ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ಸಚಿವ ತಂಗಡಗಿ

| Published : Jan 27 2025, 12:45 AM IST

ಸಾರಾಂಶ

ಕಾರಟಗಿಯಿಂದ ಕನಕಗಿರಿಗೆ ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಕಾಟಾಪುರ ಕೆರೆಯವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕನಕಗಿರಿ

ಮುಂದಿನ ತಿಂಗಳಲ್ಲಿ ₹50 ಕೋಟಿ ವೆಚ್ಚದಲ್ಲಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಕೊಪ್ಪಳ ರಸ್ತೆಗೆ ಹೊಂದಿಕೊಂಡಿರುವ ಬಸವೇಶ್ವರ ವೃತ್ತದಲ್ಲಿ ರಾಜ್ಯ ಹೆದ್ದಾರಿ ೬೩ ಕನಕಗಿರಿಯಿಂದ ರಾಂಪುರದವರೆಗಿನ ೧೦ ಕಿ.ಮೀ ವರೆಗಿನ ₹ ೬ ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕಾರಟಗಿಯಿಂದ ಕನಕಗಿರಿಗೆ ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಕಾಟಾಪುರ ಕೆರೆಯವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಉಳಿದ ಕನಕಗಿರಿಯವರೆಗಿನ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಕೆಕೆಆರ್‌ಡಿಬಿಯಡಿ ₹೧೦ ಕೋಟಿ ಅನುದಾನ ಮೀಸಲಿಡಲಾಗಿದೆ. ಕನಕಗಿರಿ ಪುರ ಪ್ರವೇಶದಲ್ಲಿ ಡಿವೈಡರ್, ಎರಡು ಕಡೆಗಳಲ್ಲಿ ಚರಂಡಿ ನಿರ್ಮಾಣ ಮಾಡಲಾಗುವುದು. ಮುಂದಿನ ತಿಂಗಳಲ್ಲಿ ₹೫೦ ಕೋಟಿ ವೆಚ್ಚದಲ್ಲಿ ಕ್ಷೇತ್ರದ ರಸ್ತೆಗಳ ನಿರ್ಮಾಣಕ್ಕೆ ಪೂಜೆ ಸಲ್ಲಿಸಲಾಗುವುದು.

ಕಳೆದ ಎರಡು ವರ್ಷದಲ್ಲಿ ₹೨೦೦ ಕೋಟಿ ಅನುದಾನವನ್ನು ತಂದು ರಸ್ತೆ ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದರು.

ವಾರದೊಳಗೆ ೧೦೦ ಬೆಡ್ ಆಸ್ಪತ್ರೆಗೆ ಸ್ಥಳ ಸರ್ಕಾರದ ಹೆಸರಿನಲ್ಲಿ ನೋಂದಣಿಯಾಗಲಿದೆ. ಆಸ್ಪತ್ರೆ ನಿರ್ಮಾಣಕ್ಕೆ ₹೪೨ ಕೋಟಿ ಮೀಸಲಿರಿಸಲಾಗಿದೆ. ನ್ಯಾಯಾಲಯ ಆರಂಭ ಹಾಗೂ ಕ್ರೀಡಾಂಗಣ ನಿರ್ಮಾಣಕ್ಕೆ ಭೂದಾನಿಗಳ ಜತೆಗೆ ಮಾತುಕತೆ ನಡೆಸಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ತಾಲೂಕು ವಕ್ತಾರ ಶರಣಪ್ಪ ಭತ್ತದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ ಇತರರಿದ್ದರು. ಹೈಕಮಾಂಡ್‌ ಸೂಚನೆಯಂತೆ ನಡೆಯುತ್ತಿರುವೆ:

ನಮ್ಮ ಪಕ್ಷದ ಕೇಂದ್ರದ ನಾಯಕರು ಯಾವುದೇ ಕಾರಣಕ್ಕೂ ಮಾತನಾಡಬಾರದು ಎಂದು ಸೂಚಿಸಿದ್ದಾರೆ.

