ಲಿಂಗರಾಜು ಕೋರಾ
ಕನ್ನಡಪ್ರಭ ವಾರ್ತೆ, ಬೆಂಗಳೂರುರಾಜ್ಯದಲ್ಲಿ ಖಾಸಗಿ ಶಾಲೆ, ಪಿಯು ಕಾಲೇಜುಗಳನ್ನು ಆರಂಭಿಸುವುದು ಈಗ ಇನ್ನಷ್ಟು ಸುಲಭ. ಹೊಸ ಶಾಲೆ, ಕಾಲೇಜುಗಳ ಆರಂಭಕ್ಕೆ ಅಗತ್ಯ ಭೂಮಿಯ ಗುತ್ತಿಗೆ, ಬಾಡಿಗೆ ಕರಾರು ಅವಧಿ, ಸ್ಥಳ ಬದಲಾವಣೆ, ಭೂ ಪರಿವರ್ತನೆ ಸೇರಿದಂತೆ ಹಲವು ಮಾನದಂಡಗಳನ್ನು ಮತ್ತಷ್ಟು ಸರಳೀಕರಿಸಿ ಸರ್ಕಾರ ನಿಯಮಾವಳಿಗಳಿಗೆ ಬದಲಾವಣೆ ಮಾಡಿದೆ.
ಇದರ ಜೊತೆಗೆ, ಮಾನ್ಯತೆಗೆ ಅರ್ಜಿ ಸಲ್ಲಿಸುವಾಗ ಆಡಿಟ್ ವರದಿ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಣ ಇಲಾಖೆಯ ಹೆಸರಲ್ಲಿ ಜಂಟಿಯಾಗಿ ಭದ್ರತಾ ಠೇವಣಿ ಇಡಬೇಕೆಂದು ಹೊಸ ನಿಯಮ ರೂಪಿಸಲಾಗಿದೆ. ಒಂದು ವೇಳೆ ಶಾಲೆ ಮುಚ್ಚಿದರೆ, ಸರ್ಕಾರಕ್ಕೆ ಯಾವುದೆ ಹಣದ ಬಾಕಿ ಇದ್ದರೆ ಅಂತಹ ಸಂದರ್ಭದಲ್ಲಿ ಈ ಠೇವಣಿಯ ಹಣವನ್ನು ಸರ್ಕಾರ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.ಭೂ ಪರಿವರ್ತನೆ ಬೇಕಿಲ್ಲ:
ಶಿಕ್ಷಣ ಸಂಸ್ಥೆಗಳ ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮ ಇತ್ಯಾದಿ ತಿದ್ದುಪಡಿ ನಿಯಮಗಳ ಪ್ರಕಾರ, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಅಥವಾ ಪಿಯು ಕಾಲೇಜು ಸ್ಥಾಪಿಸಲು ಯಾವುದೇ ಸಂಸ್ಥೆಯು ಸ್ವಂತ ಭೂಮಿ ಇಲ್ಲದಿದ್ದಾಗ ಕನಿಷ್ಠ 15 ವರ್ಷಗಳ ಅವಧಿಯ ನೋಂದಾಯಿತ ಗುತ್ತಿಗೆ ಅಥವಾ ಬಾಡಿಗೆ ಒಪ್ಪಂದವನ್ನು ಹೊಂದಿರಬೇಕು. ಈ ಮೊದಲು 30 ವರ್ಷಗಳಿಗೆ ಇದ್ದ ಗುತ್ತಿಗೆ, ಬಾಡಿಗೆ ಒಪ್ಪಂದವನ್ನು ಈಗ ಅರ್ಧದಷ್ಟು ಇಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಭೂ ಮಾಲೀಕತ್ವದ ಪುರಾವೆಯಾಗಿ ಆರ್‌ಟಿಸಿ, ಇ-ಖಾತಾ ಅಥವಾ ಖಾತಾ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ. ಇದರಿಂದ ಶೈಕ್ಷಣಿಕ ಉದ್ದೇಶಕ್ಕಾಗಿ ಎಂಬು ಭೂ ಪರಿವರ್ತನೆ ಮಾಡಿಸುವ ಅಗತ್ಯ ಇರುವುದಿಲ್ಲ.
