ಸಾರಾಂಶ
ಕೊಟ್ಟೂರು: ಪಟ್ಟಣದಲ್ಲಿ ಖಾಸಗಿ ಶಾಲೆ ವಾಹನ ಅಪಘಾತ ನಡೆದ ಹಿನ್ನೆಲೆಯಲ್ಲಿ ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ ನೇತೃತ್ವದಲ್ಲಿನ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಶಾಲಾ ವಾಹನ ಚಾಲಕರ ಆಲ್ಕೋಹಾಲ್ ಪ್ರಮಾಣ ತಪಾಸಣೆ ಕಾರ್ಯವನ್ನು ಬುಧವಾರ ನಡೆಸಿದರು.
ಮದ್ಯಾಹ್ನದ ಶಾಲೆ ಬಿಡುವ ಹೊತ್ತಿಗೆ ಪಟ್ಟಣದ ಎಲ್ಲ ಕಡೆಗೆ ಪೊಲೀಸ್ ಅಧಿಕಾರಿಗಳ ತಂಡು ಏಕಾಏಕಿ ಬಂದು ಶಾಲಾ ವಾಹನಗಳನ್ನು ತಡೆದು ಚಾಲಕರು ಮದ್ಯಪಾನ ಸೇವಿಸಿದ್ದಾರೋ ಅಥವಾ ಇಲ್ಲ ಎಂಬುದನ್ನು ಆಲ್ಕೋಹಾಲ್ ಪತ್ತೆ ಮಾಪಕ ಯಂತ್ರದಿಂದ ತಪಾಸಣೆ ನಡೆಸಿದರು. ಪೊಲೀಸರ ಈ ದಿಢೀರ್ ಕಾರ್ಯಾಚರಣೆ ವೀಕ್ಷಿಸಲು ಉಜ್ಜಯಿನಿ ವೃತ್ತದ ಬಳಿ ದೊಡ್ಡ ಜನರ ಗುಂಪು ಸೇರಿತ್ತು.ಪಟ್ಟಣದ ಎಲ್ಲ ಖಾಸಗಿ ಶಾಲೆಗಳ ರಸ್ತೆ ಮಾರ್ಗದಲ್ಲಿ ವಾಹನ ತಡೆದ ಪೊಲೀಸರು ಚಾಲಕರನ್ನು ಯಂತ್ರದಿಂದ ತಪಾಸಣೆ ನಡೆಸಿದರು. ಆದರೆ ಯಾವುದೇ ಶಾಲೆ ಬಸ್ ಚಾಲಕ ಮದ್ಯಪಾನ ಮಾಡಿರುವುದು ಕಂಡು ಬರಲಿಲ್ಲ.
ಖಾಸಗಿ ಶಾಲೆ ಬಸ್ ಚಾಲಕರನ್ನು ಅಲ್ಕೋಹಾಲ್ ಪತ್ತೆ ಮಾಪಕ ಯಂತ್ರದಿಂದ ಮದ್ಯಪಾನ ಮಾಡಿರುವ ಕುರಿತು ತಪಾಸಣೆ ಮಾಡಲಾಗಿದೆ. ಯಾವುದೇ ಚಾಲಕ ಮದ್ಯ ಸೇವನೆ ಮಾಡಿರಲಿಲ್ಲ. ಮಕ್ಕಳನ್ನು ಕರೆದೊಯ್ಯುವಾಗ ಚಾಲಕರು ಜಾಗ್ರತರಾಗಿ ವಾಹನ ಚಾಲನೆ ಮಾಡಬೇಕು. ಶಿಕ್ಷಣ ಸಂಸ್ಥೆಯವರು ಸಹ ಚಾಲಕ ಮೇಲೆ ನಿಗಾ ಇರಿಸಬೇಕು. ಕೊಟ್ಟೂರಿನಲ್ಲಿ ತಪಾಸಣೆ ಮಾಡಿದಂತೆ ನಮ್ಮ ಉಪ ವಿಭಾಗದ ಎಲ್ಲ ಕಡೆ ತಪಾಸಣೆ ಮಾಡಲಾಗುವುದು. ಶಿಕ್ಷಣ ಸಂಸ್ಥೆಯವರನ್ನು ಕರೆಸಿ ಬಸ್ ಅಪಘಾತವಾಗದಂತೆ, ಚಾಲಕರನ್ನು ಕಟ್ಟು ನಿಟ್ಟಾಗಿರಿಸುವುದು, ವಾಹನಗಳ ದಾಖಲೆಗಳನ್ನು ಇರಿಸಿಕೊಳ್ಳುವುದು ಸೇರಿ ಹಲವು ಸಲಹೆಗಳನ್ನು ನೀಡಲಾಗುವುದು ಎಂದು ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ ಹೇಳಿದರು.