ಪಟ್ಟಣ ಸೇರಿದಂತೆ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆಯಾಗಿದೆ. ಸರ್ಕಾರದಿಂದ ಇನ್ನಷ್ಟು ಅನುದಾನ ಪಡೆದು ಕೊಳ್ಳುವ ಮೂಲಕ ಮತಕ್ಷೇತ್ರದ ವಿವಿಧ ರಸ್ತೆ ಕಾಮಗಾರಿ ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣ ಸೇರಿದಂತೆ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆಯಾಗಿದೆ. ಸರ್ಕಾರದಿಂದ ಇನ್ನಷ್ಟು ಅನುದಾನ ಪಡೆದು ಕೊಳ್ಳುವ ಮೂಲಕ ಮತಕ್ಷೇತ್ರದ ವಿವಿಧ ರಸ್ತೆ ಕಾಮಗಾರಿ ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ಜತ್ತ- ಜಂಬೋಟ ರಾಜ್ಯ ಹೆದ್ದಾರಿಯನ್ನು ಪಟ್ಟಣದಿಂದ ಸಂಕೋನಟ್ಟಿ ಗ್ರಾಮದವರೆಗೆ ಮತ್ತು ತಾಲೂಕಿನ ಹಲ್ಯಾಳ, ದರೂರ ಗ್ರಾಮಗಳ ಹತ್ತಿರ ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಪಟ್ಟಣದ ವಿವಿಧ ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಡಿವೈಡರ್ ನಿರ್ಮಿಸಿ, ಅಲ್ಲಿ ಗಿಡ ಮರಗಳನ್ನು ಬೆಳೆಸಿ, ವಿದ್ಯುತ್ ದೀಪಗಳನ್ನು ಅಳವಡಿಸಿ ಅಥಣಿ ನಗರವನ್ನು ಸುಂದರವಾಗಿ ಹಸಿರೀಕರಣಗೊಳಿಸುವ ಕಾರ್ಯ ನಡೆದಿದೆ. ಅದರಂತೆ ಇನ್ನುಳಿದ ಪದ್ರೇಶಗಳಲ್ಲಿ ಹಂತ ಹಂತವಾಗಿ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಶಿವಯೋಗಿ ವೃತ್ತದಿಂದ ಹೈದರ್ ನಗರದವರಿಗೆ ರಸ್ತೆ ಅಗಲೀಕರಣ ಮಾಡಿ ಡಿವೈಡರ್ ನಿರ್ಮಿಸಲಾಗಿದೆ. ಇನ್ನುಳಿದ ಸಂಕೋನಟ್ಟಿ ಗ್ರಾಮದವರೆಗಿನ ರಸ್ತೆ ಅಗಲೀಕರಣಗೊಳಿಸಿ ಡಿವೈಡರ್ ನಿರ್ಮಾಣ ಮಾಡಲಾಗುವುದು. ಸುಮಾರು ₹3.35 ಕೋಟಿ ವೆಚ್ಚದಲ್ಲಿ ಇನ್ನುಳಿದ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿ ಮಾಡಲಾಗುವುದು. ಇದಕ್ಕೆ ರಸ್ತೆ ಅಕ್ಕಪಕ್ಕದಲ್ಲಿನ ಜನತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಪುರಸಭೆ ಸದಸ್ಯರಾದ ರಾಜಶೇಖರ ಗುಡೋಡಗಿ, ನರಸು ಬಡಕಂಬಿ, ಬಿ.ಎನ್.ಪಾಟೀಲ, ರಮೇಶ ಪವಾರ, ಮಲ್ಲು ಹುದ್ದಾರ, ಉದಯ ಸೊಳಸಿ, ಮುಸ್ತಾಕ್ ಮುಲ್ಲಾ, ಶ್ರೀಶೈಲ ನಾಯಿಕ, ಆಸೀಫ ತಾಂಬೋಳಿ, ಭೀರಪ್ಪ ಯಕ್ಕಂಚಿ, ರವಿ ಬಡಕಂಬಿ, ಆನಂದ ಮಾಕಾಣಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಗದುಮ್ಮ, ಅಭಿಯಂತರ ಪಿ.ಜಿ. ಸೂರ್ಯವಂಶಿ, ಗುತ್ತಿಗೆದಾರ ಎಸ್ ಆರ್ ಘುಳಪ್ಪನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತೇನೆ. ಈ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವಂತೆ ಸಿಎಂ ಮತ್ತು ಡಿಸಿಎಂ ಅವರಿಗೆ ಮನವಿ ಮಾಡುತ್ತೇನೆ.- ಲಕ್ಷ್ಮಣ ಸವದಿ, ಅಥಣಿ ಶಾಸಕರು.