ಖಾಸಗಿ ಬಸ್ ಪಲ್ಟಿ: ಇಬ್ಬರು ಪ್ರಯಾಣಿಕರ ಸಾವು

| Published : May 04 2024, 12:37 AM IST

ಸಾರಾಂಶ

ಮೃತರು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ನಿವಾಸಿಗಳಾದ ರುದ್ರೇಶ್ (38), ಲೊಕೇಶ್ (26) ಎಂದು ತಿಳಿದು ಬಂದಿದೆ. ತೀರಾ ಗಂಭೀರ ಗಾಯಾಳುಗಳನ್ನು ಮಣಿಪಾಲ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊನ್ನಾವರ: ತಾಲೂಕಿನ ಗೇರುಸೊಪ್ಪ ಸೂಳೆಮುರ್ಕಿ ಕ್ರಾಸ್‌ನಲ್ಲಿ ಶುಕ್ರವಾರ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದು, 49 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

ಮೃತರು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ನಿವಾಸಿಗಳಾದ ರುದ್ರೇಶ್ (38), ಲೊಕೇಶ್ (26) ಎಂದು ತಿಳಿದು ಬಂದಿದೆ. ತೀರಾ ಗಂಭೀರ ಗಾಯಾಳುಗಳನ್ನು ಮಣಿಪಾಲ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಿಂದ ಧರ್ಮಸ್ಥಳ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಗೇರುಸೊಪ್ಪಾ ಸೂಳೆಮುರ್ಕಿ ತಿರುವಿನಲ್ಲಿ ಎದುರಿಗೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿ ರಭಸಕ್ಕೆ ಬಸ್ ನಜ್ಜುಗುಜ್ಜಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಪೊಲೀಸರು ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿ, ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಹೊನ್ನಾವರ ತಾಲೂಕಾಸ್ಪತ್ರೆಗೆ ದಾಖಲಿಸಿದರು.ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೂಳೆಮುರ್ಕಿ ಕ್ರಾಸ್ ಪದೇ ಪದೇ ಅಪಘಾತ ಸಂಭವಿಸುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.

ಟಿಪ್ಪರ್ ಡಿಕ್ಕಿಯಾಗಿ ಬಾಲಕಿ ಸಾವು

ಯಲ್ಲಾಪುರ: ಟಿಪ್ಪರ್ ಚಾಲಕನೋರ್ವ ಹಿಮ್ಮುಖವಾಗಿ ವಾಹನ ಚಲಾಯಿಸಿ ಬಾಲಕಿಯೊಬ್ಬಳು ಸಾವಿಗೀಡಾದ ಘಟನೆ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಬಳಗಾರ ಕ್ರಾಸ್ ಬ್ರಿಡ್ಜ್‌ನಲ್ಲಿ ನಡೆದಿದೆ.ಅಪಘಾತದಲ್ಲಿ‌ ತಾಲೂಕಿನ ಮಾವಿನಮನೆ ಕುಪ್ಪಳ್ಳಿ ನಿವಾಸಿ ನಾಗರತ್ನ ಚಂದ್ರಶೇಖರ ಗೌಡ(10) ಮೃತ ಬಾಲಕಿ. ಈಕೆ ತನ್ನ ತಂದೆಯ ಬೈಕ್‌ನಲ್ಲಿ ಯಲ್ಲಾಪುರ‌ ಕಡೆಯಿಂದ ಅಂಕೋಲಾ ಕಡೆಗೆ ಹೋಗುವಾಗ ಒವರ್ ಟೇಕ್ ಮಾಡಿಕೊಂಡು ಬಂದ ಟಿಪ್ಪರ್ ಚಾಲಕ ಬೈಕಿನ ಎದುರು ಏಕಾಏಕಿ ಬ್ರಿಡ್ಜ್ ಮೇಲೆ ವಾಹನ ನಿಲ್ಲಿಸಿ ಯಾವುದೇ ಸೂಚನೆ ಇಲ್ಲದೇ‌ ಹಿಮ್ಮುಖವಾಗಿ ಟಿಪ್ಪರ್ ಚಲಾಯಿಸಿದ್ದಾನೆ.‌ ಹಿಂಬದಿಯಿಂದ ನಿಧಾನವಾಗಿ ಬೈಕ್‌ಮೇಲೆ ಬರುತ್ತಿದ್ದ ಚಂದ್ರಶೇಖರ ಗೌಡ(40) ಬೈಕ್‌ಗೆ ಡಿಕ್ಕಿ ಪಡೆಸಿ ರಸ್ತೆಯ ಮೇಲೆ ಬಿದ್ದ ನಾಗರತ್ನ ಗೌಡ ತಲೆಯ ಮೇಲೆ ಟಿಪ್ಪರ್ ಹರಿದು ಹೋಗಿ ಆಕೆ ಸ್ಥಳದಲ್ಲಿಯೇ‌ ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಚಂದ್ರಶೇಖರ ಗೌಡ ಕೂಡ ಗಾಯಗೊಂಡಿದ್ದಾರೆ.ಅಪಘಾತಪಡಿಸಿದ ಚಾಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸದೇ, ಸ್ಥಳೀಯ ಪೊಲೀಸ್ ಠಾಣೆಗೂ‌ ಮಾಹಿತಿ‌ ನೀಡದೇ ಸ್ಥಳದಿಂದ ಟಿಪ್ಪರ್ ಬಿಟ್ಟು ಓಡಿ ಹೋಗಿದ್ದಾನೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತಲೆಮರೆಸಿಕೊಂಡಿರುವ ಚಾಲಕನ‌ ಶೋಧ ಕಾರ್ಯ ನಡೆಸಿದ್ದಾರೆ.