ಸಾರಾಂಶ
- 2ನೇ ಹಂತದಲ್ಲಿ ₹1 ಕೋಟಿ ವೆಚ್ಚದ ಪೆವಿಲಿಯನ್ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ । ಕ್ಲಬ್ ಹೌಸ್ ನಿರ್ಮಾಣಕ್ಕೂ ಚಿಂತನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ದಾವಣಗೆರೆಯಲ್ಲಿ ವ್ಯವಸ್ಥಿತ ಕ್ರೀಡಾಂಗಣ ಆಗಬೇಕೆಂಬ ಕನಸು ಸಾಕಾರಗೊಳ್ಳುತ್ತಿದೆ. ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ನಿರ್ಮಾಣ ಹಂತದ ಮೈದಾನದ ಪಕ್ಕದಲ್ಲೇ ಇರುವ ಜಾಗವನ್ನು ಕ್ಲಬ್ ಹೌಸ್ ನಿರ್ಮಿಸಲು ಮಂಜೂರು ಮಾಡುವಂತೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಬಳಿ ಚರ್ಚಿಸಲಾಗುವುದು ಎಂದು ಸಂಸ್ಥೆ ತುಮಕೂರು ವಲಯ ಅಧ್ಯಕ್ಷ, ಜಿಲ್ಲಾ ಪರಿಷತ್ತು ಮಾಜಿ ಅಧ್ಯಕ್ಷ ಎಸ್.ಎಸ್. ಬಕ್ಕೇಶ್ ಹೇಳಿದರು.ನಗರದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಕೆಎಸ್‌ಸಿಎ ವತಿಯಿಂದ ಸುಮಾರು ₹3.5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಟರ್ಫ್ ಅಂಕಣದಲ್ಲಿ ಶುಕ್ರವಾರ 2ನೇ ಹಂತದಲ್ಲಿ ₹1 ಕೋಟಿ ವೆಚ್ಚದ ಪೆವಿಲಿಯನ್ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಇದೇ ಜಾಗಕ್ಕೆ ಹೊಂದಿಕೊಂಡಿರುವ ಸುಮಾರು ಅರ್ಧ ಎಕರೆಗೂ ಅಧಿಕ ಜಾಗವನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಮೀಸಲಿಟ್ಟಿದ್ದು, ಅದನ್ನು ಕೆಎಸ್‌ಸಿಐ ಮೈದಾನಕ್ಕೆ ನೀಡಲು ಕೋರಲಾಗುವುದು ಎಂದರು.
ಹಿರಿಯ ಕ್ರೀಡಾಪಟುಗಳು ಸಹ ಶಾಸಕರು, ಸಚಿವರನ್ನು ಭೇಟಿ ಮಾಡಿ, ಲಿಖಿತ ಮನವಿ ಸಲ್ಲಿಸಬೇಕು. ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸ್ವತಃ ಕ್ರಿಕೆಟ್ ಪಟುವಾಗಿದ್ದಾರೆ. ಆದಷ್ಟು ಬೇಗನೆ ಆದ್ಯತೆ ಮೇಲೆ ಜಾಗ ಮಂಜೂರಾಗುತ್ತದೆ ಎಂಬ ವಿಶ್ವಾಸವಿದೆ. ಈ ಹಿಂದೆ ರಣಜಿ ಪಂದ್ಯಗಳನ್ನು ಆಡಿಸಿದ್ದ ನಂತರ ಇಲ್ಲಿ ರಣಜಿ ಸೇರಿದಂತೆ ಅಂತಹ ಮಹತ್ವದ ಪಂದ್ಯಗಳು ಆಗಿಲ್ಲ. ಇಲ್ಲಿ ಈಗ ನಿರ್ಮಾಣ ಆಗುತ್ತಿರುವ ಮೈದಾನವು ಅಂತಹ ಪಂದ್ಯಗಳು ಇಲ್ಲಿ ನಡೆಯುವಂತೆ ವ್ಯವಸ್ಥಿತ ಕ್ರೀಡಾಂಗಣ ಇಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಬಕ್ಕೇಶ ಹೇಳಿದರು.ದೂಡಾ ಆರ್ಥಿಕ ನೆರವು ನೀಡಲಿ:
