ಶಿವಮೊಗ್ಗ: ಕೈಗಾರಿಕಾ ಪ್ರದೇಶಗಳಲ್ಲಿ ಕುಡಿಯುವ ನೀರು, ಬೀದಿ ದೀಪ, ಯುಜಿಡಿ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ, ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಶಿವಮೊಗ್ಗ: ಕೈಗಾರಿಕಾ ಪ್ರದೇಶಗಳಲ್ಲಿ ಕುಡಿಯುವ ನೀರು, ಬೀದಿ ದೀಪ, ಯುಜಿಡಿ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ, ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಕೈಗಾರಿಕಾ ಪ್ರದೇಶಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಇರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಕುಡಿಯುವ ನೀರು, ಬೀದಿ ದೀಪ, ಯುಜಿಡಿ, ತ್ಯಾಜ್ಯ ನಿರ್ವಹಣೆಯನ್ನು ಪಾಲಿಕೆ, ಸ್ಥಳೀಯ ಸಂಸ್ಥೆಗಳ ಸಮನ್ವಯದೊಂದಿಗೆ ನಿರ್ವಹಿಸಲಾಗುವುದು ಎಂದು ತಿಳಿಸಿದರು.

ಶಾಹಿ ಎಕ್ಸ್‌ಪೋರ್ಟ್ಸ್ ಮತ್ತು ಐಓಸಿಲ್ ವಾಹನಗಳನ್ನು ತಮ್ಮ ಪ್ರತ್ಯೇಕ ರಸ್ತೆಗಳಲ್ಲಿ ಬರುವಂತೆ ಕ್ರಮ ವಹಿಸಬೇಕು. ಅಪಾಯಕಾರಿ ತ್ಯಾಜ್ಯಗಳನ್ನು ಸಾಗಿಸುವಾಗ ಎಚ್ಚರಿಕೆ ವಹಿಸಬೇಕು. ವಾಹನಗಳನ್ನು ಸಮರ್ಪಕವಾಗಿ ನಿಲುಗಡೆಯಲ್ಲಿಯೇ ನಿಲ್ಲಿಸುವಂತೆ ಸೂಚನೆಗಳನ್ನು ನೀಡಬೇಕು ಎಂದರು.ಶಾಹಿ ಎಕ್ಸ್‌ಪೋರ್ಟ್ಸ್ ಸುತ್ತಮುತ್ತಲ ಪ್ರದೇಶದಲ್ಲಿ ಆಸಿಡ್ ವಾಸನೆ ಬರುತ್ತಿದೆ ಎಂಬ ದೂರು ಸಹ ಇದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಶಾಹಿ ಗಾರ್ಮೆಂಟ್ಸ್‌ ಅವರು ವಾಸನೆ ಬಾರದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಕೈಗಾರಿಕಾ ಸಂಘಗಳ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ಶಾಹಿ ಎಕ್ಸ್ಪೋರ್ಟ್ಸ್ ನ ಅಪಾಯಕಾರಿ ತ್ಯಾಜ್ಯ ತುಂಬಿರುವ ವಾಹನಗಳು ಮತ್ತು ಐಓಸಿಲ್‌ನ ಅನಿಲ ತುಂಬಿರುವ ವಾಹನಗಳು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯನ್ನು ಬಳಸಿಕೊಳ್ಳುತ್ತಿರುವುದರಿಂದ ತೊಂದರೆಯಾಗುತ್ತಿದೆ. ಗಾರ್ಮೆಂಟ್ಸ್ ವಾಯುಮಾಲಿನ್ಯ ಮತ್ತು ಜಲ ಮಾಲಿನ್ಯ ನಿಯಂತ್ರಿಸಲು ಕ್ರಮ ವಹಿಸಬೇಕು. ಜಿಟಿಟಿಸಿ ಆವರಣದ ಮುಂದೆ ಮತ್ತು ಇಲ್ಲಿರುವ ಕ್ಯಾಂಟಿನ್ ಬಳಿ ಐಓಸಿಲ್‌ನ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದನ್ನು ನಿಯಂತ್ರಿಸಬೇಕು ಎಂದರು.

