ಶಾಸಕ ತಮ್ಮಯ್ಯ ಅಭಿಮತ । ದಂಟರಮಕ್ಕಿ ಬಡಾವಣೆಯಲ್ಲಿ ಸಿಎಂ ವಿಶೇಷ ಅನುದಾನದಡಿ ವಿವಿಧ ರಸ್ತೆ -ಚರಂಡಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಜತೆಗೆ ಸರ್ಕಾರ ಬಡವರ ಪರ ಚಿಂತನೆಯೊಂದಿಗೆ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ದಂಟರಮಕ್ಕಿ ಬಡಾವಣೆಯಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಡಿ ಕೈಗೆತ್ತಿಕೊಂಡ ವಿವಿಧ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಸರ್ಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಬೇಕು ಎಂಬ ಉದ್ದೇಶದಿಂದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡು ಜನಸಂಪರ್ಕ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿಧವಾ ವೇತನ, ಪಿಂಚಣಿ, ಬಿಪಿಎಲ್ ಕಾರ್ಡ್, ನೀರಾವರಿ, ಮೆಸ್ಕಾಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ ಎಂದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಚಿಕ್ಕಮಗಳೂರು ವಿಧಾನಸಭಾಕ್ಷೇತ್ರಕ್ಕೆ ₹50 ಕೋಟಿ ವಿಶೇಷ ಅನುದಾನ ದೊರೆತಿದ್ದು, ಅದರಲ್ಲಿ ₹17.50 ಕೋಟಿ ಲೋಕೋಪಯೋಗಿ ಇಲಾಖೆ ರಸ್ತೆಗಳಿಗೆ,₹ 10.50 ಕೋಟಿ ನಗರಸಭೆ ವ್ಯಾಪ್ತಿಯ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಮತ್ತು ₹10.50 ಕೋಟಿ ಗ್ರಾಮೀಣ ಪ್ರದೇಶಗಳ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.ದಂಟರಮಕ್ಕಿ ಭಾಗದಲ್ಲಿ ಪ್ರಸ್ತುತ ಸುಮಾರು ₹40 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹಿಂದಿನ ಅನುದಾನದಲ್ಲಿ ಸುಮಾರು ₹30 ಲಕ್ಷ ವೆಚ್ಚದಲ್ಲಿ ಡಾಂಬರೀಕರಣ ನಡೆದಿದೆ. ಇದೀಗ ಕೈಗೆತ್ತಿಕೊಂಡ ಕಾಮಗಾರಿಗಳೊಂದಿಗೆ ಒಟ್ಟು ₹80 ಲಕ್ಷ ವೆಚ್ಚದ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಿ ಜನವರಿ ವೇಳೆಗೆ ಸಾರ್ವಜನಿಕರ ಬಳಕೆಗೆ ಮುಕ್ತ ಗೊಳಿಸುವ ಗುರಿ ಹೊಂದಲಾಗಿದೆ ಎಂದರು.ಕಳೆದ ಜನವರಿಯಲ್ಲಿ ಚಿಕ್ಕಮಗಳೂರು ನಗರದ ವಿವಿಧ ಪ್ರಮುಖ ರಸ್ತೆಗಳಿಗೆ ಸುಮಾರು ₹12.50 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮಾಡ ಲಾಗಿದೆ ಎಂದು ಹೇಳಿದರು.ಗ್ರಾಮೀಣ ಭಾಗದಲ್ಲೂ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಗಾಣದಾಳ ಹಾಗೂ ಮಲ್ಲಂದೂರು ಭಾಗದಲ್ಲಿ ಮೆಸ್ಕಾಂಗೆ ಸಂಬಂಧಿಸಿದ ಹೊಸ ಕಚೇರಿ ಹಾಗೂ ವಿದ್ಯುತ್ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಕ್ರಮ ಕೈಗೊಳ್ಳಲಾಗಿದೆ. ಸಚಿವ ಕೆ.ಜೆ.ಜಾರ್ಜ್ಅವರು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ ಎಂದರು.ವಿಧಾನ ಪರಿಷತ್ ಸದಸ್ಯೆಎ.ವಿ. ಗಾಯತ್ರಿ ಶಾಂತೇಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಅನುದಾನದಡಿ ಕೈಗೆತ್ತಿ ಕೊಂಡ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಎಂದು ಹೇಳಿದರು.