ಈ ಬಾರಿ ತುಮಕೂರು ದಸರಾ ಉತ್ಸವದಲ್ಲಿ ಗಣ್ಯರು, ಸನ್ಮಾನಿತರಿಗೆ ನೀಡುವ ಸ್ಮರಣಿಕೆ, ಸನ್ಮಾನದ ಹಾರ, ಶಾಲು ಇತ್ಯಾದಿಗಳಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಹಾಗೂ ವೇದಿಕೆಗಳ ನಿರ್ವಹಣೆ ಮತ್ತು ಸನ್ಮಾನ ಸಮಿತಿಯ ಅಧ್ಯಕ್ಷೆ ಸೋನಿಯಾ ವರ್ಣೇಕರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಈ ಬಾರಿ ತುಮಕೂರು ದಸರಾ ಉತ್ಸವದಲ್ಲಿ ಗಣ್ಯರು, ಸನ್ಮಾನಿತರಿಗೆ ನೀಡುವ ಸ್ಮರಣಿಕೆ, ಸನ್ಮಾನದ ಹಾರ, ಶಾಲು ಇತ್ಯಾದಿಗಳಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಹಾಗೂ ವೇದಿಕೆಗಳ ನಿರ್ವಹಣೆ ಮತ್ತು ಸನ್ಮಾನ ಸಮಿತಿಯ ಅಧ್ಯಕ್ಷೆ ಸೋನಿಯಾ ವರ್ಣೇಕರ್ ತಿಳಿಸಿದರು.

ನಗರದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ತುಮಕೂರು ದಸರಾ- 2026ರ ವೇದಿಕೆಗಳ ನಿರ್ವಹಣೆ ಮತ್ತು ಸನ್ಮಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಸರಾ ಉತ್ಸವದಲ್ಲಿ ಗಣ್ಯರು, ಅತಿಥಿಗಳು, ವಿವಿಧ ಸ್ಪರ್ಧೆಗಳ ವಿಜೇತರು, ವಿಶೇಷ ಆಹ್ವಾನಿತರು ಹಾಗೂ ಜಿಲ್ಲಾಧಿಕಾರಿಗಳು ಸೂಚಿಸುವವರಿಗೆ ಸನ್ಮಾನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಸನ್ಮಾನ ಸಮಿತಿಯಿಂದ ನಿರ್ವಹಿಸಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಮೊಮೆಂಟೊ, ಸನ್ಮಾನಕ್ಕೆ ಶಾಲು, ಹಾರ, ಸ್ವಾಗತಕ್ಕೆ ಹೂಗುಚ್ಛಗಳ ವ್ಯವಸ್ಥೆಯನ್ನು ಮಾಡಬೇಕು. ಪ್ರತಿ ಕಾರ್ಯಕ್ರಮದ ನಂತರ ಭಾಗವಹಿಸಿದ ಕಲಾ ತಂಡಗಳಿಗೆ ಸನ್ಮಾನ ನೆರವೇರಿಸಬೇಕು. ಈ ಎಲ್ಲಾ ಕೆಲಸಗಳನ್ನು ಸಮಿತಿ ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು.

ಈ ಬಾರಿ ಸನ್ಮಾನಿತರಿಗೆ, ಅತಿಥಿ-ಗಣ್ಯರಿಗೆ ನೀಡುವ ಹಾರ, ಸ್ಮರಣಿಕೆಗಳ ಆಯ್ಕೆಯಲ್ಲಿ ಜಿಲ್ಲೆಯ ಸ್ಥಳೀಯ ಉತ್ಪನ್ನಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಕೈಮಗ್ಗದಿಂದ ತಯಾರಿಸಲಾಗುವ ಶಾಲು, ಸ್ಥಳೀಯವಾಗಿ ತಯಾರಿಸುವ ಪೇಟ, ಸ್ಮರಣಿಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಜಿಲ್ಲೆಯ ಕಲ್ಲೂರು ಮತ್ತಿತರ ಕಡೆಗಳಲ್ಲಿ ಕಾರ್ಯಕ್ರಮಕ್ಕೆ ಬೇಕಾದ ಸನ್ಮಾನ ಸಾಮಾಗ್ರಿಗಳು ದೊರೆಯುತ್ತವೆ. ಇವುಗಳನ್ನು ಪರಿಶೀಲಿಸಿ, ಸ್ಥಳೀಯತೆಗೆ ಒತ್ತು ಕೊಡೋಣ ಎಂದರು.ವಿಶ್ವಕರ್ಮ ಸಮುದಾಯದವರು ಅತ್ಯುತ್ತಮವಾದ ಸ್ಮರಣಿಕೆಗಳನ್ನು ತಯಾರಿಸುತ್ತಾರೆ. ಮಹಿಳಾ ಸ್ವಸಹಾಯ ಸಂಘಗಳು ಕೂಡ ವಿವಿಧ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಆಶಯದಂತೆ ಸ್ಥಳೀಯ ಉತ್ಪಾದಕರಿಂದ ಸ್ಮರಣಿಕೆ ಹಾಗೂ ಕರ ಕುಶಲ ವಸ್ತುಗಳನ್ನು ಖರೀದಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಸಮಿತಿಯ ಸದಸ್ಯರು ಸ್ಥಳೀಯ ಉತ್ಪನ್ನಗಳ ಬಗ್ಗೆ ಮುಂದಿನ ಒಂದೆರಡು ದಿನಗಳಲ್ಲಿ ಸಮಿತಿಗೆ ಮಾಹಿತಿ ನೀಡಬೇಕು. ಸಮಯಾವಕಾಶ ಕಡಿಮೆ ಇರುವುದರಿಂದ ವೆಚ್ಚಗಳಿಗೆ ಸಂಬಂಧಿಸಿದಂತೆ ಸಮಗ್ರ ಅಂದಾಜು ಪಟ್ಟಿಯನ್ನು ತಯಾರಿಸಿ ಸಾಕಷ್ಟು ಮುಂಚಿತವಾಗಿ ಪ್ರಧಾನ ಸಮಿತಿಗೆ ಸಲ್ಲಿಸಿ ಪೂರ್ವಾನುಮತಿ ಪಡೆಯಬೇಕಿದೆ. ಹಾಗಾಗಿ ಸೋಮವಾರದ ಒಳಗೆ ಸನ್ಮಾನ ಸಾಮಾಗ್ರಿಗಳ ಖರೀದಿ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಬೇಕಿದೆ. ಸೋಮವಾರ ಮತ್ತೊಮ್ಮೆ ಸಭೆ ಕರೆದು, ಆ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ಮಹಾಲಿಂಗ, ವಿಜಯ್ ಕುಮಾರ್, ಅಧಿಕಾರೇತರ ಸದಸ್ಯರಾದ ಅಶ್ವತ್ಥ್ ನಾರಾಯಣ ಕೊರಟಗೆರೆ, ಕೆ.ಎಂ.ಸುಜಾತ, ಕವಿತಾ, ಲೀಲಮ್ಮ, ಅಶೋಕ್ ಆರ್.ಪಿ, ಯೋಗೀಶ್ ಮಳೆಕಲ್ಲಹಳ್ಳಿ, ಹೇಮಂತ್ ಎನ್, ವಾಜಿದ್ ಖಾನ್ ಉಪಸ್ಥಿತರಿದ್ದರು.