ಮಾರಾಟ, ಸ್ಥಳ ಬದಲಾವಣೆ ಸರಳ:
ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಬದಲಾವಣೆ ಅಥವಾ ಸ್ಥಳ ಬದಲಾವಣೆ ತಿದ್ದುಪಡಿ ನಿಯಮಗಳ ಪ್ರಕಾರ, ಶಾಲೆ ಅಥವಾ ಪಿಯು ಕಾಲೇಜುಗಳ ಆಡಳಿತ ಮಂಡಳಿ ಅಥವಾ ಸ್ಥಳ ಬದಲಾವಣೆಗಾಗಿ ಅರ್ಜಿ ಶುಲ್ಕವನ್ನು ಸಂಸ್ಥೆಯ ಪ್ರಕಾರಕ್ಕೆ ಅನುಗುಣವಾಗಿ ₹50 ಸಾವಿರನಿಂದ ₹2 ಲಕ್ಷ ವರೆಗೆ ನಿಗದಿಪಡಿಸಲಾಗಿದೆ. ಒಂದು ಬಾರಿ ಮಾತ್ರ ಆಡಳಿತ ಮಂಡಳಿ, ಸ್ಥಳ ಬದಲಾವಣೆ ಮಾಡಬಹುದೆಂಬ ಷರತ್ತು ಕೈಬಿಡಲಾಗಿದೆ. ಇದರಿಂದ ಖಾಸಗಿ ಶಾಲೆಗಳ ಮಾರಾಟ, ಸ್ಥಳ ಬದಲಾವಣೆ ಸುಲಭವಾಗಿದೆ. ಇದಲ್ಲದೆ ನಗರ ಪ್ರದೇಶದ ಶಿಕ್ಷಣ ಸಂಸ್ಥೆಗಳ ಕಟ್ಟಡಗಳು ಶಿಥಿಲಗೊಂಡಿದ್ದರೆ ಅಥವಾ ಮೂಲಸೌಕರ್ಯದ ಕೊರತೆ ಇದ್ದರೆ ಅದೇ ನಗರ ಪ್ರದೇಶದಲ್ಲಿ ಕನಿಷ್ಠ 15 ವರ್ಷಗಳ ಬಾಡಿಗೆ ಒಪ್ಪಂದದೊಂದಿಗೆ ಹೊಸ ಆವರಣಕ್ಕೆ ಸ್ಥಳಾಂತರಗೊಳ್ಳಲು ಅವಕಾಶ ನೀಡಲಾಗಿದೆ.₹3 ಲಕ್ಷ ಭದ್ರತಾ ಠೇವಣಿ ಕಡ್ಡಾಯ? :ಕರ್ನಾಟಕ ಶಿಕ್ಷಣಸಂಸ್ಥೆಗಳ (ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಾನ್ಯತೆ) ತಿದ್ದುಪಡಿ ನಿಯಮಗಳು 2026ರ ಪ್ರಕಾರ, ಶಾಲಾ ಮಾನ್ಯತೆಗಾಗಿ ಸಲ್ಲಿಸುವ ಪ್ರತಿಯೊಂದು ಅರ್ಜಿಯೊಂದಿಗೆ ವಾರ್ಷಿಕ ಆಡಿಟ್ ವರದಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ನಿಂದ ಇ-ಬ್ಯಾಂಕ್ ಗ್ಯಾರಂಟಿ ರೂಪದಲ್ಲಿ ಭದ್ರತಾ ಠೇವಣಿ ಸಲ್ಲಿಕೆ ಕಡ್ಡಾಯವಾಗಿದೆ. ಮಾಹಿತಿ ಪ್ರಕಾರ, ಹೊಸ ಶಾಲೆಗಳು ₹3 ಲಕ್ಷವರೆಗೆ, 2018ಕ್ಕಿಂತ ಹಳೆಯ ಶಾಲೆಗಳು ಸುಮಾರು ₹50 ಸಾವಿರಗಳಿಂದ ₹1 ಲಕ್ಷ ವರೆಗೆ ಭದ್ರತಾ ಠೇವಣಿ ಇಡಬೇಕು ಎನ್ನಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯು ಈ ಠೇವಣಿಯ ಮೇಲಿನ ಬಡ್ಡಿಯನ್ನು ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದ್ದರೂ, ಶಾಲೆಯ ಬಾಕಿ ಪಾವತಿಸಲು ವಿಫಲವಾದರೆ ಅಥವಾ ಮುಚ್ಚಲ್ಪಟ್ಟರೆ ಆ ಭದ್ರತಾ ಠೇವಣಿ ಹಣವನ್ನು ಬಳಸಿಕೊಳ್ಳುವ ಹಕ್ಕನ್ನು ಶಿಕ್ಷಣ ಇಲಾಖೆಗೆ ನೀಡಲಾಗಿದೆ.
----ಕೋಟ್
ಆರೋಗ್ಯಕರ ಬೆಳವಣಿಗೆ:ಖಾಸಗಿ ಶಾಲೆಗಳಿಗೆ ಸಂಬಂಧಿಸಿದಂತೆ ಸರ್ಕಾರ ವಿವಿಧ ನಿಯಮಗಳಿಗೆ ತಿದ್ದುಪಡಿ ತಂದು ಮಾನದಂಡಗಳನ್ನು ಸರಳೀಕರಿಸಿರುವುದು ಆರೋಗ್ಯಕರ ಬೆಳವಣಿಗೆ. ಕಳೆದ ಏಳೆಂಟು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ಆದರೆ, 2018ಕ್ಕೆ ಮೊದಲು ಆರಂಭವಾದ ಶಾಲೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಹಾಗೂ ಸ್ಪಷ್ಟವಾದ ಮಾನದಂಡಗಳನ್ನು ಹೊರಡಿಸಬೇಕು.
- ಡಿ.ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