ವಸತಿ, ಮೂಲಭೂತ ಸೌಲಭ್ಯ ಕಲ್ಪಿಸಲು ಆದ್ಯತೆ

| Published : Apr 05 2025, 12:48 AM IST

ಸಾರಾಂಶ

ಗುಡಿಸಲು ಮುಕ್ತ ಗ್ರಾಮ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಪ್ರತಿ ಗ್ರಾಮದಲ್ಲೂ ನಾಲ್ಕಾರು ಗುಡಿಸಲುಗಳು ಇವೆ. ಎಷ್ಟೋ ಜನ ವಾಸಿಸಲು ಮನೆಗಳಿಲ್ಲದೇ ಗುಡಿಸಲುಗಳಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಜನಕ್ಕೆ ವಸತಿ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲು ನಾನು ಕಟೀ ಬದ್ದನಾಗಿ ಕಾಯಾ, ವಾಚಾ, ಮನಸಾ ಶ್ರಮಿಸುವುದಾಗಿ ಶಾಸಕರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಡವರ ಕಷ್ಟ ಹಸಿವು ಮತ್ತು ಬಡತನ ಅನುಭವಿಸಿದವನಿಗೇ ಅರಿವಾಗುವುದೇ ಹೊರತು ಹೊಟ್ಟೆ ತುಂಬಿದವನಿಗಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದಡಿ ಶುಕ್ರವಾರ ತಾಲೂಕಿನ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಂಗ ಮಾರಪ್ಪನಹಳ್ಳಿ, ಮಾರಪ್ಪನಹಳ್ಳಿ ಗ್ರಾಮಗಳಿಗೆ 36 ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಗ್ರಾಮದ ಜನತೆಯ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜನರ ಬದುಕು ದುಸ್ತರ

ತಾವು ಬಡತನ ಮತ್ತು ಹಸಿವು ಅನುಭವಿಸಿ, ಬಡವರ ಬದುಕು ಬವಣೆ ಅರಿತಿದ್ದೇನೆ. ಮೂದಲು ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮವನ್ನು ಮೊದಲು ಮುದ್ದೇನ ಹಳ್ಳಿ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಿದಾಗ ಅಲ್ಲಿಯ ಜನರ ಬದುಕು ನಾ ತಿಳಿದಷ್ಟು ಚನ್ನಾಗಿಲ್ಲ, ನಂತರ ಮಂಚೇನಹಳ್ಳಿಯ ಭಾಗದ ಹಳ್ಲಿಗಳಲ್ಲಿ ಸಂಚರಿಸಿದಾಗ ಆ ಜನರ ಬದುಕು ಮತ್ತಷ್ಟು ಕಷ್ಟ ಎಂದು ತಿಳಿಯಿತು ಎಂದರು.

ನಂತರ ಗೊಲ್ಲ ಹಳ್ಳಿ ಪಂಚಾಯತಿ ಬಾಗದಲ್ಲಿ ಸಂಚರಿಸಿದಾಗ ಈ ಬಾಗದ ಜನದ ಬದುಕು ದುಸ್ತರವಾಗಿರುವುದನ್ನು ಕಂಡಿದ್ದೇನೆ. ಈ ಭಾಗ ನಗರಕ್ಕೆ ಕೂಗಳತೆ ದೂರದಲ್ಲಿದ್ದರೂ ಸಹ ಕುಡಿಯುವ ಶುದ್ದ ನೀರು, ಮೂಲ ಭೂತ ಸೌಕರ್ಯಗಳಿಂದ ವಂಚಿತರಾಗಿರುವುದನ್ನು ನೋಡಿದಾಗ ನನ್ನ ಮನಸ್ಸಿಗೆ ನೋವಾಗಿದೆ ಎಂದರು.

