ಸಾರಾಂಶ
- ಮಲೇಬೆನ್ನೂರು ಸರ್ಕಾರಿ ಕಾಲೇಜಿನಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ರಾಜ್ಯದ ೩೫ ಶೈಕ್ಷಣಿಕ ಜಿಲ್ಲೆಗಳಲ್ಲಿ ೨೦೮ ತಾಲೂಕುಗಳಲ್ಲಿ ೫೩,೮೧೦ ಶಾಲೆಗಳ ೫೩ ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರತಿ ತಾಲೂಕಿನ ೨ ಸ್ಥಳಗಳಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಉದ್ಘಾಟನೆಯಾಗುತ್ತಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಕೃಷ್ಣಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳ ಸೌಲಭ್ಯಗಳು ಜನಸಾಮಾನ್ಯರಿಗೆ ತಿಳಿಯುವಂತಾಗಲು ಸರ್ಕಾರದ ಮಹತ್ವಪೂರ್ಣ ಕಾರ್ಯಕ್ರಮ ಇದಾಗಿದೆ. ವಿಶೇಷ ಮಕ್ಕಳಿಗೆ ವಿಶೇಷ ಸೌಲಭ್ಯಗಳನ್ನೂ ಶಿಕ್ಷಣ ಇಲಾಖೆ ನೀಡುತ್ತಿದೆ. ಅಂಬೇಡ್ಕರ್ ಅವರು ದೇವಾಲಯಗಳ ಬದಲು ಗ್ರಂಥಾಲಯಗಳು ಹೆಚ್ಚು ಸ್ಥಾಪನೆ ಆಗಬೇಕು ಎಂದಿದ್ದರು. ಪ್ರಸ್ತುತ ಖಾಸಗಿ ಶಾಲೆಗಳು ವ್ಯಾಪಾರಿ ಮನೋಭಾವನೆ ಹೊಂದಿವೆ ಎಂದು ವಿಷಾದಿಸಿದರು.
ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ತರಗತಿಗಳನ್ನು ನಡೆಸಿದ ನಂತರ ಸರ್ಕಾರವೇ ಆ ತರಗತಿಗಳನ್ನು ವಶಪಡಿಸಿಕೊಂಡು ಅನದಾನ ನೀಡಿ, ಅಲ್ಲಿನ ಉಪಾಧ್ಯಾಯರಿಗೆ ಗೌರವಧನ ನೀಡಲಿದೆ. ನಲಿಕಲಿ ಕಿಟ್, ವಿಜ್ಞಾನ ಮತ್ತು ಗಣಿತ ಕಿಟ್‌ಗಳು ಸಹಾ ಶಾಲೆಗಳಿಗೆ ಮಂಜೂರಾಗಿದ್ದು, ಸ್ಮಾರ್ಟ್ ಟಿ.ವಿ.ಗಳು ಸಹ ಬರಲಿವೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ದುರ್ಗಪ್ಪ ಮಾತನಾಡಿ, ಸರ್ಕಾರಿ ಶಾಲೆಗಳ ಸೌಲಭ್ಯಗಳಿಗೆ ವ್ಯಾಪಕ ಪ್ರಚಾರ ಒದಗಿಸಬೇಕಿದೆ. ಹರಿಹರದ ಧಾ.ರಾ.ಮ. ಶಾಲೆಯಲ್ಲಿ ಈ ಕಾರ್ಯಕ್ರಮ ಉದ್ಘಾಟನೆಗೊಂಡು ಗುಣಮಟ್ಟದ ಶಿಕ್ಷಣ ದೊರಕುವಂತಾಗಲು ಪೋಷಕರು ಮತ್ತು ಅಧಿಕಾರಿಗಳ ಕಾಳಜಿ ಅಗತ್ಯವಾಗಿದೆ. ಪ್ರತಿಭಾನ್ವಿತ ಶಿಕ್ಷಕರಿಗೆ ತರಬೇತಿ ನೀಡಿ ವಿಶೇಷ ಮಕ್ಕಳಿಗೆ ತರಬೇತಿ ನೀಡಿ ೩ ಕಿ.ಮೀ.ಗೆ 1ರಂತೆ ಪ್ರೌಢಶಾಲೆ ಮಂಜೂರು ಮಾಡಿ, ಬಡಮಕ್ಕಳಿಗೆ ಇಲಾಖೆ ನೆರವಾಗಿದೆ ಎಂದರು.
ಅಕ್ಷರ ದಾಸೋಹದ ಅಧಿಕಾರಿ ವೀರೇಶ್ ಮಾತನಾಡಿ, ಮಕ್ಕಳ ಅಪೌಷ್ಠಿಕತೆ ದೂರ ಮಾಡಲು ಬಿಸಿಯೂಟ, ಮೊಟ್ಟೆ, ಮಾತ್ರೆಗಳು, ಹಾಲು, ರಾಗಿಮಾಲ್ಟ್ ನೀಡುತ್ತಿದೆ. ಪೋಷಕರು ಆಂಗ್ಲ ವ್ಯಾಮೋಹದಿಂದ ಖಾಸಗಿ ಶಾಲೆಯತ್ತ ಮುಖ ಮಾಡುವುದು ದುರಾದೃಷ್ಟ ಎಂದರು.ಪುರಸಭೆ ಅಧ್ಯಕ್ಷ ಹನುಮಂತಪ್ಪ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ, ಶಿಕ್ಷಕರು ಪುರಸಭೆಗೆ ಕಸ, ನೀರು, ಚರಂಡಿ ಸ್ವಚ್ಛತೆ, ದೀಪ ಹಾಕಿಸುವುದು, ಕೇಳುವುದರ ಜೊತೆಗೆ ಮಕ್ಕಳ ಶಿಕ್ಷಣ, ಶಿಕ್ಷಕರ ಹಾಜರಿ, ಅಡುಗೆಯವರ ಕರ್ತವ್ಯ ಇವುಗಳ ಬಗ್ಗೆ ತಿಳಿದುಕೊಳ್ಳಬೇಕಿದೆ. ಆ ಕಾರಣಕ್ಕೆ ಜೂನ್ ೪ರಂದು ಎಲ್ಲ ಮುಖ್ಯ ಶಿಕ್ಷಕರ ಸಭೆ ಕರೆಯಲಾಗುವುದು ಎಂದರು.
ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಭಾಗ್ಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಸದಸ್ಯ ಷಾ ಅಬ್ರಾರ್, ಶಾಲಾಭಿವೃದ್ಧಿ ಪದಾಧಿಕಾರಿ ಆನಂದಾಚಾರ್, ಮುಸ್ತಾಕ್ ಅಹ್ಮದ್ ಹಾಗೂ ಪೋಷಕರು, ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು ಹಾಜರಿದ್ದರು.- - -
-೨೧ಎಂಬಿಆರ್೧.ಜೆಪಿಜಿ:ಮಲೇಬೆನ್ನೂರಿನಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷ ಹನುಮಂತಪ್ಪ ಉದ್ಘಾಟಿಸಿದರು.