ಇ-ಖಾತಾ ಸಮಸ್ಯೆ ಬಗೆಹರಿಸಿ:

ಶಿವಮೊಗ್ಗ ಆಟೋ ಕಾಂಪ್ಲೆಕ್ಸ್‌ನಲ್ಲಿ ನಿವೇಶನ ಹಾಗೂ ಕಟ್ಟಡಗಳ ಇ-ಖಾತಾ ಮಾಡಿಸಲು ತೊಂದರೆಯಾಗುತ್ತಿದೆ. ಸುಮಾರು 27 ವರ್ಷಗಳ ಹಿಂದೆ ಕೆಐಎಡಿಬಿಯಿಂದ ಅಭಿವೃದ್ಧಿ ಪಡಿಸಿದ ಈ ಪ್ರದೇಶವನ್ನು ಒಂದೆರಡು ವರ್ಷಗಳ ಹಿಂದೆ ಪಾಲಿಕೆಗೆ ಹಸ್ತಾಂತರವಾಗಿವೆ. ಪಾಲಿಕೆಯವರು ಇ-ಖಾತಾ ಮಾಡಿಸಲು ಅನುಮತಿ ಪತ್ರ ಕೇಳುತ್ತಿದ್ದಾರೆ, ದಿಕ್ಕುಗಳಲ್ಲಿ ವ್ಯತ್ಯಾಸವಿದೆ ಎಂದೆಲ್ಲ ಹೇಳುತ್ತಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಿ ಇ-ಖಾತಾ ಮಾಡಿಸಿಕೊಡಬೇಕೆಂದು ಕೈಗಾರಿಕೋದ್ಯಮಿಗಳು ಮನವಿ ಮಾಡಿದರು.ಭದ್ರಾವತಿ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಬೌಂಡ್ರಿ ಫೆನ್ಸಿಂಗ್, ಅಸಮರ್ಪಕ ಬೆಳಕು, ಕೆಲವು ಆಂತರಿಕ ರಸ್ತೆಗಳ ದುರಸ್ತಿ ಇದೆ. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬೀದಿ ದೀಪಗಳು ದುರಸ್ತಿಯಲ್ಲಿವೆ. ಪಾಲಿಕೆಯಿಂದ ಕೈಗಾರಿಕೆಗಳಿಗೆ ಸಮರ್ಪಕ ಮತ್ತು ನಿಯಮಿತವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕನಿಷ್ಠ 2 ಗಂಟೆ ನೀರು ಬಿಡಬೇಕು ಎಂದು ಮನವಿ ಮಾಡಿದರು.ಇ-ಖಾತಾ, ಕುಡಿಯುವ ನೀರು, ಯುಜಿಡಿ ಸೇರಿದಂತೆ ಪಾಲಿಕೆ ಸಮಸ್ಯೆಗಳ ಕುರಿತು ಆಯುಕ್ತರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಒಂದೊಂದೇ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಭದ್ರಾವತಿ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಭದ್ರಾವತಿ ನಗರಸಭೆಯಿಂದ ಆದ್ಯತೆ ಮೇರೆಗೆ ಫೆನ್ಸಿಂಗ್ ಮತ್ತು ಬೀದಿ ದೀಪ ಇತರೆ ಕೆಲಸಗಳನ್ನು ಹಂತ ಹಂತವಾಗಿ ಮಾಡುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.ಇದೇ ವೇಳೆ ಜಿಲ್ಲೆಯ ವಿವಿಧ ಕೈಗಾರಿಕಾ ವಸಾಹತುವಿನಲ್ಲಿ ಖಾಲಿ ಇರುವ ನಿವೇಶನ/ಮಳಿಗೆಗಳ ಅರ್ಜಿ ಪರಿಶೀಲಿಸಿ ಲಾಟರಿ ಮೂಲಕ ನಿವೇಶನ ಮತ್ತು ಮಳಿಗೆಗಳನ್ನು ಹಂಚಿಕೆ ಮಾಡಲಾಯಿತು.

ಸಭೆಯಲ್ಲಿ ಜಿ.ಪಂ ಸಿಇಒ ಎನ್‌.ಹೇಮಂತ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್, ಕೆಐಎಡಿಬಿ ಕಾರ್ಯಪಾಲಕ ಅಭಿಯಂತರ ನಾರಾಯಣಪ್ಪ, ಕರ್ನಾಟಕ ನಗರ ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರರು, ಪರಿಸರ ಅಧಿಕಾರಿಗಳು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಜಿಲ್ಲಾ ಕೈಗಾರಿಕಾ ಸಂಘ ಮತ್ತಿತರರಿದ್ದರು.