ನಮ್ಮದು ಕಾಂಗ್ರೆಸ್ ಒಂದೇ ಪಕ್ಷ. ನಮ್ಮಲ್ಲಿ ಅಧಿಕಾರಕ್ಕಾಗಿ ಮಾತನಾಡಿರಬಹುದು, ಆದರೆ ನಾನು ಕೇಂದ್ರದ ನಾಯಕರ ಸೂಚನೆಯಂತೆ ನಡೆದುಕೊಳ್ಳುತ್ತಿದ್ದೇನೆ.ಶಿವರಾಜ ತಂಗಡಗಿ ಸಚಿವರಸ್ತೆ ಅಭಿವೃದ್ಧಿಗೆ ವಿಧಾನಸಭಾ ಕ್ಷೇತ್ರಕ್ಕೆ ₹25 ಕೋಟಿ:

ಜಿಲ್ಲಾದ್ಯಂತ ಬಹುತೇಕ ರಸ್ತೆಗಳು ಹದಗೆಟ್ಟಿರುವುದರಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹25 ಕೋಟಿ ನೀಡಲಾಗುತ್ತಿದ್ದು, ಶೀಘ್ರದಲ್ಲಿಯೇ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಕೆಆರ್ ಡಿಬಿಯಿಂದ ₹10 ಕೋಟಿ ರುಪಾಯಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ₹15 ಕೋಟಿ ಸೇರಿದಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ಬಿಡುಗಡೆ ಮಾಡಲು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಇನ್ಮುಂದೆ ರಸ್ತೆಗಳ ಸಮಸ್ಯೆ ನೀಗಲಿದೆ ಎಂದರು.ಜಿಲ್ಲೆಯಲ್ಲಿ ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆ ಮಾಡುವ ಅಗತ್ಯವಿದೆ. ಕಳೆದ ವರ್ಷ ಬಹಳ ತಗ್ಗಿರುವುದರಿಂದ ಜ. 31ರಂದು ಮುಖ್ಯೋಪಾಧ್ಯಯರಿಗೆ ವಿಶೇಷ ಕಾರ್ಯಾಗಾರ ಮಾಡಲಾಗುತ್ತಿದೆ. ಮುಖ್ಯೋಪಾಧ್ಯಯರಿಂದ ಮಾಹಿತಿ ಪಡೆದು, ಅಗತ್ಯ ಕ್ರಮವಹಿಸಲಾಗುವುದು. ಶಿಕ್ಷಕರ ಕೊರತೆಯೂ ಇದ್ದು, ನೀಗಿಸಲು ಯತ್ನಿಸಲಾಗುತ್ತದೆ.

ಹಾಸ್ಟೆಲ್ ಸಮಸ್ಯೆಯೂ ಇದ್ದು, ಬೇಡಿಕೆಗೆ ತಕ್ಕಷ್ಟು ಹಾಸ್ಟೆಲ್ ಇಲ್ಲವಾಗಿವೆ. ಹೀಗಾಗಿ, ಹಾಸ್ಟೆಲ್ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುತ್ತದೆ. ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ 8 ಪಿಎಚ್ ಸಿ ಮತ್ತು 100 ಹಾಸಿಗೆಯ ಐದು ಆಸ್ಪತ್ರೆಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗುತ್ತದೆ ಎಂದರು.ಜಿಲ್ಲೆಯಲ್ಲಿ ರಂಗಮಂದಿರ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಉದ್ಘಾಟನೆ ಮಾಡಲಾವುದು. ಹಾಗೆಯೇ ಕಿಮ್ಸ್ ಆಸ್ಪತ್ರೆಯ ಕಟ್ಟಡ ಕಾಮಗಾರಿಯೂ ಪೂರ್ಣಗೊಂಡಿದ್ದು, ಉದ್ಘಾಟಿಸಲಾಗುವುದು ಎಂದರು.