ಅಭಿವೃದ್ಧಿ ಕಾರ್ಯಗಳ ಮೂಲಕ ರಾಮನಗರದ ಸೌಂದರ್ಯ ಹೆಚ್ಚಿಸಲು ಆದ್ಯತೆ : ಶಾಸಕ ಇಕ್ಬಾಲ್ ಹುಸೇನ್

| Published : Dec 09 2024, 12:49 AM IST / Updated: Dec 09 2024, 11:53 AM IST

ಅಭಿವೃದ್ಧಿ ಕಾರ್ಯಗಳ ಮೂಲಕ ರಾಮನಗರದ ಸೌಂದರ್ಯ ಹೆಚ್ಚಿಸಲು ಆದ್ಯತೆ : ಶಾಸಕ ಇಕ್ಬಾಲ್ ಹುಸೇನ್
Share this Article
  • FB
  • TW
  • Linkdin
  • Email

ಸಾರಾಂಶ

ನಗರದ 31 ವಾರ್ಡ್‌ಗಳಲ್ಲಿ ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಕುಡಿಯುವ ನೀರು ಯೋಜನೆ ಸಾಕಾರವಾಗುತ್ತಿದೆ. ಸುಸಜ್ಜಿತವಾಗಿ ಜಿಲ್ಲಾ ಕ್ರೀಡಾಂಗಣ ಸಿದ್ಧ ಮಾಡಿದ್ದು ಮತ್ತಷ್ಟು ಸೌಲಭ್ಯಗಳನ್ನು 5 ಕೋಟಿ ರು. ವೆಚ್ಚದಲ್ಲಿ ಕಲ್ಪಿಸಲಾಗುತ್ತಿದೆ. 

 ರಾಮನಗರ :   ನಗರದ ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳ ಮೂಲಕ ರಾಮನಗರದ ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.

ನಗರದ ಐಜೂರು ವೃತ್ತದಲ್ಲಿ ಆಯೋಜನೆಯಾಗಿದ್ದ ನೂತನ ಎಲ್.ಇ.ಡಿ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿದ ಅವರು, ನಗರದ 31 ವಾರ್ಡುಗಳಿಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ನಗರದ 31 ವಾರ್ಡ್‌ಗಳಲ್ಲಿ ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಕುಡಿಯುವ ನೀರು ಯೋಜನೆ ಸಾಕಾರವಾಗುತ್ತಿದೆ. ಸುಸಜ್ಜಿತವಾಗಿ ಜಿಲ್ಲಾ ಕ್ರೀಡಾಂಗಣ ಸಿದ್ಧ ಮಾಡಿದ್ದು ಮತ್ತಷ್ಟು ಸೌಲಭ್ಯಗಳನ್ನು 5 ಕೋಟಿ ರು. ವೆಚ್ಚದಲ್ಲಿ ಕಲ್ಪಿಸಲಾಗುತ್ತಿದೆ. 162 ಕೋಟಿ ರು. ವೆಚ್ಚದಲ್ಲಿ ಅರ್ಕಾವತಿ ನದಿ ಎರಡೂ ಕಡೆ ವಾಕಿಂಗ್ ಪಾಥ್, 33 ಕೋಟಿ ರು. ವೆಚ್ಚದಲ್ಲಿ ಎಲ್ ಇಡಿ ಅಳವಡಿಕೆ ಮತ್ತು ನಿರ್ವಹಣೆ ಮಾಡಲಾಗುವುದು. ಇದರಿಂದ ನಗರದ ಸೌಂದರ್ಯ ಹೆಚ್ಚಲಿದೆ ಎಂದು‌ ಹೇಳಿದರು.

