ಚಿಕ್ಕಮಗಳೂರುಅಧಿಕಾರಕ್ಕಿಂತ ಜನರಿಗೆ ಶಾಶ್ವತವಾಗಿ ಉಪಯೋಗವಾಗುವ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಭದ್ರಾ ನದಿಯಿಂದ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸುಮಾರು ₹1,281 ಕೋಟಿ ಮಂಜೂರು ಮಾಡಿಸಿದ್ದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಹೇಳಿದರು.

- ಸಿ.ಟಿ.ರವಿ ಅಭಿಮತ । ವಡ್ಡರಹಳ್ಳಿ ಗ್ರಾಮದ ಕೆರೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗಂಗಾ ಪೂಜಾ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಧಿಕಾರಕ್ಕಿಂತ ಜನರಿಗೆ ಶಾಶ್ವತವಾಗಿ ಉಪಯೋಗವಾಗುವ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಭದ್ರಾ ನದಿಯಿಂದ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸುಮಾರು ₹1,281 ಕೋಟಿ ಮಂಜೂರು ಮಾಡಿಸಿದ್ದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಹೇಳಿದರು.ಚಿಕ್ಕಮಗಳೂರು ತಾಲೂಕಿನ ವಡ್ಡರಹಳ್ಳಿ ಗ್ರಾಮದ ಕೆರೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗಂಗಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ 2019-20ರಲ್ಲಿ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದೆ. ಹಣಕಾಸಿನ ತೊಂದರೆ ನಡುವೆಯೂ ಯೋಜನೆಗೆ ಮಂಜೂರಾತಿ ದೊರೆತಿತ್ತು. ಮೊದಲ 2 ಹಂತಗಳು ಪೂರ್ಣಗೊಂಡಿದ್ದು, ಮೂರನೇ ಹಂತದ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ವಡ್ಡರಹಳ್ಳಿ, ಕೆ.ಬಿ.ಹಾಳ್, ನರಸೀಪುರ ಸೇರಿದಂತೆ ಹಲವು ಗ್ರಾಮಗಳ ಕೆರೆಗಳಿಗೆ ನೀರು ತಲುಪಲಿದೆ ಎಂದರು.ದಾಸರಹಳ್ಳಿ ಮತ್ತು ಲಕ್ಯಾ ಮಾದರಸನ ಕೆರೆಗಳಿಗೆ ₹28 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆ ಕೈಗೊಳ್ಳ ಲಾಗಿತ್ತು. ಆದರೆ ಈಗ ನಿರ್ವಹಣೆ ನೆಪದಲ್ಲಿ ದಾಸರಹಳ್ಳಿ ಕೆರೆಯ ಏರಿ ಒಡೆದು ನೀರು ಖಾಲಿಯಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯೋಜನೆಗಳನ್ನು ರೂಪಿಸುವುದಷ್ಟೇ ಅಲ್ಲ, ಅವುಗಳ ನಿರ್ವಹಣೆಗೂ ಆದ್ಯತೆ ನೀಡಬೇಕು. ರಣಘಟ್ಟ ದಿಂದ ಬೆಳವಾಡಿ ಕೆರೆಗೆ ನೀರು ತುಂಬಿಸುವ ಯೋಜನೆಯೂ ಆರಂಭವಾಗಿದೆ. ಎತ್ತಿನಹೊಳೆ ಯೋಜನೆ ನೀರನ್ನು ಈ ಭಾಗದ ಕೆರೆಗಳಿಗೂ ಸಂಪರ್ಕಿಸುವಂತೆ ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದು ತಿಳಿಸಿದರು.ಭದ್ರಾ ನದಿ ನೀರು ತುಂಬಿಸುವ ಯೋಜನೆ ಗುತ್ತಿಗೆದಾರರು ಬಾಕಿ ಬಿಲ್ ಪಾವತಿಯಾದರೆ ಏಳೆಂಟು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಆದರೆ ಸರ್ಕಾರದಿಂದ ಗುತ್ತಿಗೆದಾರರಿಗೆ ಹಣ ಪಾವತಿಯಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಬರಪೀಡಿತ 200ಕ್ಕೂ ಹೆಚ್ಚು ತಾಲೂಕುಗಳಿದ್ದು, ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಹಾಗೂ ಉದ್ಯೋಗ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕಿತ್ತು. ಆದರೆ ಆಶಾ ಕಾರ್ಯಕರ್ತೆಯರ ಹೋರಾಟಕ್ಕೂ ಸ್ಪಂದಿಸದ ಸರ್ಕಾರ, ಬರಪರಿಹಾರಕ್ಕೂ ಸಮರ್ಪಕ ಗಮನ ನೀಡುತ್ತಿಲ್ಲ ಎಂದು ಟೀಕಿಸಿದರು.ರಾಜ್ಯದಲ್ಲಿ 23 ಲಕ್ಷ ಜನರಿಗೆ ಎಂಟು-ಹತ್ತು ತಿಂಗಳಿಂದ ಪಿಂಚಣಿ ಪಾವತಿಯಾಗಿಲ್ಲ. ಬೆಲೆ ಏರಿಕೆಯಿಂದ ಜನರ ಜೇಬು ಖಾಲಿಯಾಗುತ್ತಿದೆ. ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಹಿಂದೆ ₹25 ಸಾವಿರ ಇದ್ದ ವೆಚ್ಚ ಈಗ ₹2.5 ಲಕ್ಷಕ್ಕೆ ಏರಿಕೆಯಾಗಿದೆ. ಪಹಣಿ, ಜನನ ಮತ್ತು ಮರಣ ಪ್ರಮಾಣಪತ್ರಗಳ ಶುಲ್ಕ ಹೆಚ್ಚಾಗಿದೆ. ಬರಗಾಲದ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಆದ್ಯತೆ ನೀಡುವ ಬದಲು ಕುಮಾರಕೃಪಾ ಅತಿಥಿಗೃಹವನ್ನು ಮುಖ್ಯಮಂತ್ರಿಗಳ ನಿವಾಸವನ್ನಾಗಿ ಪರಿವರ್ತಿಸಲು ನೂರಾರು ಕೋಟಿ ರೂ. ವೆಚ್ಚ ಮಾಡಿರುವುದು ಸರ್ಕಾರದ ಆದ್ಯತೆಗಳನ್ನು ತೋರಿಸುತ್ತದೆ ಎಂದು ಆರೋಪಿಸಿದರು.2018- 2023ರವರೆಗೆ ಬೆಳವಾಡಿ ಪಂಚಾಯಿತಿ ವ್ಯಾಪ್ತಿಗೆ ₹40.22 ಕೋಟಿ ಅನುದಾನ ನೀಡಲಾಗಿತ್ತು. ವಡ್ಡರಹಳ್ಳಿ ಗ್ರಾಮದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ₹25 ಲಕ್ಷ ಹಾಗೂ ವಡ್ಡರಹಳ್ಳಿಯಿಂದ ಕೆ.ಬಿ.ಹಾಳ್ ಮತ್ತು ಕರಿಕಟ್ಟೆಹಳ್ಳಿ ಸಂಪರ್ಕ ರಸ್ತೆಗೆ ₹1 ಕೋಟಿ ಒದಗಿಸಲಾಗಿತ್ತು. ಗ್ರಾಮಗಳ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಗ್ರಾಮಸ್ಥರ ಸಾಮೂಹಿಕ ಪ್ರಯತ್ನದಿಂದ ಕೆರೆಗೆ ನೀರು ಬಂದಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.ನೀರನ್ನು ದೇವರಂತೆ ಪೂಜಿಸುವ ಸಂಪ್ರದಾಯದ ಹಿಂದಿನ ಉದ್ದೇಶ ಪ್ರಕೃತಿ ಸಂರಕ್ಷಣೆಯಾಗಿದೆ. ''''ಧರ್ಮೋ ರಕ್ಷತಿ ರಕ್ಷಿತಃ'''' ಎಂಬಂತೆ ಪಂಚಭೂತಗಳನ್ನು ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ. ಕೆರೆಗೆ ಕಸ ಹಾಕದೆ, ಜಲಮೂಲಗಳನ್ನು ಸ್ವಚ್ಛ ವಾಗಿಟ್ಟುಕೊಂಡು ಸಂರಕ್ಷಿಸಬೇಕು. ಭೂಮಿಗೆ ವಿಷ ಹಾಕದೆ, ಗಾಳಿ ಮತ್ತು ನೀರನ್ನು ಕಲುಷಿತಗೊಳಿಸದೆ ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರಳ್ಳಿ ಮಹೇಶ್, ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬೆಳವಾಡಿ ಬಸವರಾಜು, ಬಿಜೆಪಿ ಮುಖಂಡ ಸಿಂದಿಗೆರೆ ಬಾಬು, ಮುಖಂಡ ನಿಂಗೇಗೌಡ ಉಪಸ್ಥಿತರಿದ್ದರು.

