ಸಾರಾಂಶ
ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಕಾರ್ಯಕರ್ತರ ಸಭೆಕನ್ನಡಪ್ರಭ ವಾರ್ತೆ ಕೂಡ್ಲಿಗಿ
ಬರುವ ಚುನಾವಣೆಗಳು ಹಾಗೂ ಪಕ್ಷದ ಹಿತದೃಷ್ಟಿಯಿಂದ ತಳಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡುವ ಮೂಲಕ ಹಳ್ಳಿಗಾಡಿನಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು, ಮುಖಂಡರನ್ನು ಗುರುತಿಸಿ ಅವರೊಂದಿಗೆ ಪಕ್ಷ ಕಟ್ಟಲು ಮುಂದಾಗಿರುವುದಾಗಿ ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ಬಣವಿಕಲ್ಲು ನಾಗರಾಜ ತಿಳಿಸಿದರು.ಭಾನುವಾರ ತಾಲೂಕಿನ ಹೂಡೇಂ ಜಿಪಂ ಕ್ಷೇತ್ರ ವ್ಯಾಪ್ತಿಯ ಆಲೂರು ಗ್ರಾಪಂ ವ್ಯಾಪ್ತಿಯಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಅಯೋಜಿಸಿದ್ದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೂಡೇಂ, ಪೂಜಾರಹಳ್ಳಿ, ಜುಮ್ಮೋಬನಹಳ್ಳಿ ಆಲೂರು ಹಿರೇಕುಂಬಳಗುಂಟೆ ಗ್ರಾಪಂ ವ್ಯಾಪ್ತಿಯಲ್ಲಿ ಸಭೆ ಮಾಡಿ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿಗೆ ಗಟ್ಟಿನೆಲೆ ಇದೆ ಎಂಬುದನ್ನು ಸಾಬೀತು ಮಾಡಲಾಗುವುದು ಎಂದರು. ಪಕ್ಷಕ್ಕಾಗಿ ದುಡಿದ ಪ್ರತಿಯೊಬ್ಬ ಕಾರ್ಯಕರ್ತರನ್ನೂ ಗೌರವಿಸಲಿದ್ದು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದಂತೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಹೆಚ್ಚಿನ ಆಸಕ್ತಿ ವಹಿಸಲಾಗುವುದು. ಮುಂಬರುವ ದಿನಗಳಲ್ಲಿ ಬಿಜೆಪಿಯ ಸಂಘಟನಾ ಶಕ್ತಿಯನ್ನು ವೃದ್ಧಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ ಮಾತನಾಡಿ, ಕಳೆದ ಬಾರಿ ತಾಪಂ, ಜಿಪಂ ಚುನಾವಣೆಯಲ್ಲಿ ನಮ್ಮ ಪಕ್ಷವು ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಉತ್ತಮ ಹಿಡಿತ ಸಾಧಿಸಿತ್ತು. ಹೀಗಾಗಿ ಮತ್ತೆ ಗ್ರಾಮೀಣ ಭಾಗದ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಎಲ್ಲರೂ ಮಾಡಬೇಕೆಂದರು.ಈ ಸಂದರ್ಭ ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಹುಲಿಕೆರೆ ಗೀತಾ, ನಿಕಟಪೂರ್ವ ಅಧ್ಯಕ್ಷ ಚನ್ನಪ್ಪ, ಪೂರ್ವ ಜಿಲ್ಲಾ ಕಾರ್ಯದರ್ಶಿ ಸೂರ್ಯಪಾಪಣ್ಣ, ಆಲೂರು ಗ್ರಾಪಂ ಮುಖಂಡರಾದ ಪದ್ಮನಾಭರೆಡ್ಡಿ, ಮಂಡಲ ಕಾರ್ಯದರ್ಶಿ ಮಂಜುನಾಥ ನಾಯಕ ಸಿದ್ದೇಶ್, ಯಂಬಳಿ ಗಂಗಣ್ಣ, ಕರಿಬಸವರೆಡ್ಡಿ ಮಲ್ಲಿಕಾರ್ಜುನಗೌಡ, ವಸಂತಕುಮಾರ್, ಸಣ್ಣ ಬಾಲಪ್ಪ, ಬಸವರಾಜ, ಬೋಜಣ್ಣ, ಕಲ್ಲಹಳ್ಳಿ ಶರಣಪ್ಪ, ಹೂಡೇಂ ಸುರೇಶ್ ಮುಂತಾದವರು ಇದ್ದರು.