ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜೀವಂತವಿರುವ ವ್ಯಕ್ತಿಯ ಹೆಸರಿನಲ್ಲಿರುವ ಆರ್‌ಟಿಸಿ ಕೊಟ್ಟು ಸಾಲ ಪಡೆಯುವುದೇ ಕಷ್ಟವಾಗಿರುವಾಗ ಖಾಸಗಿ ವ್ಯಕ್ತಿಯೊಬ್ಬ ಶ್ರೀರಾಮ ದೇವರ ಹೆಸರಿನಲ್ಲಿರುವ ಆರ್‌ಟಿಸಿ ನೀಡಿ ೧೦ ಸಾವಿರ ರು. ಸಾಲ ಪಡೆದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಶ್ರೀರಂಗಪಟ್ಟಣದ ಕಿರಂಗೂರು ಗ್ರಾಮದಲ್ಲಿ ಸರ್ವೆ ನಂ.೧೦೮೮ರಲ್ಲಿರುವ ೭ ಗುಂಟೆ ಜಮೀನಿನ ಆರ್‌ಟಿಸಿ ನೀಡಿ ಗ್ರಾಮದ ರಾಮಚಂದ್ರ ಬಿನ್. ಈರೇಗೌಡ ಅವರು ಬ್ಯಾಂಕ್ ಆಫ್ ಇಂಡಿಯಾ ಮೈಸೂರು ಶಾಖೆಯಲ್ಲಿ ೧೦ ಸಾವಿರ ರು. ಸಾಲ ಪಡೆದಿದ್ದಾರೆ. ದೇವಾಲಯದ ಹೆಸರಿನಲ್ಲಿರುವ ಆರ್‌ಟಿಸಿ ಮೇಲೆ ಖಾಸಗಿ ವ್ಯಕ್ತಿ ಸಾಲ ಪಡೆದಿರುವುದರ ಕುರಿತು ಸಮಗ್ರ ತನಿಖೆ ಮಾಡಿ ರಾಮಚಂದ್ರ ಹಾಗೂ ಅವರ ತಂಡದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ರೈತ ಮುಖಂಡ ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.
ಮುಜರಾಯಿ ಇಲಾಖೆಗೆ ಸೇರಿದ ಕಿರಂಗೂರು ಗ್ರಾಮದ ಶ್ರೀರಾಮಮಂದಿರ ದೇವಾಲಯವನ್ನು ಕೆಲವು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಟ್ರಸ್ಟ್ ರಚಿಸಿಕೊಂಡು ಭಕ್ತರಿಂದ ಬರುವ ಚಿನ್ನ, ಬೆಳ್ಳಿ, ನಗದು ಹಣವನ್ನು ಲಪಟಾಯಿಸುತ್ತಿದ್ದರು. ಸರ್ಕಾರದ ಹುಂಡಿಯನ್ನು ಮೂಲೆಗೆಸೆದು ಖಾಸಗಿ ಹುಂಡಿಯನ್ನು ದೇವಾಲಯದಲ್ಲಿಟ್ಟು ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಪರಿಣಾಮ ದೇವಾಲಯದಿಂದ ಸರ್ಕಾರಕ್ಕೆ ಬರುತ್ತಿದ್ದ ಆದಾಯಕ್ಕೆ ತೀವ್ರ ನಷ್ಟವಾಗಿತ್ತು ಎಂದು ಆರೋಪಿಸಿದ್ದಾರೆ.ಈ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದು ಸರ್ವೆ ನಂ.೧೦೮೮ರಲ್ಲಿರುವ ೨೮ ಗುಂಟೆ, ೬೪೯ರಲ್ಲಿ ೭ ಗುಂಟೆ, ೬೫೩ರಲ್ಲಿ ೧ ಗುಂಟೆ ಜಮೀನನ್ನು ಸರ್ಕಾರ ವಶಕ್ಕೆ ಪಡೆದು ನಾಮಫಲಕವನ್ನೂ ಹಾಕಲಾಗಿತ್ತು. ದೇವಾಲಯದ ಸುವ್ಯವಸ್ಥಿತ ಆಡಳಿತ ನಿರ್ವಹಣೆಗೆ ಕೆ.