ದೂಡಾದಿಂದಲೂ ಕೆಎಸ್‌ಸಿಎ ಮೈದಾನ ನಿರ್ಮಾಣಕ್ಕೆ ಪ್ರಾಧಿಕಾರದ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸಹಕಾರ ನೀಡಿ, ಆರ್ಥಿಕ ನೆರವನ್ನೂ ಪ್ರಾಧಿಕಾರದಿಂದ ಒದಗಿಸಬೇಕು. ದಾವಣಗೆರೆಯಲ್ಲಿ ಉತ್ತಮ ಕ್ರಿಕೆಟ್ ಆಟಗಾರರು ಹೊರಹೊಮ್ಮುತ್ತಿದ್ದು, ರಾಜ್ಯ, ರಾಷ್ಟ್ರ ತಂಡವನ್ನು ಪ್ರತಿನಿಧಿಸುವಂತಹ ಕ್ರೀಡಾಪಟುಗಳನ್ನು ಇಲ್ಲಿನ ಕ್ರಿಕೆಟ್ ಕ್ಲಬ್‌ಗಳು, ಕ್ರಿಕೆಟ್ ತರಬೇತುದಾರರು, ಹಿರಿಯ ಕ್ರೀಡಾಪಟುಗಳು ತಯಾರು ಮಾಡಬೇಕು. ಆದಷ್ಟು ಬೇಗನೆ ಗುಣಮಟ್ಟದ, ಮಾದರಿ ಕ್ರೀಡಾಂಗಣ, ಪೆವಿಲಿಯನ್, ಕ್ಲಬ್ ಹೌಸ್ ಸಹ ಇಲ್ಲಿ ನಿರ್ಮಾಣವಾಗಲಿ ಎಂದು ಸ್ವತಃ ಹಿರಿಯ ಕ್ರಿಕೆಟ್ ಪಟುವಾದ ಎಸ್.ಎಸ್. ಬಕ್ಕೇಶ್ ಹಾರೈಸಿದರು. ದಾವಣಗೆರೆ ಕ್ರಿಕೆಟ್ ಕ್ಲಬ್ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ತುಮಕೂರು ವಲಯ ಅಧ್ಯಕ್ಷ ಎಸ್.ಎಸ್. ಬಕ್ಕೇಶ್ ಅವರ ಸಲಹೆಯಂತೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಬಳಿ ಪಟೇಲ್ ಬಡಾವಣೆಯ ಕೆಎಸ್‌ಸಿಎ ಮೈದಾನಕ್ಕೆ ಅಗತ್ಯ ಭೂಮಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.ಮುಂಚೆ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಟರ್ಫ್ ಅಂಕಣ ನಿರ್ಮಾಣಕ್ಕೆ ಕೆ.ಶಶಿಧರ್ ಶ್ರಮಿಸಿದ್ದರು. ಇದೀಗ ಜೆ.ಎಚ್. ಪಟೇಲ್ ಬಡಾವಣೆಯ ಕೆಎಸ್‌ಸಿಎ ಮೈದಾನ ಮಂಜೂರಾತಿ, ಇದೀಗ ಹೊಸದಾಗಿ ಟರ್ಫ್, ಪೆವಿಲಿಯನ್ ನಿರ್ಮಾಣಕ್ಕೂ ಟೊಂಕಕಟ್ಟಿ ನಿಂತಿದ್ದಾರೆ ಎಂದರು.
ತುಮಕೂರು ವಲಯ ಸಂಚಾಲಕ ಕೆ.ಶಶಿಧರ್ ಮಾತನಾಡಿ, ಸುಮಾರು ₹3.5 ಕೋಟಿ ವೆಚ್ಚದಲ್ಲಿ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಟರ್ಫ್ ಮೈದಾನ ನಿರ್ಮಿಸಲಾಗುತ್ತಿದೆ. ಹಂತ ಹಂತವಾಗಿ ಸಂಸ್ಥೆಯಿಂದ ಅನುದಾನ ಬರುತ್ತಿದೆ. ಈಗಾಗಲೇ ಟರ್ಫ್ ಅಂಕಣ ನಿರ್ಮಿಸುವ ಕಾಮಗಾರಿ ಭರದಿಂದ ಸಾಗಿವೆ. ಇಂದು ಪೆವಿಲಿಯನ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದೇವೆ.ಹೊರ ಊರಿನಿಂದ ಬಂದ ತಂಡಗಳಿಗೆ ತಂಗಲು ವಸತಿಗೆ ಅಗತ್ಯ ಜಾಗದ ಅವಶ್ಯಕತೆ ಇದೆ. ಎಸ್.ಎಸ್. ಬಕ್ಕೇಶರ ಸೂಚನೆಯಂತೆ ಸಚಿವರು, ಶಾಸಕರನ್ನು ನಾವೆಲ್ಲರೂ ಭೇಟಿ ಮಾಡಿ, ಮನವಿ ಅರ್ಪಿಸಲಿದ್ದೇವೆ ಎಂದು ಹೇಳಿದರು.
