ಬಂದಿಗಳಿಗೆ ತರಬೇತಿ ನೀಡಿ, ಅವರಿಗೆ ಕೌಶಲ್ಯವನ್ನು ಬೆಳಸುವ ಮೂಲಕ ಅವರ ಮಾನಸಿಕ ಖಿನ್ನತೆಯನ್ನು ದೂರವಾಗಿಸಿ

ಹೊಸಪೇಟೆ: ಕಾರಾಗೃಹ ಬಂದಿಗಳು ಯಾವುದೋ ಕಾರಣಗಳಿಂದ ಕಾನೂನು ಅಡಿಯಲ್ಲಿ ವಿಚಾರಣೆಗೆ ಒಳಪಟ್ಟಿರುತ್ತೀರಿ. ಆದರೆ ಅದೇ ಯೋಚನೆಯಲ್ಲಿ ನಿಮ್ಮ ಮುಂದಿನ ಭವಿಷ್ಯವನ್ನು ಹಾಳು ಮಾಡಿಕೊಳ್ಳದೆ, ಹೈನುಗಾರಿಕೆ ಕಸುಬು ನಿಮ್ಮ ಜೀವನೊಪಾಯಕ್ಕೆ ಅತ್ಯಅವಶ್ಯಕವಾಗಲಿದೆ ಎಂದು ಜಿಲ್ಲಾ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಎನ್‌. ಕೆ. ಇಮ್ರಾನ್ ಹೇಳಿದರು.

ನಗರದ ಕಾರಾಗೃಹದಲ್ಲಿ ಸೋಮವಾರ ವಿಜಯನಗರ ಜಿಲ್ಲಾ ಕೇಂದ್ರ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಹಾಗೂ ಜಿಲ್ಲಾ ಪಶುಸಂಗೋಪನೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ‌ಹಮ್ಮಿಕೊಂಡಿದ್ದ, ಕಾರಾಗೃಹ ಬಂದಿಗಳಿಗೆ ಹೈನುಗಾರಿಕೆ ಕುರಿ ಸಾಕಾಣಿಕೆ ಕುರಿತು ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರಾಗೃಹದ ಅಧೀಕ್ಷಕ ಎಸ್.ಜಿ. ಬಾರೀಕೇರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರಾಗೃಹ ಬಂದಿಗಳ ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಹಲವಾರು ಯೋಜನೆಗಳಿವೆ. ಬಂದಿಗಳಿಗೆ ತರಬೇತಿ ನೀಡಿ, ಅವರಿಗೆ ಕೌಶಲ್ಯವನ್ನು ಬೆಳಸುವ ಮೂಲಕ ಅವರ ಮಾನಸಿಕ ಖಿನ್ನತೆಯನ್ನು ದೂರವಾಗಿಸಿ ಎಂದರು.

ಪಶುಸಂಗೋಪನೆ ಇಲಾಖೆ ವೈಧ್ಯಾಧಿಕಾರಿ ಗುರು ಬಸವರಾಜ್ ಮಾತನಾಡಿ, ಕಾರಾಗೃಹ ಬಂಧಿಗಳು ಸರಿ ತಪ್ಪುಗಳ ಬಗ್ಗೆ ಯೋಚಿಸುತ್ತ ಮಾನಸಿಕ ಚಿಂತೆ ಮಾಡದೆ, ಮುಂದಿನ ಜೀವನ ನಡೆಸಲು ಅನೇಕ ರೀತಿಯ ಉತ್ತಮ ದಾರಿಗಳು ಇವೆ. ಈ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಅವರು ಹೇಳಿದರು.

ಲೇಖಕಿ ಅಂಜಲಿ ಬೆಳಗಲ್ ಮಾತನಾಡಿ, ಕಾರಾಗೃಹ ಒಂದು ಪಾಠ ಶಾಲೆಯಂತೆ, ಇಲ್ಲಿ ಕಲಿಯುವ ಪ್ರತಿಯೊಂದು ಅನುಭವ ನಿಮ್ಮ ಜೀವನದ ಅತೀ ದೊಡ್ಡ ಮೈಲಿಗಲ್ಲು. ಹಾಗಾಗಿ ಯಾರೂ ಚಿಂತಿಸದೆ, ಕೌಶಲ್ಯ ಕೈಗಾರಿಕಾ ತರಬೇತಿಯನ್ನು ಸದುಪಯೋಗ ಪಡಿಸಿಕೊಂಡು ಮುಂದಿನ ಜೀವನಕ್ಕೆ ಅನುಕೂಲವಾಗವ ರೀತಿಯಲ್ಲಿ ಜೀವನ ಸಾಗಿಸಿ ಎಂದು ಹೇಳಿದರು.

ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಶಿಕ್ಷಕ ಮಧುಸೂದನ್, ವಕೀಲರಾದ ಮರಿಯಪ್ಪ. ಕಾರಾಗೃಹ ಸಿಬ್ಬಂದಿಗಳಾದ ಲಚ್ಚಣ್ಣ, ಕೆ. ರೀಯಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.