ಕಾರಟಗಿ: ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಗಳ ಕೊರತೆ ಎದುರಾಗುವ ಸಾಧ್ಯತೆ ಇದ್ದು, ವ್ಯಾಪಾರಿಗಳು ಸರ್ಕಾರದ ಮಾರ್ಗಸೂಚಿ ಪ್ರಕಾರ ರಸಗೊಬ್ಬರಗಳನ್ನು ಮಾರಾಟ ಮಾಡಬೇಕು ಮತ್ತು ರೈತರಿಗೆ ಪರ್ಯಾಯ ರಸಗೊಬ್ಬರ ಮತ್ತು ದ್ರವ್ಯರೂಪದ ರಸಗೊಬ್ಬರಗಳ ಬಳಕೆಗೆ ಕುರಿತು ಮಾಹಿತಿ ನೀಡುವಂತೆ ಕೃಷಿ ಇಲಾಖೆ ಜಂಟಿನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಬೂದುಗುಂಪಾ ರಸ್ತೆಯಲ್ಲಿನ ತಾಲೂಕು ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಮುಂಗಾರು ಹಂಗಾಮಿನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಕೊಪ್ಪಳ ಜಿಲ್ಲೆಗೆ ಪ್ರಸಕ್ತ ರಸಗೊಬ್ಬಗಳ ಕೊರತೆ ಇಲ್ಲ. ಭವಿಷ್ಯದಲ್ಲಿ ಬೇಡಿಕೆ ಅನ್ವಯ ಪೂರೈಕೆಗೆ ವಿಳಂಬವಾಗುವ ಸಾಧ್ಯತೆ ಹೆಚ್ಚು.ಈಗಾಗಲೇ ರಸಗೊಬ್ಬರಗಳ ದಾಸ್ತಾನು, ಪೂರೈಕೆಗೆ ಇಲಾಖೆ ಅಗತ್ಯ ಕ್ರಮಕೈಗೊಳ್ಳುತ್ತದೆ. ಆದರೆ ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದ ಕಾರ್ಮೋಡ ಮುಗಿಲು ಮುಟ್ಟಿದ್ದು, ರಸಗೊಬ್ಬರಗಳ ಉತ್ಪಾದನೆ ಮತ್ತು ಆಮದಿನಲ್ಲಿ ವ್ಯತ್ಯಯ ಉಂಟಾಗುವುದರಿಂದ ರಾಜ್ಯದ ಬೇಡಿಕೆಯನ್ವಯ ರಸಗೊಬ್ಬರಳ ಸರಬರಾಜು ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸಕ್ತ ವಿದ್ಯಮಾನ ಗಮನಿಸಿ ರಸಗೊಬ್ಬರ ಮಾರಾಟ ಮಾಡುವಲ್ಲಿ ಸರ್ಲಾರ ಕೆಲವೊಂದು ಮಾರ್ಗಸೂಚಿ ವ್ಯಾಪಾರಿಗಳಿಗೆ ನೀಡಿದ್ದು, ಇವುಗಳನ್ನು ಪಾಲನೆ ಮಾಡಬೇಕೆಂದು ಜಂಟಿ ನಿರ್ದೇಶಕರು ಸೂಚಿಸಿದರು. ಮುಖ್ಯವಾಗಿ ವಹಿಸಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿ ರಸಗೊಬ್ಬರ ದಾಸ್ತಾನು ಮತ್ತು ಮಾರಾಟ ಮಾಡುವ ಸಂದರ್ಭದಲ್ಲಿ ಉಂಟಾಗಬಹುದಾದ ಸಮಸ್ಯೆ ಯಾವ ರೀತಿ ಪರಿಷ್ಕರಣೆ ಮಾಡಬೇಕೆಂದು ಮಾಹಿತಿ ನೀಡಿದರು.ಇನ್ನು ವ್ಯಾಪಾರಿಗಳು ಅಂಗಡಿಗೆ ಬಂದವರಿಗೆಲ್ಲ ಗೊಬ್ಬರ ಮಾರಾಟ ಮಾಡುವ ಹಾಗಿಲ್ಲ. ಭೂ ಮಾಲಿಕ ರೈತನ ಗುರುತಿನ ಹೊಂದಿದವರಿಗೆ ರಸಗೊಬ್ಬರ ನೀಡಬೇಕು. ಅಂಗಡಿಗೆ ನೇರವಾಗಿ ಗುತ್ತಿಗೆ ಮಾಡುವ ರೈತರು ಬಂದರೆ ಅವರ ಭೂ ಮಾಲಿಕನ ಗುರುತಿನ ಚೀಟಿ ಮತ್ತು ಅನುಮತಿ ಪಡೆದಿರುವುದನ್ನು ಗಮನಿಸಿ ರಸಗೊಬ್ಬರ ನೀಡಬೇಕೆಂದು ನಿಯಮ ಇದ್ದು ಈ ನಿಯಮ ಪಾಲನೆ ಮಾಡುವಂತೆ ಮಾರಾಟಗಾರರಿಗೆ ಸೂಚಿಸಿದರು.
ಮುಖ್ಯವಾಗಿ ರೈತರು ಸಹ ರಸಗೊಬ್ಬರ ವೈಜ್ಞಾನಿಕವಾಗಿ ಬಳಕೆ ಮಾಡಿ ಭೂಮಿಯ ಆರೋಗ್ಯ ಕಾಪಾಡಬೇಕು ಹಾಗೂ ಪರ್ಯಾಯ ರಸಗೊಬ್ಬರ ಮತ್ತು ದ್ರವರೂಪದ ರಸಗೊಬ್ಬರಗಳ ಬಳಕೆ ಕುರಿತು ವ್ಯಾಪಾರಿಗಳು ರೈತರಿಗೆ ಮಾಹಿತಿ ನೀಡಲು ಕೃಷ್ಣಮೂರ್ತಿ ಸೂಚಿಸಿದರು.