2018ನೇ ಸಾಲಿನಲ್ಲಿ ಬೇಸ್ ಲೇನ್ ಸರ್ವೇ ಆಧಾರಿತ ಯೋಜನೆಯಾಗಿದ್ದು, ನಗರದ 6 ಸಾವಿರ ವಿದ್ಯುತ್ ಕಂಬಗಳಿಗೆ ಅಳವಡಿಸಲಾಗುವುದು. ಈ ಯೋಜನೆಯಿಂದ ಶೇ.57.7 ರಷ್ಟು ವಿದ್ಯುತ್ ಉಳಿತಾಯವಾಗಲಿದೆ‌ ಎಂದರು.

ಜಿಲ್ಲೆಯ 3 ನಗರಸಭೆ, 2 ಪುರಸಭೆಗಳ ಒಟ್ಟು 18 ಕೋಟಿ ರು. ವೆಚ್ಚದಲ್ಲಿ ಎಲ್ಇಡಿ ದೀಪ ಅಳವಡಿಕೆ ಮತ್ತು 7 ವರ್ಷಗಳ ಕಾಲ ಕಾರ್ಯಾಚರಣೆ ಮತ್ತು ನಿರ್ವಹಣೆ ಒಳಗೊಂಡಿದೆ ‌ಎಂದು ತಿಳಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 100 ಕೋಟಿ ರು. ವೆಚ್ಚದಲ್ಲಿ ರಸ್ತೆಗಳ ಪುನರ್ ನಿರ್ಮಾಣ ಮತ್ತು ಚರಂಡಿ ವ್ಯವಸ್ಥೆ ಕಾಮಗಾರಿ ಸಧ್ಯದಲ್ಲೇ ಆರಂಭವಾಗಲಿದೆ. 20 ವರ್ಷಗಳ ಕಾಲ ಅಭಿವೃದ್ಧಿ ಕಾಣದ ನಗರದಲ್ಲಿ ಅಭಿವೃದ್ಧಿ ಪರ್ವ ಅರಂಭವಾಗುತ್ತಿದೆ ಎಂದರು.

ನಗರವ್ಯಾಪ್ತಿಯಲ್ಲಿ ನಿವೇಶನ ರಹಿತ ಕುಟುಂಬಗಳಿಗೆ ಉಚಿತ ನಿವೇಶನ ವಿತರಿಸಲು ಭೂಮಿ ಗುರುತಿಸಲಾಗಿದೆ. ನಿವೇಶನಕ್ಕೆ ಸುಮಾರು 13 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಅಧಿಕಾರಿಗಳು 8500 ಅರ್ಜಿಗಳು ಅರ್ಹವಾಗಿವೆ ಎಂದು ತಿಳಿಸಿದ್ದಾರೆ. ಸದ್ಯದಲ್ಲೇ ನಿವೇಶನ ವಿಂಗಡಣೆಗೆ ಕಾರ್ಯ ರೂಪ ಸಿಗಲಿದೆ ಎಂದರು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಾಣವಾಗಿರುವ 3 ಲೇಔಟ್‌ಗಳು ನೆನೆಗುದಿಗೆ ಬಿದ್ದಿದ್ದವು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಆಸಕ್ತಿಯಿಂದಾಗಿ ಸರ್ಕಾರ ಒಂದು ಚದರಡಿಗೆ 200 ರು. ಶುಲ್ಕ ನಿಗದಿ ಮಾಡಿದೆ. ನಿವೇಶನ ಮಾಲೀಕರು ಈ ಅಭಿವೃದ್ಧಿ ಶುಲ್ಕ ಪಾವತಿಸಬೇಕಾಗಿದೆ. ನಂತರ ಈ ಬಡಾವಣೆಗಳಲಿ ರಸ್ತೆ, ಚರಂಡಿ, ಬೀದಿ ದೀಪ ಮುಂತಾದ ವ್ಯವಸ್ಥೆಗಳು ನಡೆಯಲಿವೆ. ಜೊತೆಯಲ್ಲಿ ನಿವೇಶನ ಮಾಲೀಕರಿಗೆ ಹಕ್ಕುಪತ್ರಗಳ ವಿತರಣೆಯಾಗಲಿದೆ ಎಂದು ಹೇಳಿದರು.

ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ಸರ್ಕಾರ 5 ಕೋಟಿ ರು. ಅನುದಾನ ಕೊಟ್ಟಿದೆ. ಈ ಪೈಕಿ ಈಗಾಗಲೇ ಕ್ರೀಡಾಂಗಣದಲ್ಲಿ ದೀಪಗಳ ವ್ಯವಸ್ಥೆ ಆಗಿದೆ. ಗ್ರಿಲ್ ವ್ಯವಸ್ಥೆ ಪೂರ್ಣಗೊಂಡಿದೆ. ಉಳಿದ ಅಭಿವೃದ್ಧಿ ಕಾಮಗಾರಿಗಳು ಸದ್ಯದಲ್ಲೇ ಆರಂಭವಾಗಲಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಾತನಾಡಿ, ರಾಮನಗರ ನಗರಸಭೆಯಲ್ಲಿ 5 ಸಾವಿರ ಎಲ್ ಇಡಿ ಅಳವಡಿಕೆ ಒಳ್ಳೆಯ ಕಾರ್ಯಕ್ರಮ, ವಿದ್ಯುತ್ ಉಳಿತಾಯದ ಜೊತೆ ರಾತ್ರಿ ಸಮಯದಲ್ಲಿ ನಿರ್ಭಯವಾಗಿ ಸಾರ್ವಜನಿಕರು ಬಡಾವಣೆಗಳಲ್ಲಿ ಓಡಾಡಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಮಾಜಿ ಶಾಸಕ ಕೆ.ರಾಜು, ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್, ನಗರಸಭಾ ಸದಸ್ಯರಾದ ಬಿ.ಸಿ.ಪಾರ್ವತಮ್ಮ, ವಿಜಯ್ ಕುಮಾರಿ, ಆಯಿಷಾ, ಅಸ್ಮತ್, ಗಿರಿಜ, ಶಿವಸ್ವಾಮಿ ( ಅಪ್ಪಿ), ನಿಜಾಂ ಷರೀಪ್, ಆರೀಪ್, ಸೋಮಶೇಖರ್, ಬೈರೇಗೌಡ, ಅನ್ನು, ಗೋವಿಂದರಾಜು, ಹಾರೋಹಳ್ಳಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ್, ಬಮೂಲ್ ನಿರ್ದೇಶಕ ಹರೀಶ್, ನಗರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

ಕಸ ವಿಲೇವಾರಿಗೂ ವ್ಯವಸ್ಥೆ:

ನಗರ ವ್ಯಾಪ್ತಿಯಲ್ಲಿ ದಿನನಿತ್ಯ ಸುಮಾರು 40 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರ ವೈಜ್ಞಾನಿಕ ವಿಲೇವಾರಿ ಸವಾಲಾಗಿದೆ. ನಾವು ಹಾಗೂ ಜಿಲ್ಲಾಧಿಕಾರಿಗಳು ಬೆಂಗಳೂರು ಎಚ್.ಎ.ಎಲ್ ಬಳಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದಿದ್ದೇವೆ. ಕಸ ವಿಲೇವಾರಿಗೆ ಅಧುನಿಕ ಯಂತ್ರಗಳು ಅಲ್ಲಿ ಬಳಕೆಯಾಗುತ್ತಿವೆ. ತಲಾ 20 ಟನ್ ಕಸವನ್ನು ಅರೆಯುವ ಎರಡು ಯಂತ್ರಗಳನ್ನು ಖರೀದಿಸಲು ಚಿಂತನೆ ನಡೆದಿದೆ. ಈ ವಿಚಾರದಲ್ಲಿ ಸರ್ಕಾರದ ಗಮನಕ್ಕೆ ತರಲಾವುದು. ಒಟ್ಟಾರೆ ರಾಮನಗರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದು ನಮ್ಮ ಆಶಯ.

ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ.