ಸಾರಾಂಶ
ಹೇಳಿಕೆ । ಶ್ರೀಕೃಷ್ಣ ಜನ್ಮಾಷ್ಟಮಿ ಪೂಜಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿನಾನು ಕಳೆದ ವರ್ಷ ಕೊಟ್ಟ ಮಾತಿನಂತೆ ಮೊದಲ ಹಂತದಲ್ಲೇ ನುಗ್ಗೇಹಳ್ಳಿ ಹಿರೇಕೆರೆಗೆ ನೀರು ಹರಿಸಲಾಗುತ್ತಿದೆ. ಅದನ್ನು ಸಂಪೂರ್ಣ ಭರ್ತಿ ಮಾಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೋಬಳಿ ಕೇಂದ್ರದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದಲ್ಲಿ ಯಾದವ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಬಾಗೂರು ಬಳಿಯ ಹೇಮಾವತಿ ನಾಲೆಯಿಂದ ಪೈಪ್‌ಲೈನ್ ಮೂಲಕ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಕಳೆದ 4 ವರ್ಷಗಳಿಂದ ನೀರು ಹರಿಸಲಾಗುತ್ತಿದ್ದು ಕಳೆದ ವರ್ಷ ಬರಗಾಲದ ಹಿನ್ನೆಲೆಯಲ್ಲಿ ನುಗ್ಗೇಹಳ್ಳಿ ಹಿರೇಕೆರೆಗೆ ನೀರು ಹರಿಸಲಾಗಲಿಲ್ಲ ತಾವು ಕಳೆದ ವರ್ಷ ಕೊಟ್ಟ ಮಾತಿನಂತೆ ಈ ವರ್ಷದ ಪೂರ್ವ ಹಂಗಾಮಿನಲ್ಲೇ ನುಗ್ಗೇಹಳ್ಳಿ ಕೆರೆಗೆ ನೀರು ಹರಿಸಲಾಗುತ್ತಿದ್ದು ಸಂಪೂರ್ಣ ಕೆರೆ ತುಂಬಿಸುವುದೇ ನನ್ನ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.
ಹೇಮಾವತಿ ನಾಲೆಯಿಂದ ಸಂತೇ ಶಿವರ ಕೆರೆಗೆ ಪೈಪ್‌ಲೈನ್ ಮೂಲಕ ನೀರು ಹರಿಸುವ ಕಾಮಗಾರಿ ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಮುಂಬರುವ ದಿನಗಳಲ್ಲೇ ಕೆರೆಗೆ ನಿರು ಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದ ಯಾದವ ಸಂಘದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೋಬಳಿ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಯಾವುದೇ ಜಾತಿ ಭೇದ ಮತವಿಲ್ಲದೆ ಎಲ್ಲಾ ಧರ್ಮದವರು ಕೂಡ ತಮ್ಮ ಮಕ್ಕಳಿಗೆ ಶ್ರೀಕೃಷ್ಣ, ರುಕ್ಮಿಣಿ ವೇಷಭೂಷಣ ಹಾಕಿಸಿ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಡೀ ವಿಶ್ವವೇ ಭಾರತದ ಸಂಸ್ಕೃತಿಗೆ ಗೌರವ ಕೊಡುತ್ತಿದ್ದು ನಾವೆಲ್ಲರೂ ಕೂಡ ಸಂಸ್ಕೃತಿ ಉಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಸಿ.ಎನ್. ಬಾಲಕೃಷ್ಣ ಅವರನ್ನು ಯಾದವ ಸಂಘದ ವತಿಯಿಂದ ಸನ್ಮಾನಿಸಲಾಯಿತು.ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಂ.ನಟರಾಜ್, ಸಮಾಜದ ಮುಖಂಡರಾದ ಹುಲ್ಲೇನಹಳ್ಳಿ ನಾರಾಯಣಪ್ಪ, ಪಾಪಣ್ಣ, ಎಚ್.ಎಂ. ಗೋಪಾಲ್, ಎಚ್.ಎಂ.ಜಯರಾಮ್, ಪುಟ್ಟರಾಮೇಗೌಡ, ರಮೇಶ್, ತರಕಾರಿ ಕುಮಾರ್, ಪೊಲೀಸ್ ನಾರಾಯಣಗೌಡ, ಹೊನ್ನೇಗೌಡ, ನಟರಾಜ್ ಯಾದವ್, ಶಿಕ್ಷಕ ಕಲಾನಾಥ್, ಚಂದ್ರು ಯಾದವ್, ಕುಮಾರ್ ಯಾದವ್, ರಮೇಶ್, ವಿರೂಪಾಕ್ಷಪುರ ಚಂದ್ರಪ್ಪ, ಹೂವಿನಹಳ್ಳಿ ಬಾಬು,ದೀಪು, ಮುಖಂಡರಾದ ತೋಟಿ ನಾಗರಾಜ್, ದೊರೆಸ್ವಾಮಿ, ಯಲ್ಲಪ್ಪ, ಎನ್.ಎಸ್.ಮಂಜುನಾಥ್, ಎನ್.ಆರ್.ಶಿವಕುಮಾರ್, ಪುಟ್ಟಸ್ವಾಮಿ, ಸುಹಿಲ್, ಯಾದವ ಸಂಘದ ಪದಾಧಿಕಾರಿಗಳು, ನುಗ್ಗೇಹಳ್ಳಿ ಗ್ರಾಮಸ್ಥರು ಹಾಜರಿದ್ದರು.