು ಕಟ್ಟು ನಿಟ್ಟಾಗಿ ನಿಗದಿತ ಅವಧಿಯಲ್ಲಿ ಮುಗಿಯುವಂತೆ ಹಾಗೂ ಕಳಪೆ ಕಾಮಗಾರಿಯಾಗದಂತೆ ನಿಗಾವಹಿಸಬೇಕು. ಗ್ರಾಮಸ್ಥರು ಕಾಮಗಾರಿಗಳ ಕುರಿತಾಗಿ ನಿಗಾವಹಿಸಿ ಅಧಿಕಾರಿಗಳ ಗಮನಕ್ಕೆ ತರಬೇಕು. ಅವರು ಮಾತು ಕೇಳದೆ ಇದ್ದಲ್ಲಿ ನಮ್ಮ ಗಮನಕ್ಕೆ ತಂದು ಗುಣಮಟ್ಟದ ಕಾಮಗಾರಿಗಳಿಗಾಗಿ ಎಲ್ಲರು ನಿಗಾವಹಿಸಿ ಎಂದರು.

ಈ ಸಂದರ್ಭದಲ್ಲಿ ಕೊರ್ತಿ ಗ್ರಾಪಂ ಅಧ್ಯಕ್ಷೆ ಪ್ರೇಮಾ ಮಾದರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಣಮಂತ ಕಾಖಂಡಕಿ, ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಮಾಜಿ ಜಿಪಂ ಸದಸ್ಯ ಯಮನಪ್ಪ ರೊಳ್ಳಿ, ಜಿ.ಆರ್.ಪಾಟೀಲ, ಸಿದ್ದು ಗಿರಗಾಂವಿ, ಪಪಂ ಸದಸ್ಯ ರಾಜು ಬೋರ್ಜಿ, ಸಿದ್ದು ಸಾರಾವರಿ, ಉದಯ ರಜಪೂತ, ಬಸವರಾಜ ಹಳ್ಳದಮನಿ, ಬಿ.ಆರ್.ಸೊನ್ನದ, ಹಣಮಂತಗೌಡ ಪಾಟೀಲ, ಕಿರಣ ಬಾಳಾಗೋಳ, ಕುಮಾರ ಹಿರೇಮಠ, ಬಿಇಓ ಆರ್.ಎಸ್.ಆದಾಪೂರ, ಗುತ್ತಿಗೆದಾರರು, ಕೆಬಿಜೆಎನ್‌ಎಲ್ ಇಲಾಖೆ ಅಧಿಕಾರಿಗಳು ಇದ್ದರು.

ಯಾವ ಪುನರ್‌ವಸತಿ ಕೇಂದ್ರಗಳಲ್ಲಿ ಶೇ.50ಕ್ಕೂ ಹೆಚ್ಚು ಜನಸಂಖ್ಯೆ ವಾಸವಾಗಿದ್ದಾರೋ ಅಂತಹ ಸ್ಥಳಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ಬರುವ ಬಜೆಟ್‌ನಲ್ಲಿ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸ ಜತೆಗೆ ಹೊಸ ನೀರಾವರಿ ಯೋಜನೆ ಸಿದ್ಧ ಮಾಡಿ ಅವುಗಳನ್ನು ಜಾರಿಗೆ ತರಲಾಗುವುದು.

ಜೆ.ಟಿ.ಪಾಟೀಲ, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಶಾಸಕ