ಸಾರಾಂಶ
ಕಳೆದ ವರ್ಷ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ, ಈ ಬಾರಿ ಅತಿವೃಷ್ಟಿಯಿಂದ ರೈತ ಬೆಳೆಗಳು ಹಾಗೂ ರಸ್ತೆಗಳು ಹಾನಿಯಾಗಿದೆ.
ಶಿರಸಿ: ಕ್ಷೇತ್ರದ ಅಭಿವೃದ್ಧಿಯು ನನ್ನ ಮೊದಲ ಆದ್ಯತೆಯಾಗಿದ್ದು, ನಗರ ಹಾಗೂ ಗ್ರಾಮೀಣ ಭಾಗ ಎಂಬ ತಾರತಮ್ಯವಿಲ್ಲದೇ ಸರ್ಕಾರದಿಂದ ಮೊದಲ ಹಂತದಲ್ಲಿ ಕೋಟ್ಯಂತರ ರು. ಅನುದಾನ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ಸೋಮವಾರ ತಾಲೂಕಿನ ಕುಳವೆ ಗ್ರಾಪಂ ವ್ಯಾಪ್ತಿಯ ಚೌಡಿಹಳ್ಳ ಸೇತುವೆಯ ತಡೆಗೋಡೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ, ಮಾತನಾಡಿದರು.ಕಳೆದ ವರ್ಷ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ, ಈ ಬಾರಿ ಅತಿವೃಷ್ಟಿಯಿಂದ ರೈತ ಬೆಳೆಗಳು ಹಾಗೂ ರಸ್ತೆಗಳು ಹಾನಿಯಾಗಿದೆ. ಸಣ್ಣ ನೀರಾವರಿ ಇಲಾಖೆಗೆ ₹೫ ಕೋಟಿ, ಲೋಕೋಪಯೋಗಿ ಇಲಾಖೆಗೆ ₹೪೦ ಕೋಟಿ, ಸೇತುವೆ ನಿರ್ಮಾಣಕ್ಕೆ ₹೧೧ ಕೋಟಿ ಮಂಜೂರಿ ಮಾಡಿಸಿದ್ದೇನೆ. ಜಿಲ್ಲಾ ಪಂಚಾಯಿತಿ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ.
ಕ್ಷೇತ್ರದಲ್ಲಿ ಮಣ್ಣಿನ ಗೋಡೆಗಳ ಶಾಲೆಗಳ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವುಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ತಂದಿದ್ದೇನೆ. ಕುಳವೆ ಗ್ರಾಪಂ ಭಾಗದ ನಾಗರಿಕರು ಚೌಡಿಹಳ್ಳ ಸೇತುವೆಯ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕೆಂದು ವಿನಂತಿಸಿದಾಗ ₹೨೦ ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳುವುದು ಈ ಭಾಗದ ಗ್ರಾಮಸ್ಥರ ಜವಾಬ್ದಾರಿಯಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.ಗ್ರಾಪಂ ಸದಸ್ಯ ಸಂದೇಶ ಭಟ್ಟ ಬೆಳಖಂಡ ಮಾತನಾಡಿ, ಭೀಮಣ್ಣ ನಾಯ್ಕ ಶಾಸಕರಾಗಿ ಆಯ್ಕೆಯಾದ ಪ್ರಥಮ ವರ್ಷದ ಅವಧಿಯಲ್ಲಿ ಕುಳವೆ ಗ್ರಾಪಂ ವ್ಯಾಪ್ತಿಗೆ ವಿವಿಧ ಇಲಾಖೆಯ ಮೂಲಕ ₹೫೬ ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಒದಗಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅವರ ನೇತೃತ್ವದಲ್ಲಿ ನಾವೆಲ್ಲರೂ ಹೆಚ್ಚಿನ ಅನುದಾನ ಮಂಜೂರಿ ಮಾಡಿಸಲು ಪ್ರಯತ್ನಿಸೋಣ ಎಂದರು.ಗ್ರಾಪಂ ಅಧ್ಯಕ್ಷ ರಂಜಿತಾ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಗ್ರಾಪಂ ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ, ಪ್ರಮುಖರಾದ ನಾಗೇಶ ಹೆಗಡೆ ಕೆಂಚಗದ್ದೆ, ಭರತ ಹೆಗಡೆ ಕೆಂಚಗದ್ದೆ, ಪ್ರತಿಭಾ ಭಟ್ಟ, ಎಂ.ಜಿ. ಭಟ್ಟ ಬೆಳಖಂಡ, ಜಾಫಿ ಪೀಠರ್ ಸೇರಿದಂತೆ ಮತ್ತಿತರರು ಇದ್ದರು.₹೫೬ ಲಕ್ಷ ವೆಚ್ಚದ ಕಾಮಗಾರಿಯ ಕೈಪಿಡಿ ಬಿಡುಗಡೆ
ಭೀಮಣ್ಣ ನಾಯ್ಕ ಶಾಸಕರಾಗಿ ಆಯ್ಕೆಯಾದ ಒಂದು ವರ್ಷ ಅವಧಿಗೆ ಕುಳವೆ ಗ್ರಾಪಂ ವ್ಯಾಪ್ತಿಗೆ ವಿವಿಧ ಯೋಜನೆಯ ಮೂಲಕ ಮಂಜೂರಿ ಮಾಡಿದ ₹೫೬ ಲಕ್ಷ ವೆಚ್ಚದ ಕಾಮಗಾರಿಯ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಶಾಸಕರು, ಹಂತ- ಹಂತವಾಗಿ ಸಮಸ್ಯೆ ಬಗೆಹರಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.