ರೂಟ್ ಬಸ್ ಗಳ ಸಂಚಾರ ಇಲ್ಲದೆ ಪ್ರಯಾಣಿಕರ ಪರದಾಟ

| Published : Aug 06 2025, 01:15 AM IST

ರೂಟ್ ಬಸ್ ಗಳ ಸಂಚಾರ ಇಲ್ಲದೆ ಪ್ರಯಾಣಿಕರ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು- ಮೈಸೂರು ನಡುವೆ ಮುಂಜಾನೆಯಿಂದ ಬೆರಳಣಿಕೆಯಷ್ಟು ಕೆಎಸ್ಆರ್ ಟಿಸಿ ಬಸ್‌ ಗಳು ಸಂಚರಿಸಿದರೇ,

ಕನ್ನಡಪ್ರಭ ವಾರ್ತೆ ಮೈಸೂರು

ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ, 38 ತಿಂಗಳ ಹಿಂಬಾಕಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನಿಗಮಗಳ ಕ್ರಿಯಾ ಸಮಿತಿ ರಾಜ್ಯಾದ್ಯಂತ ಮಂಗಳವಾರ ಕರೆ ನೀಡಿದ್ದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೆಎಸ್ಆರ್ ಟಿಸಿ ನೌಕರರು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ ಗಳು, ತರಬೇತಿ ಮತ್ತು ಗುತ್ತಿಗೆ ಚಾಲಕರನ್ನು ಬಳಸಿಕೊಂಡು ಒಂದಿಷ್ಟು ಬಸ್ ಗಳ ಸಂಚಾರ ಆರಂಭಿಸಲಾಯಿತು. ಆ ಮೂಲಕ ಒಂದಷ್ಟು ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮಾಮೂಲಿ ರೂಟ್ ಬಸ್ ಗಳ ಸಂಚಾರ ಇಲ್ಲದೆ ಪ್ರಯಾಣಿಕರು ಪರದಾಡಿದರು.

ಬೆಂಗಳೂರು- ಮೈಸೂರು ನಡುವೆ ಮುಂಜಾನೆಯಿಂದ ಬೆರಳಣಿಕೆಯಷ್ಟು ಕೆಎಸ್ಆರ್ ಟಿಸಿ ಬಸ್‌ ಗಳು ಸಂಚರಿಸಿದರೇ, ಅತಿ ಹೆಚ್ಚಿನ ಮಟ್ಟದಲ್ಲಿ ಖಾಸಗಿ ಬಸ್‌ ಗಳನ್ನು ಸಂಚಾರಕ್ಕೆ ಬಿಟ್ಟಿದ್ದರಿಂದ ಅರ್ಧದಷ್ಟು ಪ್ರಯಾಣಿಕರು ತೆರಳಿದರು. ಹಲವರು ವಾಪಸ್ ತೆರಳಿದರು.

ಮುಷ್ಕರ ಹಿನ್ನೆಲೆಯಲ್ಲಿ ಕೆಎಸ್ಆರ್ ಟಿಸಿ ನಗರ ಮತ್ತು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್‌ ಗಳ ಕಾರ್ಯಾಚರಣೆ ವಿಳಂಬವಾಗಿತ್ತು. ಇದರಿಂದಾಗಿ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸಿದರು. ಈ ವೇಳೆ ಒಂದೊಂದು ಬಸ್‌ ಗಳು ಕಾರ್ಯಾಚರಣೆ ಶುರು ಮಾಡಿ ಪ್ರಯಾಣಿಕರನ್ನು ಕರೆದೊಯ್ಯುವ ಕೆಲಸ ಮಾಡಲಾಯಿತು.

ತರಬೇತಿ ಚಾಲಕರು, ಗುತ್ತಿಗೆ ಆಧಾರಿತ ಚಾಲಕರನ್ನು ಬಳಸಿಕೊಂಡು ಕೆಲವು ಮಾರ್ಗಗಳಿಗೆ ಬಸ್ ಕಳುಹಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ನೋಡಿಕೊಂಡರು. ಇದಾದ ಕೆಲವೇ ಹೊತ್ತಿಗೆ ಖಾಸಗಿ ಬಸ್‌ ಗಳು ತಮ್ಮ ರೂಟ್ ರದ್ದುಪಡಿಸಿಕೊಂಡು ಬಸ್ ನಿಲ್ದಾಣಕ್ಕೆ ಪ್ರವೇಶ ಮಾಡಿದರೆ, ಮಿನಿ ಬಸ್‌ ಗಳು, ಟೆಂಪೋಗಳು ಕೂಡ ಆಗಮಿಸಿತು. ನಂತರ, ಸಾರಿಗೆ ಬಸ್ ಪ್ರಯಾಣ ದರವನ್ನೇ ಪಡೆದುಕೊಂಡು ಕಾರ್ಯಾಚರಣೆ ಮಾಡಲು ಅವಕಾಶ ಒದಗಿಸುತ್ತಿದ್ದಂತೆ ಪ್ರಯಾಣಿಕರನ್ನು ಕರೆದೊಯ್ಯುವ ಕೆಲಸ ಶುರು ಮಾಡಿದರು.