ಶೆಟ್ಟಹಳ್ಳಿ ಹೋಬಳಿ-೧ ಉಪತಹಸೀಲ್ದಾರ್ ಸುಧಾಮಣಿ ಅವರನ್ನು ೨೩.೧೨.೨೦೨೧ರಲ್ಲಿ ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ದೇವಾಲಯವನ್ನು ಸರ್ಕಾರಿ ವಶಕ್ಕೆ ಪಡೆದುಕೊಂಡಿದ್ದರು. ದೇವಾಲಯದ ಚರ-ಸ್ಥಿರ ಆಸ್ತಿಗಳ ನಿರ್ವಹಣೆ, ದೇಗುಲದ ಆದಾಯದ ವೆಚ್ಚದ ಬಗ್ಗೆ ನಿಖರವಾದ ಮಾಹಿತಿಯನ್ನು ಅವರ ಒಳಗೊಂಡಂತೆ ಗ್ರಾಮಲೆಖ್ಖಿಗ, ಕಂದಾಯ ನಿರೀಕ್ಷಕರನ್ನೂ ಕೂಡ ನಿಯೋಜಿಸಲಾಗಿತ್ತು
ಇದಾದ ನಂತರ ಖಾಸಗಿ ವ್ಯಕ್ತಿಗಳು ಸರ್ಕಾರ ಅಳವಡಿಸಿದ್ದ ನಾಮ ಫಲಕವನ್ನು ಕಿತ್ತೆಸೆದು ದೇವಾಲಯ ಖಾಸಗಿ ಸ್ವತ್ತಾಗಿದ್ದು, ಇಲ್ಲಿ ಯಾರಿಗೂ ಪ್ರವೇಶವಿಲ್ಲ ಎಂದು ನಾಮಫಲಕ ಹಾಕಿರುವುದು ಜಿಲ್ಲಾಡಳಿತ, ತಾಲೂಕು ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈ ವಿಷಯವಾಗಿ ಅಧಿಕಾರಿಗಳಿಗೆ ಹಲವು ಬಾರಿ ದೂರು ಕೊಟ್ಟರೂ ದೂರು ದೂರಾಗಿಯೇ ಉಳಿದಿದೆ. ಈ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸಿ ನಾಮಫಲಕವನ್ನು ತೆಗೆಸಿ ಇದು ಖಾಸಗಿ ಸ್ವತ್ತಲ್ಲ, ಇದು ಸರ್ಕಾರದ ಸ್ವತ್ತು ಎಂದು ಸಾರ್ವಜನಿಕವಾಗಿ ಹೇಳಿದರೂ ಜಿಲ್ಲಾಧಿಕಾರಿಗಳು, ಶ್ರೀರಂಗಪಟ್ಟಣ ತಹಸೀಲ್ದಾರ್ ಹಾಗೂ ಮುಜರಾಯಿ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ.ಸರ್ಕಾರದ ಆಸ್ತಿಯನ್ನು ಸಂರಕ್ಷಣೆ ಮಾಡುವಲ್ಲಿ ವಿಫಲರಾಗಿರುವ ಇವರು, ಸಾರ್ವಜನಿಕರು ದೂರು ಕೊಟ್ಟರೆ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಖಾಸಗಿ ಟ್ರಸ್ಟ್‌ನವರೊಂದಿಗೆ ಕೈಜೋಡಿಸಿ, ಶಾಮೀಲಾಗಿ ಜಾರಿಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ದೇವಾಲಯದಲ್ಲಿ ಭಕ್ತರಿಗೆ ನೆಮ್ಮದಿಯಿಂದ ಪೂಜೆ ಸಲ್ಲಿಸಲು ಅವಕಾಶವಿಲ್ಲದಂತಾಗಿದೆ. ಅಲ್ಲಿ ಖಾಸಗಿ ವ್ಯಕ್ತಿಗಳು ಝಾಂಡಾವೂರಿ, ಮದುವೆ ದಲ್ಲಾಳಿ, ರಿಯಲ್ ಎಸ್ಟೇಟ್ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಶ್ರೀರಾಮನಿಗೆ ಅನ್ಯಾಯ ಮಾಡುತ್ತಾ ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.