ಬಿಳಿಗಿರಿ ರಂಗನಬೆಟ್ಟದ ಅಭಿವೃದ್ಧಿಗೆ ಆದ್ಯತೆ: ಕೆ.ವೆಂಕಟೇಶ್

| Published : May 16 2025, 01:49 AM IST

ಬಿಳಿಗಿರಿ ರಂಗನಬೆಟ್ಟದ ಅಭಿವೃದ್ಧಿಗೆ ಆದ್ಯತೆ: ಕೆ.ವೆಂಕಟೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಯಳಂದೂರು ತಾಲೂಕಿನ ಬಿಳಿಗಿರಿ ರಂಗನಾಥಸ್ವಾಮಿ ದೇಗುಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಭೇಟಿ ನೀಡಿದ ದೇವರ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ಪ್ರಸಿದ್ಧ ಯಾತ್ರಸ್ಥಳವಾಗಿರುವ ಬಿಳಿಗಿರಿರಂಗ ಬೆಟ್ಟದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಇಲ್ಲಿಗೆ ಬೇಕಿರುವ ಸವಲತ್ತುಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ರೇಷ್ಮೆ, ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾಹಿತಿ ನೀಡಿದರು.ಬುಧವಾರ ತಾಲೂಕಿನ ಬಿಳಿಗಿರಿ ರಂಗನಬೆಟ್ಟದ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಮಾತನಾಡಿದರು. ಈಚೆಗೆ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ನಿತ್ಯ ದಾಸೋಹ ವ್ಯವಸ್ಥೆ ಇದೆ. ಆದರೆ ದಾಸೋಹ ಭವನವಿಲ್ಲ. ಈಗ ದೇಗುಲದ ಹಿಂಭಾಗದಲ್ಲಿ ಶೆಡ್‌ನಲ್ಲಿ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದ್ದು ಇಲ್ಲಿಗೆ ಸುಸಜ್ಜಿತ ದಾಸೋಹ ಭವನ ವ್ಯವಸ್ಥೆಯನ್ನು ಮಾಡಿಸಿಕೊಡಬೇಕೆಂದು ಸ್ಥಳೀಯರು ಮನವಿ ಸಲ್ಲಿಸಿದರು. ಅಲ್ಲದೆ, ಬಸ್ ನಿಲ್ದಾಣವೂ ಇಲ್ಲಿ ಇಲ್ಲ. ಬರುವ ಪ್ರವಾಸಿಗರಿಗೆ ಇದರಿಂದ ತೊಂದರೆಯಾಗುತ್ತಿದೆ. ಬಿಸಿಲು, ಮಳೆಯಲ್ಲಿ ಇವರು ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಆದಷ್ಟು ಬೇಗ ಇದನ್ನು ನಿರ್ಮಾಣ ಮಾಡಬೇಕು. ಇಲ್ಲಿಗೆ ಬರುವ ಪ್ರವಾಸಿಗರಿಗೆ ಹೈಟೆಕ್ ಶೌಚಗೃಹವನ್ನು ನಿರ್ಮಿಸಬೇಕು. ಯಳಂದೂರಿನಿದ ಬಿಳಿಗಿರಿ ರಂಗನಬೆಟ್ಟಕ್ಕೆ ತೆರಳುವ ರಸ್ತೆ ಮಾರ್ಗವು ಅತ್ಯಂತ ಚಿಕ್ಕದಾಗಿದೆ. ಅಲ್ಲದೆ ರಸ್ತೆ ಬದಿಯಲ್ಲಿ ಮಳೆಯಿಂದ ಕೊರಕಲು ಉಂಟಾದರೆ ಮತ್ತೊಂದು ವಾಹನ ಸಂಚರಿಸುವುದು ಕಷ್ಟವಾಗುತ್ತದೆ. ಅರಣ್ಯ ಇಲಾಖೆ ಇಲ್ಲಿಗೆ ಮಣ್ಣು ಸುರಿಯಲು ಅವಕಾಶ ನೀಡುವುದಿಲ್ಲ. ಹಾಗಾಗಿ ಈ ರಸ್ತೆಯನ್ನು ವಿಸ್ತರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಎಲ್ಲ ಸಮಸ್ಯೆಗಳಿಗೂ ನಾನು ಸೂಕ್ತ ಮಾಹಿತಿ ಪಡೆದು ಹಂತಹಂತವಾಗಿ ಅಭಿವೃದ್ಧಿಗೆ ಕ್ರಮ ವಹಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ದೇಗುಲದಲ್ಲಿ ವಿಶೇಷ ಪೂಜೆ, ಅರ್ಚನೆಯನ್ನು ಮಾಡಲಾಯಿತು. ಸಚಿವರಿಗೆ ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು. ಸಚಿವರು ಹಾಗೂ ನೆರೆದಿದ್ದ ಎಲ್ಲ ಅಧಿಕಾರಿಗಳು ಆಶೀರ್ವಾದ ಪಡೆದು ಪ್ರಸಾದ ಸವಿದರು.ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಸಿಇಒ ಮೋನಾ ರೋತ್, ಎಸ್ಪಿ ಡಾ.ಬಿ.ಟಿ.ಕವಿತಾ, ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಶ್ರೀರೂಪ, ಜಂಟಿ ನಿರ್ದೇಶಕಿ ಪ್ರತಿಭಾ, ರಿಜಿಸ್ಟ್ರಾರ್ ಡಾ.ಟಿ.ರಾಮೇಗೌಡ, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಐ.ಈ. ಬಸವರಾಜು, ಸಿಪಿಐ ಶ್ರೀಕಾಂತ್ ಪಿಎಸ್‌ಐ ಆಕಾಶ್, ವಿಜ್ಞಾನಿಗಳಾದ ಡಾ.ಮಂಜುನಾಥ್, ಡಾ.ರಮೇಶ್, ಡಾ.ಪಿ.ಜೆ.ರಾಜು ದೇಗುಲದ ಪಾರುಪತ್ತೇದಾರ ರಾಜು, ಪ್ರಧಾನ ಅರ್ಚಕ ರವಿಕುಮಾರ್, ಶ್ರೀನಿವಾಸ್, ಶೇಷಾದ್ರಿ ಸೇರಿದಂತೆ ಇತರರು ಹಾಜರಿದ್ದರು.