ಸುಮಾರು 10 ಗಂಟೆಯ ಹೊತ್ತಿಗೆ 240 ರೂಟ್‌ ಗಳಿಗೆ ಬಸ್‌ ಚಾಲನೆ ಮಾಡಬೇಕಾಗಿತ್ತಾದರೂ 170 ರೂಟ್‌ ಗಳಿಗೆ ಬಸ್ ಹೋಯಿತು. ಆದರೆ, ಬೆಂಗಳೂರಿಗೆ ಖಾಸಗಿ ಬಸ್‌ ಗಳ ಸಂಚಾರ ಇದ್ದರೂ ಪುರುಷರು ಪ್ರಯಾಣಿಸಿದರೆ, ಮಹಿಳಾ ಪ್ರಯಾಣಿಕರು ಸಾರಿಗೆ ಬಸ್‌ ಗಳನ್ನೇ ಕಾದು ತೆರಳುತ್ತಿದ್ದು ಕಂಡು ಬಂದಿತು.

ಅದೇ ರೀತಿ ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಅತಿ ಹೆಚ್ಚಿನ ಪ್ರಯಾಣಿಕರು ಸಂಚರಿಸುವ ರೂಟ್‌ ಗಳಿಗೆ ಕಳುಹಿಸಲಾಯಿತು. ಬೆಳಗ್ಗೆ 10 ಗಂಟೆ ತನಕ 240 ರೂಟ್‌ ಗಳಲ್ಲಿ 120 ರೂಟ್‌ ಗಳಲ್ಲಿ ಮಾತ್ರ ಸಂಚಾರವಿತ್ತು. ಹಲವು ರೂಟ್‌ ಗಳಿಗೆ ತರಬೇತಿ ಚಾಲಕರನ್ನು ಬಳಸಿಕೊಂಡು ಕಾರ್ಯಾಚರಣೆ ಮಾಡಿದರೆ, 150 ಮಿನಿ ಬಸ್‌ ಗಳಿಗೆ ರೂಟ್ ಕೊಟ್ಟು ಓಡಿಸಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳು, ನೌಕರರು ಬಸ್ ಇಲ್ಲದೆ ಪರದಾಡಿದರು. ಖಾಸಗಿ ಬಸ್ ಗಳು ಪ್ರಯಾಣಿಕರಿಂದ ಸರ್ಕಾರಿ ದರವನ್ನೇ ಪಡೆದು ವಿವಿಧ ರೂಟ್ ಗಳಿಗೆ ತೆರಳಿದವು. ಇತರೆ ವಾಹನಗಳಲ್ಲಿ ಸ್ವಲ್ಪ ದರ ಜಾಸ್ತಿ ಮಾಡಿಕೊಂಡು ಲಾಭ ಮಾಡಿಕೊಂಡರು.

ನಗರ ಪ್ರದೇಶದಲ್ಲಿ ಓಡಾಟಕ್ಕೆ ಜನ ಆಟೋ, ಕ್ಯಾಬ್ ಬಳಸಿಕೊಂಡರು. ಮುಷ್ಕರ ಹಿನ್ನೆಲೆಯಿಂದ ಹಿಂದಿಗಿಂತ ಸ್ವಲ್ಪ ಹೆಚ್ಚಿನ ಬಾಡಿಗೆ ನೀಡಬೇಕಾಯಿತು.

ಮಹಿಳಾ ಪ್ರಯಾಣಿಕರ ಅಳಲು

ಇಷ್ಟು ದಿನ ಶಕ್ತಿ ಯೋಜನೆಯಲ್ಲಿ ಉಚಿತವಾಗಿ ಓಡಾಟ ಮಾಡುತ್ತಿದ್ದೆವು. ಈಗ ಅನಿವಾರ್ಯ ದುಡ್ಡು ಕೊಟ್ಟು ಪ್ರಯಾಣ ಮಾಡುತ್ತಿದ್ದೇವೆ. ಎರಡು ವರ್ಷಗಳಿಂದ ಉಚಿತ ಬಸ್‌ಪ್ರಯಾಣ ಮಾಡಿದ್ದೇವು. ಈಗ ಬಸ್ ಸ್ಟ್ರೈಕ್ ಇದೆ. ಆದರೆ, ಕೆಲಸಕ್ಕೆ ಹೋಗಲೇ ಬೇಕಿದೆ. ಅದಕ್ಕಾಗಿ ಖಾಸಗಿ ಬಸ್ ಹತ್ತಿ ಹೋಗುತ್ತಿದ್ದೇವೆ ಎಂದು ಮಹಿಳಾ ಪ್ರಯಾಣಿಕರು ಅಳಲು ತೊಡಿಕೊಂಡರು.

ಬಸ್ ನಿಲ್ದಾಣಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು, ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.

----

ಕೋಟ್...

ಮೈಸೂರು- ಬೆಂಗಳೂರು ನಡುವೆ ತರಬೇತಿ ಚಾಲಕರು, ಗುತ್ತಿಗೆ ಚಾಲಕರನ್ನು ಬಳಸಿಕೊಂಡು ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ. ಖಾಸಗಿ ಬಸ್‌ ಗಳು ಕೂಡ ಸಾರಿಗೆ ಬಸ್ ದರವನ್ನೇ ಪಡೆದು ಸಂಚರಿಸಲು ಅನುವು ಮಾಡಿದ್ದೇವೆ. ಮಹಿಳಾ ಪ್ರಯಾಣಿಕರು ಖಾಸಗಿ ಬಸ್‌ ಗಳಲ್ಲಿ ದುಡ್ಡು ಕೊಡಬೇಕಿದೆ.

- ಶ್ರೀನಿವಾಸ್, ವಿಭಾಗೀಯ ನಿಯಂತ್ರಣಾಧಿಕಾರಿ, ಮೈಸೂರು ಗ್ರಾಮಾಂತರ ವಿಭಾಗ