ಸಾರಾಂಶ
ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು. ಕ್ಷೇತ್ರದಲ್ಲಿ ಶೈಕ್ಷಣಿಕ ಚಟುವಟಿಕೆ ಉನ್ನತೀಕರಿಸಲು ಹಲವು ಕ್ರಮ ಕೈಗೊಂಡಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು. ಕ್ಷೇತ್ರದಲ್ಲಿ ಶೈಕ್ಷಣಿಕ ಚಟುವಟಿಕೆ ಉನ್ನತೀಕರಿಸಲು ಹಲವು ಕ್ರಮ ಕೈಗೊಂಡಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.ಪಟ್ಟಣದ ಹೊರವಲಯದ ಗಜಬರವಾಡಿ ಬಳಿ ಶನಿವಾರ ನಡೆದ ಲೋಕೋಪಯೋಗಿ ಇಲಾಖೆಯಿಂದ ಸುಮಾರು 3.30 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಮೌಲಾನಾ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ, ಆತ್ಮಸ್ಥೈರ್ಯ, ಛಲವಿದ್ದರೆ ಸಾಧನೆಯ ಹಾದಿ ಸುಗಮವಾಗಲಿದೆ. ಶೈಕ್ಷಣಿಕ ಉನ್ನತಿಯಿಂದ ಸುಂದರ ಬದುಕು ರೂಪಗೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳ ಸಂತೋಷದಾಯಕ ಕಲಿಕೆಗೆ ಅಗತ್ಯ ವಾತಾವರಣವಿರಬೇಕು. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಇಲಾಖೆಗೆ ಕ್ಯಾರಗುಡ್ಡ ಬಳಿ 8 ಎಕರೆ ಜಮೀನು ಮಂಜೂರಾಗಿದ್ದು, ಬರುವ ದಿನಗಳಲ್ಲಿ ಈ ನಿವೇಶನದಲ್ಲಿ ಆಧುನಿಕ ಸೌಲಭ್ಯ ಹೊಂದಿದ ಶಾಲಾ-ಕಾಲೇಜು, ವಸತಿ ಶಾಲೆ ನಿರ್ಮಿಸುವ ಸಂಕಲ್ಪ ಹೊಂದಿರುವುದಾಗಿ ಅವರು ಹೇಳಿದರು.ಕಟ್ಟಡದ ಉದ್ಘಾಟಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಇಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಜೀವನದಲ್ಲಿ ಉನ್ನತ ಗುರಿ ಸಾಧಿಸಲು ಕಠಿಣ ಮತ್ತ ಪರಿಶ್ರಮದಿಂದ ಅಧ್ಯಯನ ಮಾಡಿ ಪಾಲಕ-ಪೋಷಕರ ಕನಸು ನನಸು ಮಾಡಬೇಕು. ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸುತ್ತಿದ್ದು, ಬರುವ ದಿನಗಳಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಸದಸ್ಯರಾದ ರಾಜು ಮುನ್ನೋಳಿ, ಮಹಾಂತೇಶ ತಳವಾರ, ಚಂದು ಮುತ್ನಾಳೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಅಬ್ದುಲ್ ರಶೀದ ಮಿರ್ಜನ್ನವರ, ಬಿಇಒ ಪ್ರಭಾವತಿ ಪಾಟೀಲ, ಲೋಕೋಪಯೋಗಿ ಇಲಾಖೆ ಎಇಇ ಪ್ರವೀಣ ಮಾಡ್ಯಾಳ, ಅಭಿಯಂತರರಾದ ಪಿ.ಆರ್.ಕಾಮತ, ಬಿ.ಆರ್.ಸಂದೀಪ, ಗುತ್ತಿಗೆದಾರ ಪುಂಡಲೀಕ ನಂದಗಾಂವಿ, ಶಹಜಹಾನ ಬಡಗಾಂವಿ, ಸಲೀಮ್ ನದಾಫ್, ಪರಗೌಡ ಪಾಟೀಲ, ರಮೇಶ ನರಗಟ್ಟಿ, ಮಹಾಂತೇಶ ಮಾಸ್ತಿಹೊಳಿ, ಕಬೀರ ಮಲೀಕ್, ಸಲೀಮ್ ಕಳಾವಂತ ಇತರರು ಇದ್ದರು.