ಬಡ ಮಕ್ಕಳ ಶೈಕ್ಷಣಿಕ, ಆರ್ಥಿಕ ಪ್ರಗತಿಗೆ ಆದ್ಯತೆ

| Published : Jun 24 2024, 01:32 AM IST

ಬಡ ಮಕ್ಕಳ ಶೈಕ್ಷಣಿಕ, ಆರ್ಥಿಕ ಪ್ರಗತಿಗೆ ಆದ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್.ಆರ್. ಪಾಟೀಲ ಫೌಂಡೇಶನ್ ವತಿಯಿಂದ ರೋಣದಲ್ಲಿ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಶಾಸಕ ಜಿ.ಎಸ್. ಪಾಟೀಲ್ ಉದ್ಘಾಟಿಸಿದರು.

ರೋಣ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ, ಅವರ ಜೀವನ ರೂಪಿಸುವುದು, ಸಮಾಜದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಬಡ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮ ಮುಖ್ಯ ಉದ್ದೇಶವಾಗಿದ್ದು, ಈ ದಿಶೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಉಚಿತ ತರಬೇತಿ ನೀಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಭಾನುವಾರ ಪಟ್ಟಣದ ರಾಜೀವ ಗಾಂಧಿ ಆಯುರ್ವೇದಿಕ್ ಕಾಲೇಜು ಸಭಾಂಗಣದಲ್ಲಿ ಎಸ್.ಆರ್. ಪಾಟೀಲ ಫೌಂಡೇಶನ್ ವತಿಯಿಂದ ಜರುಗಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಯಾವುದೇ ರಾಜಕೀಯ ಉದ್ದೇಶವಿಲ್ಲದೇ, ಕೇವಲ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಹಿತಿ ದೃಷ್ಟಿಯಿಂದ, ಐಎಎಸ್, ಕೆಎಎಸ್‌, ಐಪಿಎಸ್, ಐಎಫ್‌ಎಸ್ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುವ ನಿಟ್ಟಿನಲ್ಲಿ ನುರಿತ ತಜ್ಞರಿಂದ ತರಬೇತಿ ನೀಡಿ, ಅವರನ್ನು ಸಹ ಶೈಕ್ಷಣಿಕವಾಗಿ ಆರ್ಥಿಕವಾಗಿ ಮುನ್ನೆಲೆಗೆ ತರುವು ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಕೇವಲ ಉಳ್ಳವರ ಮಾತ್ರವಲ್ಲದೇ ಬಡವರ ಮಕ್ಕಳು ತರಬೇತಿ ಪಡೆದುಕೊಂಡು ಸರ್ಕಾರ ಉದ್ಯೋಗ ಪಡೆದುಕೊಳ್ಳಬೇಕು ಎಂಬುದು ನಮ್ಮ ಮಹದಾಸೆಯಾಗಿದೆ. ವಿದ್ಯಾರ್ಥಿಗಳು ಎರಡು ತಿಂಗಳು ಶ್ರದ್ಧೆ ಹಾಗೂ ನಿಷ್ಠೆ, ಆಸಕ್ತಿಯಿಂದ ತರಬೇತಿ ಪಡೆಯಬೇಕು ಎಂದರು.

ಚಾಣಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥ ಮಂಜುನಾಥ ಬಿ. ಮಾತನಾಡಿ, ಸಾವಿರಾರು ರುಪಾಯಿ ಖರ್ಚು ಮಾಡಿ ಅನೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಪಡೆದುಕೊಳ್ಳುತ್ತಾರೆ. ಜಿ.ಎಸ್. ಪಾಟೀಲ ಅವರು ಬಡ ಮಕ್ಕಳಿಗಾಗಿ ನುರಿತ ಶಿಕ್ಷಕರು, ತಜ್ಞರಿಂದ ಉಚಿತ ತರಬೇತಿ ಶಿಬಿರ ಆಯೋಜನೆ ಮಾಡಿದ್ದಾರ. ಗ್ರಾಮೀಣ ಭಾಗದ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅವಕಾಶವು ತಮ್ಮ ಮನೆ ಬಾಗಿಲಿಗೆ ಬಂದಾಗ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಸುದೀರ್ಘ ಎರಡು ತಿಂಗಳ ಕಾಲ ತರಬೇತಿ ಆಯೋಜಿಸಿರುವುದು ರಾಜ್ಯದಲ್ಲಿ ಇದೆ ಮೊದಲು ಎಂದರು.

ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಬೆಳ್ಳುಬ್ಬಿ, ಎನ್.ಎಂ. ಬಿರಾದರ, ಸಿದ್ದಣ್ಣ ದಳವಾಯಿ, ಮಂಜುನಾಥ ಬಿ., ಅಶೋಕ ಮಿರ್ಜಿ, ಟಿ. ಈಶ್ವರ ವಿ.ಆರ್. ಗುಡಿಸಾಗರ, ವೀರಣ್ಣ ಶೆಟ್ಟರ್, ಪಿ.ಬಿ. ಅಳಗವಾಡಿ. ಬಸವರಾಜ ನವಲಗುಂದ, ವಿ.ಬಿ. ಸೋಮನಕಟ್ಟಿಮಠ, ಮುತ್ತಣ್ಣ ಸಂಗಳದ, ಯೂಸೂಫ್ ಇಟಗಿ, ಮಿಥುನ್ ಪಾಟೀಲ, ಪ್ರಶಾಂತ ಪಾಟೀಲ, ಡಾ. ಐ.ಬಿ. ಕೊಟ್ಟೂರಶೆಟ್ಟರ ಉಪಸ್ಥಿತರಿದ್ದರು.