ಸುಮಾರು 8.2 ಎಕರೆ ಎಕರೆ ಜಾಗದಲ್ಲಿ ಕ್ರಿಕೆಟ್ ಅಂಕಣ, ಪೆವಿಲಿಯನ್ ನಿರ್ಮಾಣವಾಗುತ್ತಿದೆ. ಕೆಎಸ್‌ಸಿಎನಿಂದ ಇಲ್ಲಿ ಅತ್ಯುತ್ತಮ ಮಟ್ಟದ ಕ್ರಿಕೆಟ್ ಅಂಕಣ, ಪೆವಿಲಿಯನ್, ಡಾರ್ಮೆಂಟರಿ, ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಸಾಕಷ್ಟು ಅತ್ಯಾಧುನಿಕ ಸೌಲಭ್ಯಗಳುಳ್ಳ ಮೈದಾನ ತಲೆ ಎತ್ತಲಿದೆ. ಸುಸಜ್ಜಿನ ಕ್ರಿಕೆಟ್ ಮೈದಾನ ನಿರ್ಮಾಣ ನಮ್ಮೆಲ್ಲಾ ಹಿರಿಯ ಆಟಗಾರರ ಕನಸಾಗಿದೆ. ಅದು ಈಗ ಸಾಕಾರಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಡಾರ್ಮೆಟರಿ, ಸ್ವಿಮ್ಮಿಂಗ್ ಪೂಲ್, ಕ್ರಿಕೆಟ್ ಅಕಾಡೆಮಿ, ಕ್ಲಬ್ ಹೌಸ್ ನಿರ್ಮಿಸುವ ಯೋಜನೆಯೂ ಇದೆ ಎಂದು ತಿಳಿಸಿದರು.ಡಿಸಿಸಿ, ಯುನೈಟೆಡ್ ಕ್ರಿಕೆಟರ್ಸ್, ವೀನಸ್ ಸೇರಿದಂತೆ ವಿವಿಧ ಕ್ರಿಕೆಟ್ ಕ್ಲಬ್‌ಗಳ ಹಿರಿಯರಾದ ಎಲ್.ಎಂ. ಪ್ರಕಾಶ, ಬಾಲಕೃಷ್ಣ, ಮೋಹನ ರಾವ್, ರೊಳ್ಳಿ ಮಂಜುನಾಥ, ಹರಿಹರದ ಎಚ್.ಎಸ್. ರಾಘವೇಂದ್ರ ಉಪಾಧ್ಯ, ಪಾಲಿಕೆ ಮಾಜಿ ಸದಸ್ಯ ಸುರಭಿ ಎಸ್.ಶಿವಮೂರ್ತಿ, ಶಾಮನೂರು ತಿಪ್ಪೇಶ, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಉಪಾಧ್ಯಕ್ಷ ಸಿದ್ದಯ್ಯ ಹಿರೇಮಠ, ಮುದೇಗೌಡ್ರ ಜಗದೀಶ, ಶಾಮನೂರು ವೇದಮೂರ್ತಿ, ಕೆ.ಎನ್.ಗೋಪಾಲಕೃಷ್ಣ, ಕುಮಾರ, ತಿಮ್ಮೇಶ, ತೇಜಮೂರ್ತಿ ನಾಯಕ, ಪವನಕುಮಾರ ಕಿರುವಾಡಿ, ಅರುಣ, ಕಂಪನಿಯ ನಟರಾಜ, ಸಂತೋಷ, ದೂಡಾ ಅಧಿಕಾರಿಗಳು ಇದ್ದರು.
- - --4ಕೆಡಿವಿಜಿ5, 6.ಜೆಪಿಜಿ:
ದಾವಣಗೆರೆ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಕೆಎಸ್‌ಸಿಎನಿಂದ ₹1 ಕೋಟಿ ವೆಚ್ಚದ ಪೆವಿಲಿಯನ್ ನಿರ್ಮಾಣ ಕಾಮಗಾರಿಗೆ ತುಮಕೂರು ವಲಯ ಅಧ್ಯಕ್ಷ, ಹಿರಿಯ ಕ್ರಿಕೆಟ್ ಪಟು ಎಸ್.ಎಸ್.ಬಕ್ಕೇಶ್, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಭೂಮಿಪೂಜೆ ನೆರವೇರಿಸಿದರು.