ಸಾರಾಂಶ
ಹಾನಗಲ್ಲ: ಪಂಚಮಸಾಲಿ ಸಮುದಾಯಕ್ಕೆ ಸಾಮಾಜಿಕ ಕ್ಷೇತ್ರಗಳಲ್ಲಿ ನ್ಯಾಯ ಒದಗಿಸಿಕೊಡಲು ಬದ್ಧನಾಗಿದ್ದು, ಸಂಘಟನೆಯೇ ಮೊದಲ ಆದ್ಯತೆ. ಸಮಾಜ ಜಾಗೃತಿಯೇ ನಮ್ಮ ಬದ್ಧತೆ ಎಂದು ನೂತನವಾಗಿ ಆಯ್ಕೆಯಾದ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಕರಬಸಪ್ಪ ಶಿವೂರ ತಿಳಿಸಿದರು.ಇಲ್ಲಿನ ಕುಮಾರೇಶ್ವರ ವಿರಕ್ತಮಠದಲ್ಲಿ ಆಯೋಜಿಸಿದ್ದ ಸಮಾಜದ ಸಂಘಟನಾ ಸಭೆಯಲ್ಲಿ ಸರ್ವಾನುಮತದಿಂದ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿ ಮಾತನಾಡಿ, ತಾಲೂಕಿನಲ್ಲಿ ಬಹುಸಂಖ್ಯಾತರಾಗಿರುವ ಪಂಚಮಸಾಲಿ ಸಮುದಾಯ ವಿವಿಧ ರಂಗಗಳಲ್ಲಿ ಸ್ಥಾನಮಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿಲ್ಲ. ಅತಿ ದೊಡ್ಡ ಸಮುದಾಯವಾಗಿದ್ದರೂ ನಮ್ಮ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ. ಸಂಘಟನೆ ಮೂಲಕ ಉತ್ತರ ನೀಡುವುದು ಮಾತ್ರವಲ್ಲ, ನಮಗೆ ದಕ್ಕಬೇಕಾದ ಸ್ಥಾನಮಾನಗಳನ್ನು ಗಿಟ್ಟಿಸಿಕೊಳ್ಳಲು ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧ. ನನಗೆ ಸಮಾಜ ನೀಡಿದ ಸೇವಾ ಅವಕಾಶವನ್ನು ಸಮಾಜದ ಹಿತಕ್ಕಾಗಿ ಪರಿಪೂರ್ಣವಾಗಿ ವಿನಿಯೋಗಿಸುತ್ತೇನೆ ಎಂದರು.ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಗಡಿ ಮಾತನಾಡಿ, ಹಾವೇರಿ ಜಿಲ್ಲಾ ಕೇಂದ್ರ ಸ್ಥಳದಲ್ಲಿ ಕಿತ್ತೂರು ಚೆನ್ನಮ್ಮನ ಪುತ್ಥಳಿ ಅನಾವರಣ, ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇಡೀ ಜಿಲ್ಲೆಯ ಎಲ್ಲ ಸಮಾಜದವರ ಸಹಕಾರದಿಂದ ಈ ಬಾರಿ ಸಮಾಜಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಪೂರೈಸಿಕೊಳ್ಳಲು ಸಂಘಟನಾತ್ಮಕ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.ಸಮಾಜದ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ವೀರೇಶ ಮತ್ತಿಹಳ್ಳಿ ಮಾತನಾಡಿ, ಕಿತ್ತಾಡುವುದನ್ನು ಬಿಡೋಣ. ಒಡೆದಾಳುವವರ ಬಗೆಗೆ ಎಚ್ಚರಿಕೆ ಇಡೋಣ ಎಂದರು.ಗಣ್ಯರಾದ ಬಸವಣ್ಣೆಪ್ಪ ಬೆಂಚಳ್ಳಿ, ಮಾಲತೇಶ ಸೊಪ್ಪಿನ, ಕೆ.ಬಿ. ಪಾಟೀಲ, ರಾಜಣ್ಣ ಬೆಟಗೇರಿ, ಮಾರುತಿ ಶಿಡ್ಲಾಪೂರ, ಸಿದ್ದಲಿಂಗಪ್ಪ ಕಮಡೊಳ್ಳಿ, ಎನ್.ಎಸ್. ಪಡೆಪ್ಪನವರ, ಎಚ್.ಎಚ್. ರವಿಕುಮಾರ, ಎನ್.ಬಿ. ಪೂಜಾರ, ಸಿ. ಮಂಜುನಾಥ, ಬಸಣ್ಣ ಸೂರಗೊಂಡರ, ನಾಗರಾಜ ಕ್ಯಾಬಳ್ಳಿ, ಬಿ.ಶಿವಬಸಪ್ಪ, ಕೆ.ಎಂ. ವಿಜಾಪುರ, ಎ.ಎಸ್. ಬಳ್ಳಾರಿ ವೇದಿಕೆಯಲ್ಲಿದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್.ಎಂ. ಕೋತಂಬರಿ ಕಾರ್ಯಕ್ರಮ ನಿರೂಪಿಸಿದರು.