ರಸ್ತೆ ನಿರ್ಮಾಣವಾದ ಮೂರು ತಿಂಗಳಲ್ಲೇ ಗುಂಡಿ ಬೀಳುವಂತಾಗ ಬಾರದು. ಕಾಮಗಾರಿಯ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಹಾಗೂ ನಗರಸಭಾ ಸದಸ್ಯರು ಹೆಚ್ಚಿನ ಗಮನ ಹರಿಸಬೇಕು.ಸರ್ಕಾರ ನೀಡಿರುವ ಅನುದಾನ ಸಮರ್ಪಕವಾಗಿ ಸದ್ಬಳಕೆ ಮಾಡಿ ದೀರ್ಘಕಾಲ ಬಾಳಿಕೆ ಬರುವ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.ಆಲ್ದೂರು ಸಮೀಪದ ಪೆಟ್ರೋಲ್ ಬಂಕ್ ಹಾಗೂ ದೊಡ್ಡಬಾಗಲುಹಳ್ಳಿ ಭಾಗಗಳಲ್ಲಿ ನಿರ್ಮಿಸಲಾದ ರಸ್ತೆಗಳಿಗೆ ಕೆಲವೇ ತಿಂಗಳಲ್ಲಿ ದೊಡ್ಡ ಗುಂಡಿ ಗಳು ಬಿದ್ದಿರುವುದನ್ನು ಗಮನಿಸಿದ್ದೇನೆ. ಇಂತಹ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಗಳ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದರು.ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜೇಗೌಡ ಮಾತನಾಡಿ ಐದು ಗ್ಯಾರಂಟಿ ಯೋಜನೆಗಳಿಗೆ ಸಾವಿರಾರು ಕೋಟಿ ಅನುದಾನ ನೀಡುತ್ತಿರುವ ಸಂದರ್ಭದಲ್ಲಿಯೂ ಚಿಕ್ಕಮಗಳೂರು ವಿಧಾನಸಭಾಕ್ಷೇತ್ರಕ್ಕೆ ಹೆಚ್ಚಿನಅನುದಾನತರುವಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದರು.ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಜಾಗರ, ತೊಗರಿಹಂಕಲ್ ಪಂಚಾಯಿತಿ ಸೇರಿದಂತೆ ಕ್ಷೇತ್ರದ ವಿವಿಧ ಭಾಗಗಳಿಗೂ ಹೆಚ್ಚಿನ ಅನುದಾನತಂದು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.ದಂಟರಮಕ್ಕಿ ಹಾಗೂ ಕೆಂಪನಹಳ್ಳಿ ಪ್ರದೇಶಗಳು ಹಿಂದಿನಿಂದಲೂ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದವು. ಇದೀಗ ದಂಟರಮಕ್ಕಿ ಭಾಗಕ್ಕೆ ₹80 ಲಕ್ಷ ವೆಚ್ಚದ ಕಾಮಗಾರಿ ಕೈಗೆತ್ತಿಕೊಂಡಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಈ 2 ಪ್ರದೇಶಗಳಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಪಡಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಭವ್ಯಾ ಮಂಜುನಾಥ್, ಉಪಾಧ್ಯಕ್ಷೆ ಲಲಿತಾ ರವಿನಾಯಕ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಪುಟ್ಟೇಗೌಡ, ರುದ್ರೇಗೌಡ, ರಾಮಚಂದ್ರ, ಮಂಜುನಾಥ್, ನಗರಸಭಾ ಸದಸ್ಯರಾದ ಗುರುಮಲ್ಲಪ್ಪ, ವಿಜಯಪುರ ಲಕ್ಷ್ಮಣ, ಜಗದೀಶ್, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಉಪಸ್ಥಿತರಿದ್ದರು.-- ಬಾಕ್ಸ್--- ಮತದಾರ ಪಟ್ಟಿ ಪರಿಶೀಲಿಸಿಕೊಳ್ಳಿ
ಮತದಾರರ ಪಟ್ಟಿಯ ಎಸ್‌ಐಆರ್ ಪ್ರಕ್ರಿಯೆ ಕುರಿತು ಜಾಗೃತಿ ವಹಿಸುವಂತೆ ಮನವಿ ಮಾಡಿದರು. ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಯಾವುದೇ ಪಕ್ಷ ಅಥವಾ ಜಾತಿಗೆ ಸೇರಿದವರಾದರೂ ಮತದಾನ ಮಾಡುವುದು ಅವರ ಹಕ್ಕು. ಅರ್ಹರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ ಎಂದು ಎಚ್.ಡಿ.ತಮ್ಮಯ್ಯ ಹೇಳಿದರು.