ಸೂರು, ನೀರು, ಸೌಲಭ್ಯ ಕಲ್ಪಿಸಲು ಆದ್ಯತೆ

| Published : Jan 27 2025, 12:46 AM IST

ಸಾರಾಂಶ

ಹರಿಹರ ಬಳಿ ತುಂಗಭದ್ರಾ ನದಿಗೆ ಬ್ಯಾರೇಜ್‌, ದಾವಣಗೆರೆ ಜಲಸಿರಿ ಯೋಜನೆ, ಪೈಪ್‌ ಲೈನ್ ಅಳವಡಿಕೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸೂರು, ನೀರು, ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಹರಿಹರ ಬಳಿ ನದಿಗೆ ಬ್ಯಾರೇಜ್‌ ನಿರ್ಮಾಣ, ಜಲಸಿರಿಯಡಿ ನಗರಕ್ಕೆ ನೀರು ಪೂರೈಕೆ - ಜಿಲ್ಲೆ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ, ಜಿಲ್ಲಾಡಳಿತಗಳು ಹೆಚ್ಚು ಶ್ರಮ ವಹಿಸುತ್ತಿವೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಹರಿಹರ ಬಳಿ ತುಂಗಭದ್ರಾ ನದಿಗೆ ಬ್ಯಾರೇಜ್‌, ದಾವಣಗೆರೆ ಜಲಸಿರಿ ಯೋಜನೆ, ಪೈಪ್‌ ಲೈನ್ ಅಳವಡಿಕೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸೂರು, ನೀರು, ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.

ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ, ಜಿಲ್ಲಾಡಳಿತಗಳು ಹೆಚ್ಚು ಶ್ರಮ ವಹಿಸುತ್ತಿವೆ. ಉತ್ತಮ ಮಳೆ, ಬೆಳೆಯಾಗಿ, ಕೆರೆ ಕಟ್ಟೆಗಳಲ್ಲೂ ನೀರಿದೆ. ರೈತರು ಉತ್ತಮ ಬೆಳೆ ಬೆಳೆದಿದ್ದಾರೆ. ಭದ್ರಾ ಅಣೆಕಟ್ಟೆಯಿಂದಲೂ ಬೇಸಿಗೆ ಬೆಳೆಗೆ ನೀರು ಬರುತ್ತಿದೆ. ಗ್ಯಾರಂಟಿ ಯೋಜನೆಗಳು ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ತಲುಪುವ ಕೆಲಸ ಆಗುತ್ತಿದೆ ಎಂದರು.

