ಸಾರಾಂಶ
ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರು
ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡಿದರೆ ಕುಡಿಯುವ ನೀರು ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತೇನೆಂದು ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ತಿಳಿಸಿದರು.ಪಟ್ಟಣದ ವಿವಿಧ ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗೆ ಶನಿವಾರ ಭೇಟಿ ನೀಡಿ ಮಾತನಾಡಿದರು. ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮುರು ಮತ್ತು ಪಾವಗಡ ಕ್ಷೇತ್ರಗಳು ತೀರಾ ಹಿಂದುಳಿದ ಪ್ರದೇಶವಾಗಿದ್ದು, ಸದಾ ಬರಗಾಲಕ್ಕೆ ತುತ್ತಾಗುತ್ತಿವೆ. ಮತದಾರರು ನನಗೆ ಆಶೀರ್ವದಿಸಿದರೆ ನೀರಾವರಿ ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸುತ್ತೇನೆ. ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ಮುಂಜೂರಾಗಿದ್ದ ತುಂಗಭದ್ರಾ ಹಿನ್ನೀರಿನ ಯೋಜನೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ತುಂಗಭದ್ರಾ ಹಿನ್ನೀರಿನ ಯೋಜನೆ ಕಾಮಗಾರಿ ಪೂರ್ಣಗೊಳಿಸುವ ಜತೆಗೆ ಎಲ್ಲಾ ವರ್ಗದ ಬಡ ಮಕ್ಕಳ ಶಿಕ್ಷಣದ ಏಳಿಗೆಗೆ ಶ್ರಮಿಸುತ್ತೇನೆ ಎಂದರು.ಪ್ರಧಾನಿ ಮೋದಿಯವರ ಜನಪ್ರಿಯ ಯೋಜನೆಗಳಿಂದ ದೇಶ ಅಭಿವೃದ್ದಿಯತ್ತ ಸಾಗುತ್ತಿದೆ. ಅವರ ದಿಟ್ಟ ನಿರ್ಧಾರದಿಂದ ದೇಶ ಸುಭದ್ರ ಸ್ಥಿತಿಯಲ್ಲಿ ಇದೆ. ಕ್ಷೇತ್ರದ ಮತದಾರರು ಈ ಬಾರಿ ನನಗೆ ಆಶೀರ್ವಾದ ಮಾಡಬೇಕು. ಕೇಂದ್ರ ಸರ್ಕಾರದ ಹೊಸ ಹೊಸ ಯೋಜನೆಗಳನ್ನು ತಂದು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.ಬಡವರು, ಕಾರ್ಮಿಕರು, ರೈತರಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡಿರುವ ಪ್ರಧಾನಿ ಮೋದಿ ಜನಪ್ರಿಯತೆಯನ್ನು ಸಹಿಸದ ಕಾಂಗ್ರೆಸ್ಸಿಗರು ಬಿಜೆಪಿಯನ್ನು ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರ ಕನಸು ನನಸಾಗುವುದಿಲ್ಲ. ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ. ಕಾರ್ಯಕರ್ತರು ಬಿಜೆಪಿಗೆ ಮತ ಕೊಡಿಸಿ ಅಭ್ಯರ್ಥಿಯನ್ನು ಗೆಲ್ಲಿಸಿ ಮೋದಿಯವ ಕೈ ಬಲ ಪಡಿಸಬೇಕು ಎಂದರು.ಇದಕ್ಕೂ ಮುನ್ನ ತಾಲೂಕಿನ ದೇವಸಮುದ್ರ ಹೋಬಳಿಯ ಕಣಕುಪ್ಪೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬೊಮ್ಮದೇವರಹಳ್ಳಿ ಶಕ್ತಿ ಕೇಂದ್ರದ ಪ್ರಮುಖ ತಿಪ್ಪೇಸ್ವಾಮಿ ಮನೆಗೆ ಭೇಟಿ ನೀಡಿ ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಮನೆಯ ಮೇಲೆ ಬಿಜೆಪಿ ಭಾವುಟ ಹಾರಿಸಿದರು. ಹಿರಿಯ ಮುಖಂಡರಾದ ಚಂದ್ರಶೇಖರ ಗೌಡ ಮತ್ತು ತಿಪ್ಪೇಸ್ವಾಮಿ ಮನೆಗೆ ಭೇಟಿ ನೀಡಿದರು.ಈ ವೇಳೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾಧ್ಯಕ್ಷ ಮುರುಳಿ, ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ, ಹಿರಿಯ ಮುಖಂಡ ಡಿ.ಎಂ.ಈಶ್ವರಪ್ಪ, ಚಂದ್ರಶೇಖರ ಗೌಡ, ಡಿ.ಒ.ಮುರಾರ್ಜಿ, ತಿಮ್ಲಾಪುರ ಮೂರ್ತಿ, ಜೀರಳ್ಳಿ ತಿಪ್ಪೇಸ್ವಾಮಿ, ಸಿದ್ದಾರ್ಥ, ಬಿ.ಜಿ.ಕೆರೆ ಸಿದ್ದಣ್ಣ, ಕೊಂಡಾಪುರ ಬಲರಾಮ್, ಕಿರಣ್ ಗಾಯಕವಾಡ್, ಹರೀಶ ಪಾಳೆಗಾರ್, ಮುಖಂಡ ತಿಪ್ಪೇಸ್ವಾಮಿ, ಓ.ಕರಿಬಸಪ್ಪ, ದೇವಸಮುದ್ರ ಚಂದ್ರು ಇದ್ದರು.