....ಬಾಕ್ಸ್....

ಬಿಜೆಪಿ ಅವಧಿ ಕಾಮಗಾರಿಗೆ ಈಗಿನ ಶಾಸಕರಿಂದ ಉದ್ಘಾಟನೆ: ಸಿ.ಟಿ.ರವಿ ಟೀಕೆಚಿಕ್ಕಮಗಳೂರಿನಲ್ಲಿ ಈಗಿನ ಶಾಸಕರು ನಮ್ಮ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ಉದ್ಘಾಟಿಸುತ್ತಿದ್ದಾರೆ. ಇತ್ತೀಚೆಗೆ ಉದ್ಘಾಟನೆಯಾದ ಅರಣ್ಯ ಭವನಕ್ಕೆ ₹10 ಕೋಟಿ ಮಂಜೂರು ಮಾಡಿದ್ದು ನಮ್ಮ ಅವಧಿಯಲ್ಲಿ. ಜಿಲ್ಲಾಧಿಕಾರಿ ಕಚೇರಿಯನ್ನೂ ನಮ್ಮ ಅವಧಿಯಲ್ಲೇ ಮಂಜೂರು ಮಾಡಲಾಗಿತ್ತು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವೈದ್ಯಕೀಯ ಕಾಲೇಜು ಸೇರಿದಂತೆ ಎಲ್ಲವೂ ನಮ್ಮ ಅವಧಿಯಲ್ಲೇ ಮಂಜೂರಾಗಿವೆ. ಈಗಿನವರು ಟೇಪ್ ಕತ್ತರಿಸುವುದು, ಉದ್ಘಾಟನೆ ಮತ್ತು ಭಾಷಣ ಮಾಡುವುದರಲ್ಲೇ ತೊಡಗಿದ್ದಾರೆ ಎಂದು ಡಾ.ಸಿ.ಟಿ.ರವಿ ಟೀಕಿಸಿದರು.