ವಸತಿ ಸೌಲಭ್ಯ ಕಲ್ಪಿಸಲು ಬದ್ಧ

ಗುಡಿಸಲು ಮುಕ್ತ ಗ್ರಾಮ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಪ್ರತಿ ಗ್ರಾಮದಲ್ಲೂ ನಾಲ್ಕಾರು ಗುಡಿಸಲುಗಳು ಇವೆ. ಎಷ್ಟೋ ಜನ ವಾಸಿಸಲು ಮನೆಗಳಿಲ್ಲದೇ ಗುಡಿಸಲುಗಳಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಜನಕ್ಕೆ ವಸತಿ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲು ನಾನು ಕಟೀ ಬದ್ದನಾಗಿ ಕಾಯಾ, ವಾಚಾ, ಮನಸಾ ಶ್ರಮಿಸುವೆ. ಅದೇ ರೀತಿ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದ ಜನತೆ ಸರ್ಕಾರದಿಂದ ನ್ಯಾಯ ಬದ್ಧವಾಗಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಕಚೇರಿಗೆ ಬಂದಾಗ ಅವರ ಕೆಲಸವನ್ನು ನಿಷ್ಠ ಮತ್ತು ಪ್ರಾಮಾಣಿಕತೆಯಿಂದ ಮಾಡಿಕೊಡಬೇಕು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಇಂದು ಬೆಳಗ್ಗೆ ಏಳು ಗಂಟೆಗೆ ನಿಗದಿತ ವೇಳೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರು ತಾಲೂಕಿನ ಗೊಲ್ಲಹಳ್ಳಿ ಪಂಚಾಯಿತಿ ಜಂಗ ಮಾರಪ್ಪನಹಳ್ಳಿ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ಅವರಿಗೆ ಆರತಿ ನೀಡಿ ತಿಲಕ ಹಚ್ಚಿ ಸ್ವಾಗತಿಸಿದರು.

ಶಾಸಕರಿಗೆಅದ್ಧೂರಿ ಸ್ವಾಗತ

ಶುದ್ದಕುಡಿಯುವ ನೀರಿನ ಘಟಕ, ರಸ್ತೆ ಸಮಸ್ಯೆ, ಸ್ಮಶಾನಗಳ ಒತ್ತುವರಿ ಜಾಗ ತೆರುವು, ಚರಂಡಿ, ವಿದ್ಯತ್ ದೀಪ, ವಸತಿ,ನಿವೇಶನ, ಖಾತೆ ಮುಂತಾದ ಸಮಸ್ಯೆಗಳನ್ನು ಶಾಸಕರಲ್ಲಿ ಗ್ರಾಮೀಣ ಜನತೆ ತೋಡಿಕೊಂಡರು. ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದ ಅಡಿಯಲ್ಲಿ ಶಾಸಕರು ತಮ್ಮ ಗ್ರಾಮಕ್ಕೆ ಬಂದೇ ಬರುತ್ತಾರೆ ಎಂಬುದನ್ನು ಮೊದಲೇ ಅರಿತಿದ್ದ ಗ್ರಾಮಸ್ಥರು ಊರಿನ ಪ್ರವೇಶ ದ್ವಾರದಲ್ಲಿಯೇ ಅವರನ್ನು ಸ್ವಾಗತಿಸಿ ಪಟಾಕಿಗಳನ್ನು ತಿಳಿಸಿ ಸಂಭ್ರಮದಿಂದ ಬರಮಾಡಿಕೊಂಡರು.

ಈ ವೇಳೆ ತಾಲೂಕು ತಹಶೀಲ್ದಾರ್ ಅನಿಲ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಂಜುಳಾ,ಎಡಿಎಲ್ಆರ್ ವಿವೇಕ್ ಮಹದೇವ್, ಸಿಡಿಪಿಓ ಗಂಗಾಧರ್, ಪಿಡಿಓ ಸತ್ಯಪ್ರಸಾದ್, ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ಜಿ.ಉಮೇಶ್, ರಮೇಶ್ ಬಾಬು, ಮಧು, ವಿನಯ್ ಬಂಗಾರಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.