ಸಾರಾಂಶ
ದೇವದುರ್ಗ ತಾಲೂಕಿನ ಹೂವಿನಹೆಡಗಿ ಶ್ರೀ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಗೌರವ ಸಮರ್ಪಣೆ, ಸನ್ಮಾನ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ದೇವದುರ್ಗ
ಈ ಭಾಗದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶ್ರಮ ಮತ್ತು ಕೊಡುಗೆ ಅಪಾರ ಹಾಗೂ ಸ್ಮರಣೀಯ ಎಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.ತಾಲೂಕಿನ ಹೂವಿನಹೆಡಗಿ ಶ್ರೀ ಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ತಾಲೂಕು ಘಟಕ ಆಯೋಜಿಸಿದ್ದ 2024-25ನೇ ಸಾಲಿನ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಳೆದ 10 ವರ್ಷಗಳಿಂದ ಶೈಕ್ಷಣಿಕವಾಗಿ ಅಪಾರ ಬದಲಾವಣೆಗಳಾಗಿದ್ದು, ರಾಜ್ಯ ಮಟ್ಟದ ಶಿಕ್ಷಣ ಪ್ರಗತಿಯಲ್ಲಿ ಈ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಮುಖ್ಯವಾಹಿನಿಗೆ ಬರುತ್ತಿರುವದು ಸಂತಸದ ವಿಷಯವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪೂಜ್ಯಶ್ರೀ ನಿಜಲಿಂಗ ಮಹಾಸ್ವಾಮೀಜಿ, ಶ್ರೀ ಮೈಲಾರಲಿಂಗೇಶ್ವರ ಸಂಸ್ಥಾನ ದೇವರಗುಂಡುಗುರ್ತಿ, ಪೂಜ್ಯಶ್ರೀ ಗುರುಬಸವ ರಾಜ ಗುರುಗಳು ನಿಜಾನಂದ ಯೋಗಾಶ್ರಮ ಮಲದಕಲ್, ಪೂಜ್ಯಶ್ರೀ ಸಯ್ಯದ್ ಜಹೀರ್ ಪಾಷಾ ತಾತ ವಹಿಸಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಸುಖದೇವ ಮಾತನಾಡಿದರು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಎಲ್ಲಾ 160 ಶಿಕ್ಷಕರಿಗೆ ಗೌರವ ಸಮರ್ಪಣ ಕಾರ್ಯಕ್ರಮ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಮುಖ್ಯಸ್ಥರು, ಸದಸ್ಯರು, ಶಿಕ್ಷಕರು, ಮುಖಂಡರು ಇದ್ದರು.