ಕೂಡ್ಲಿಗಿ ಸಿಪಿಐ ಪ್ರಹ್ಲಾದ ಚನ್ನಗಿರಿ, ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ ಲಮಾಣಿ, ಕೊಟ್ಟೂರು ಪಿಎಸ್‌ಐ ಗೀತಾಂಜಲಿ ಶಿಂಧೆ, ಹಗರಿಬೊಮ್ಮನಹಳ್ಳಿ ಪಿಎಸ್‌ಐ ಬಸವರಾಜ ಅಡವಿಬಾವಿ, ತಂಬ್ರಹಳ್ಳಿ ಪಿಎಸ್‌ಐ ಗುರುಚಂದ್ರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.
ಪಟ್ಟಣದ ಇಂದು ಶಾಲೆ ಕಾಲೇಜು, ಮಹದೇವ, ಗುರುದೇವ, ವಿಸ್ಡಮ್, ಗುರುಕುಲ, ಗಂಗೋತ್ರಿ, ತುಂಗಭದ್ರಾ, ಜ್ಞಾನ ಸುಧಾ, ಡೆಲ್ಲಿ ಪಬ್ಲಿಕ್, ಮಹದೇವ ಸಿಬಿಎಸ್‌ಸಿ ಶಾಲೆಗಳ ವಾಹನ ಚಾಲಕರು ತಪಾಸಣೆಗೊಳಗಾದರು.ಶಾಲಾ ಬಸ್ ಡಿಕ್ಕಿ, ಬೈಕ್ ಸಾವರ ಸಾವು: ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೋಟರ್ ಸೈಕಲ್ ಸವಾರ ಸಾವಿಗೀಡಾದ ಘಟನೆ ಮಂಗಳವಾರ ಸಂಜೆ ಕೊಟ್ಟೂರು ಪಟ್ಟಣದ ಹೊರವಲಯದ ಬೋರನಹಳ್ಳಿ ಕ್ರಾಸ್‌ನಲ್ಲಿ ನಡೆದಿದೆ.ಬಟ್ಟೆ ವ್ಯಾಪಾರಿ, ನಂಜನಗೋಡು ತಾಲೂಕಿನ ಹುಳಾಲ್ಲಿ ಗ್ರಾಮದ ನಾಗರಾಜ (46) ಮೃತಪಟ್ಟಿದ್ದಾರೆ. ತಾಲೂಕಿನ ಚಿರಿಬಿ ಗ್ರಾಮದ ಕಡೆಯಿಂದ ಕೊಟ್ಟೂರು ಕಡೆಗೆ ಮೋಟರ್ ಸೈಕಲ್‌ನಲ್ಲಿ ಬರುತ್ತಿದ್ದಾಗ ಪಟ್ಟಣದ ಶಾಲಾ ವಾಹನವೊಂದು ಡಿಕ್ಕಿಯಾಗಿದೆ. ನಾಗರಾಜ ಅವರ ತಲೆಗೆ ಮತ್ತು ಹಣೆಗೆ ಗಾಯಗಳಾಗಿ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಸಂಜೆ 6.45ರ ಸುಮಾರಿಗೆ ಮೃತಪಟ್ಟರು. ಶಾಲಾ ಬಸ್ ಚಾಲಕ ವೀರೇಶ್ ವಿರುದ್ಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡಿಕೊಳ್ಳಲಾಗಿದೆ ಎಂದು ಪಿಎಸ್‌ಐ ಗೀತಾಂಜಲಿ ಸಿಂಧೆ ತಿಳಿಸಿದ್ದಾರೆ.