ಜಲಸಿರಿ ಯೋಜನೆಯಡಿ ದಾವಣಗೆರೆ ನಗರದಲ್ಲಿ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣವಾಗಿವೆ. ಕೆಲ ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ನೀರು ಬಿಡಲಾಗುತ್ತಿದೆ. ಜಲಸಿರಿ ಬಿಲ್ ಹೆಚ್ಚಿಗೆ ಬಂದಿದೆ ಎಂಬ ಮಾತು ಇತ್ತು. ಆದರೆ, ಅದು ತಾಂತ್ರಿಕ ದೋಷದಿಂದ ಆಗಿದ್ದು ಎಂಬುದಾಗಿ ಮೇಯರ್, ಆಯುಕ್ತರಿಗೆ ಸಂಬಂಧಿಸಿದ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಜಲಸಿರಿಯಡಿ ಶೀಘ್ರವೇ ಎಲ್ಲ ವಾರ್ಡ್‌ಗಳಿಗೂ ನೀರು ಹರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಅಶೋಕ ಚಿತ್ರ ಮಂದಿರ ಬಳಿ ಅವೈಜ್ಞಾನಿಕ ಅಂಡರ್ ಪಾಸ್ ವ್ಯವಸ್ಥೆಯಿಂದ ಸಮಸ್ಯೆ ದಿನದಿನಕ್ಕೂ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಪ್ರಯತ್ನಿಸಿದ್ದು, ಅದು ಫಲ ಕೊಟ್ಟಿದೆ. ಬಿಟಿ ಮನೆತನ, ಕಿರುವಾಡಿ, ಉರೇಕೊಂಡಿ ಹೀಗೆ 8-10 ಕುಟುಂಬದವರ ಮನವೊಲಿಸಿ, ಗೀತಾಂಜಲಿ, ಪುಷ್ಪಾಂಜಲಿ ಎದುರಿನ ರಸ್ತೆಯಂತೆ ರೈಲ್ವೆ ಹಳಿ ಮತ್ತೊಂದು ಭಾಗದಲ್ಲಿ ಶಾಂತಿ ಟಾಕೀಸ್ ಕಡೆಯಿಂದ ಬಂದ ವಾಹನಗಳು ಎಡಕ್ಕೆ ತಿರುಗಲು ಪರ್ಯಾಯ, ಸರ್ವೀಸ್ ರಸ್ತೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಕಿರುವಾಡಿ, ಬಿಟಿ, ಉರೇಕೊಂಡಿ ಇತರೆ ಕುಟುಂಬಗಳ ಜಾಗದಲ್ಲಿ ಪರ್ಯಾಯ ರಸ್ತೆಯನ್ನು ಈರುಳ್ಳಿ ಮಾರುಕಟ್ಟೆ ಕೆಳ ಸೇತುವೆವರೆಗೆ ನಿರ್ಮಿಸಲಾಗುವುದು. ₹27 ಕೋಟಿ ಪರಿಹಾರ ಸಹ ಜಾಗದ ಮಾಲೀಕರಿಗೆ ನೀಡಿದ್ದು, ಕಾಮಗಾರಿ ಆರಂಭಿಸಬೇಕಷ್ಟೇ. ರೈಲ್ವೆ ಅಧಿಕಾರಿಗಳಿಗೆ ಈಗಿರುವ ಅಂಡರ್ ಪಾಸ್ ಬಳಿ ಮತ್ತೊಂದು ಅಂಡರ್ ಪಾಸ್ ನಿರ್ಮಿಸಿ, ಗಾಂಧಿ ಸರ್ಕಲ್, ಈರುಳ್ಳಿ ಮಾರುಕಟ್ಟೆಯಿಂದ ಬರುವ ವಾಹನಗಳಿಗೆ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗುವುದು. ರೈಲ್ವೆ ಅಧಿಕಾರಿಗಳಿಗೆ ಏನೇ ಪ್ಲಾನ್ ಇದ್ದರೂ, ಸಂಸದರು, ತಮಗೆ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದು, ಮುಂದುವರಿಯಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ದಾವಣಗೆರೆ ತಹಸೀಲ್ದಾರ್ ಕಚೇರಿ ನಿರ್ಮಾಣವಾಗಿದ್ದು, ಅಲ್ಲಿಗೆ ಉಪ ವಿಭಾಗಾಕಾರಿ ಕಚೇರಿ, ಉಪ ನೋಂದಣಿ ಇಲಾಖೆ ಕಚೇರಿಯನ್ನೂ ಒಂದೇ ಕಡೆ ಸ್ಥಳಾಂತರಿಸಲಾಗುವುದು. ಇನ್ನೂ ಒಂದಿಷ್ಟು ಕಾಮಗಾರಿಗೆ ₹13 ಕೋಟಿ ಅಗತ್ಯವಿದೆ. ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಹೊಸ ಕಟ್ಟಡದ ವಿನ್ಯಾಸ ನನಗೆ, ಸಂಸದರು, ಜಿಲ್ಲಾಡಳಿತ ಗಮನಕ್ಕೆ ತಂದು, ಮುಂದುವರಿಯಬೇಕು. ಊರು ಹಾಳು ಮಾಡಿದಂತೆ, ಮಾಡಬೇಡಿ ಅಂತಾ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದೇನೆ ಎಂದು ಸಚಿವ ಎಸ್ಸೆಸ್ಸೆಂ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವ ಎಚ್.ಆಂಜನೇಯ, ಮೇಯರ್ ಕೆ.ಚಮನ್ ಸಾಬ್‌, ಉಪ ಮೇಯರ್ ಸೋಗಿ ಶಾಂತಕುಮಾರ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಗಣೇಶ, ಸುಧಾ ಇಟ್ಟಿಗುಡಿ, ಆಶಾ ಉಮೇಶ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಓ ಸುರೇಶ ಬಿ.ಇಟ್ನಾಳ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಮುಖಂಡರಾದ ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಎಸ್.ಮಲ್ಲಿಕಾರ್ಜುನ, ಕುಬೇರ, ರಾಘವೇಂದ್ರ ಗೌಡ, ಕುಬೇರ, ಜಯಪ್ರಕಾಶ ಗೌಡ, ಹುಲ್ಮನಿ ಗಣೇಶ, ಮಹಮ್ಮದ್ ಮುಜಾಹಿದ್ ಪಾಷ, ಎಸ್.ಕೆ.ಪ್ರವೀಣಕುಮಾರ, ಟಿ.ಆರ್.ಶ್ರೀನಿವಾಸ ಇತರರು ಇದ್ದರು.

- - -

ಬಾಕ್ಸ್‌ * ದಾವಣಗೆರೆಗೆ 25 ವರ್ಷ; ಬೆಳ್ಳಿ ಮಹೋತ್ಸವ, ದಾವಣಗೆರೆ ಹಬ್ಬ ಬಾತಿ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ₹13 ಕೋಟಿ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಪಿಕ್‌ನಿಕ್ ತಾಣವಾಗಿ ಅಭಿವೃದ್ಧಿಪಡಿಸುತ್ತೇವೆ. ದಾವಣಗೆರೆಯ ದಶಕಗಳ ಕನಸಾದ ವಿಮಾನ ನಿಲ್ದಾಣಕ್ಕಾಗಿ ಜಾಗ ಪರಿಶೀಲಿಸಲಾಗುವುದು. ಜಿಲ್ಲೆಗೆ 25 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಿ ಮಹೋತ್ಸವ, ದಾವಣಗೆರೆ ಹಬ್ಬವನ್ನೂ ಆಚರಿಸಲಾಗುವುದು. ಜನತೆ ಶಾಂತಿ, ನೆಮ್ಮದಿ, ಸಾಮರಸ್ಯದಿಂದ ಸಹೋದರತೆಯಿಂದ ಬಾಳಬೇಕು. ನಾವು ಏನು ಹೇಳುತ್ತೇವೋ ಅದನ್ನು ಮಾಡುತ್ತೇವೆ ಎಂದು ಎಸ್.ಎಸ್. ಮಲ್ಲಿಕಾರ್ಜುನ ಸ್ಪಷ್ಟಪಡಿಸಿದರು.

- - - -(ಫೋಟೋ ಬರಲಿದೆ):