ಗಂಗಾವತಿ ಸಹಾಯಕ ಕೃಷಿ ನಿರ್ದೇಶಕಿ ಸಿ.ಆರ್.ಅಭಿಲಾಷ ಮಾತನಾಡಿ, ಜಿಲ್ಲೆಯ ರಸಗೊಬ್ಬರ ಮಾರಾಟಗಾರರಿಗೆ ಪಿಓಎಸ್(ಪಾಯಿಂಟ್ ಔಟ್ ಆಫ್ ಸೇಲ್)ಮಷಿನ್ ನಲ್ಲಿ ನಮೂದಿಸಿರುವ ರಸಗೊಬ್ಬರ ದಾಸ್ತಾನು ಹಾಗೂ ವಾಸ್ತವ ದಾಸ್ತಾನು ನಡುವೆ ಯಾವುದೇ ವ್ಯತ್ಯಾಸವಿರದಂತೆ ದಾಖಲೆ ನೀಡಬೇಕು. ಪ್ರತಿ ತಿಂಗಳ ೫ ನೇ ತಾರೀಖಿನೊಳಗೆ ರಸಗೊಬ್ಬರ ಮತ್ತು ಕೀಟನಾಶಕ ದಾಸ್ತಾನು ವಿವರ ಕೃಷಿ ಇಲಾಖೆಗೆ ಸಲ್ಲಿಸಬೇಕು ಮತ್ತು ಅವಧಿ ಮೀರಿದ ಯಾವುದೇ ಕೀಟನಾಶಕ ಮಾರಾಟ ಮಾಡದಂತೆ ಕ್ರಮವಹಿಸಲು ಸೂಚನೆ ನೀಡಿದರು.
ರಸಗೊಬ್ಬರ ಮತ್ತು ಕ್ರೀಟನಾಶಕ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಸಂಕನಾಳ ಮಾತನಾಡಿ, ಪ್ರತಿಯೊಬ್ಬ ವರ್ತಕರು ಮಾರಾಟ ಮಳಿಗೆಯಲ್ಲಿ ಕಡ್ಡಾಯವಾಗಿ ದರ ಮತ್ತು ಕೃಷಿ ಪರಿಕರ ದಾಸ್ತಾನು ವಿವರ ಪ್ರದರ್ಶಿಸಬೇಕು. ಪರವಾನಗಿ ನವೀಕರಣ ಮತ್ತು ರಸಗೊಬ್ಬರ ಗೋದಾಮ ಅಧಿಕೃತ ಮಾಹಿತಿ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಬೇಕೆಂದು ರಸಗೊಬ್ಬರು ಮಾರಾಟಗಾರರಿಗೆ ಸೂಚಿಸಿದರು.ಕಾರಟಗಿ ತಾಲೂಕು ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರ ಸಂಘ ಅಧ್ಯಕ್ಷ ಸಂಗಮೇಶಗೌಡ ಕೊಂತನೂರು ಪಟೇಲ್ ಮಾತನಾಡಿ, ರಸಗೊಬ್ಬರ ದಾಸ್ತಾನು ಮತ್ತು ವಿತರಣೆ ಮಾಡುವ ಸಂದರ್ಭದಲ್ಲಿ ವರ್ತಕರಿಗೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಜಂಟಿ ಕೃಷಿ ನಿರ್ದೇಶಕರಿಗೆ ವಿವರಿಸಿದರು. ಜತೆಗೆ ಮುಂಬರುವ ಮುಂಗಾರು ಹಂಗಾಮಿನಲ್ಲಿ ಕಾರಟಗಿ ತಾಲೂಕಿಗೆ ಅವಶ್ಯವಿರುವ ರಸಗೊಬ್ಬರ ಆದ್ಯತೆ ಮೇರೆಗೆ ಪೂರೈಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿದರು.
ಈ ವೇಳೆ ವರ್ತಕರಾದ ಅಮರೇಶ ಸಾಲಗುಂದಿ, ಲಿಂಗಪ್ಪ ರೌಡಕುಂದಿ, ಕಿಂದಿಕ್ಯಾಂಪ್ ಶ್ರೀನಿವಾಸ್, ಭದ್ರರಾವ್ ಬಸವಣ್ಣಕ್ಯಾಂಪ್, ವೀರೇಶ ಶೆಟ್ಟಿ ಸಿದ್ದಾಪುರ, ರುದ್ರಗೌಡ, ಪಂಪನಗೌಡ ತಿಮ್ಮಾಪುರ, ವೆಂಕಟೇಶ್ವರ ರಾವ್ ಚೆಳ್ಳೂರು ಕ್ಯಾಂಪ್, ಶ್ರೀನಿವಾಸ ಗುಂಡೂರುಕ್ಯಾಂಪ್, ಶಂಶಾಲಾಮ್ ಸಿದ್ದಾಪುರ ಸೇರಿದಂತೆ ಇನ್ನಿತರ ವ್ಯಾಪಾರಿಗಳು ಇದ್ದರು. ಕೃಷಿ ಅಧಿಕಾರಿ ಸುಧಾಕರ ನಿರ್ವಹಿಸಿದರು.