ದಾಬಸ್‍ಪೇಟೆ: ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಿ, ಮೂಲ ಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು
ದಾಬಸ್‍ಪೇಟೆ: ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಿ, ಮೂಲ ಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ತ್ಯಾಮಗೊಂಡ್ಲು ಹೋಬಳಿಯ ಕಳಲುಘಟ್ಟ ಗ್ರಾಪಂ ವ್ಯಾಪ್ತಿಯ ಸುಬ್ರಹ್ಮಣ್ಯನಗರದ ಅಲ್ಪಸಂಖ್ಯಾಂತರ ಕಾಲೊನಿಯಲ್ಲಿ 1 ಕೋಟಿ ವೆಚ್ಚದ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಜನತೆಗೆ ನೀಡಿದ ಪ್ರತಿಯೊಂದು ಭರವಸೆ ಈಡೇರಿಸುತ್ತಿದ್ದೇನೆ. ಜನಸೇವೆಯೇ ನನ್ನ ಮೊದಲ ಕರ್ತವ್ಯ. ಶಾಸಕನಾಗಿ ಆಯ್ಕೆಯಾದ ಕೇವಲ ಮೂರು ವರ್ಷದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ತಂದಿದ್ದೇನೆ. ಮುಂದೆಯೂ ತರಲಿದ್ದೇನೆ. ತ್ಯಾಮಗೊಂಡ್ಲು ಮಾದರಿ ಹೋಬಳಿಯಾಗಿ ಮಾಡುವೆ. ತ್ಯಾಮಗೊಂಡ್ಲು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಅದಕ್ಕೆ ಅಗತ್ಯ ಅನುದಾನವನ್ನು ಸರಕಾರದಿಂದ ತರಲುವಲ್ಲಿ ಶ್ರಮಿಸುತ್ತೇನೆ ಎಂದರು.ಒತ್ತುವರಿ ತೆರವಿಗೆ ಮನವಿ: ಸುಬ್ರಮಣ್ಯ ನಗರದಲ್ಲಿನ ಮುಸ್ಲಿಂ ಕಾಲೋನಿಯಿಂದ ತ್ಯಾಮಗೊಂಡ್ಲು ಅಮಾನಿಕೆರೆವರೆಗಿನ ಸುಮಾರು 100 ಅಡಿ ಅಗಲದ ರಾಜಕಾಲುವೆ ಒತ್ತುವರಿಯಿಂದ ಮುಚ್ಚಿಹೋಗಿದೆ. ಇದರಿಂದ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುತ್ತದೆ. ಕಳೆದ ಮೂರು ವರ್ಷದಿಂದ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಈ ವರ್ಷದ ಮಳೆಗಾಲ ಆರಂಭಕ್ಕೂ ಮುನ್ನ ಒತ್ತುವರಿ ತೆರವುಗೊಳಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಶಾಸಕ ಶ್ರೀನಿವಾಸ್, ಒತ್ತುವರಿ ಜಾಗ ತೆರವುಗೊಳಿಸಿ, ಮಳೆಯ ನೀರು ಸರಾಗವಾಗಿ ಕೆರೆಗೆ ಸೇರುವಂತೆ ಗ್ರಾಮದಿಂದ ಕೆರೆವರೆಗೂ ಕಾಲುವೆ ನಿರ್ಮಾಣಕ್ಕೆ ಅನುದಾನ ಮೀಸಲಿಡಬೇಕು. ಈ ಕಾಮಗಾರಿಯಲ್ಲೇ ಚರಂಡಿಯನ್ನು ನಿರ್ಮಿಸಬೇಕು ಎಂದು ಸೂಚಿಸಿದರು.ಈ ವೇಳೆ ತ್ಯಾಮಗೊಂಡ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತೇಗೌಡ, ಕೆಪಿಸಿಸಿ ಸದಸ್ಯ ಪ್ರಕಾಶ್ ಬಾಬು, ಬಮೂಲ್ ಮಾಜಿ ನಿರ್ದೇಶಕ ಭಾಸ್ಕರ್, ಮುಸ್ಲಿಂ ಮುಖಂಡ ಸಾದತ್ ಉಲ್ಲಾ, ಕಳಲುಘಟ್ಟ ಗ್ರಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಮಾಜಿ ಎನ್‌ಪಿಎ ಸದಸ್ಯ ಆಂಜನಮೂರ್ತಿ, ಗ್ರಾಪಂ ಉಪಾಧ್ಯಕ್ಷ ವಾಸುದೇವ್, ಮಾಜಿ ಸದಸ್ಯರಾದ ಹರೀಶ್, ಮುಖಂಡರಾದ ರಂಗನಾಥ್, ಗಂಗಪ್ಪ, ತ್ಯಾಮಗೊಂಡ್ಲು ಪುರುಷೋತ್ತಮಗೌಡ, ಸೋಮಶೇಖರ್, ದೊಡ್ಡಬೆಲೆ ಆರೀಫ್, ಗಂಗಣ್ಣ, ಧರಣೀಶ್, ಹರೀಶ್, ಅತಿಕ್, ಆಂಜನಮೂರ್ತಿ, ಬಳ್ಳಗೆರೆ ಚಂದ್ರಣ್ಣ, ಅರ್ಜುನ್, ಕಳಲುಘಟ್ಟ ಪಿಡಿಒ ಗೀತಾಮಣಿ, ಕಾರ್ಯದರ್ಶಿ ನಾಚಾರಮ್ಮ ಉಪಸ್ಥಿತರಿದ್ದರು.
ಪೋಟೋ 2 :ತ್ಯಾಮಗೊಂಡ್ಲು ಹೋಬಳಿಯ ಸುಬ್ರಹ್ಮಣ್ಯನಗರದ ಅಲ್ಪಸಂಖ್ಯಾಂತರ ಕಾಲೋನಿಯಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು.