ಶಾಲಾ ಸಮವಸ್ತ್ರದಲ್ಲೂ ಲಾಭ ಗಳಿಸುವ ಉದ್ದೇಶದಿಂದ ಕಳೆದ ಐದು ವರ್ಷಗಳಿಂದ ಬಹುತೇಕ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ತಾವೇ ಸಮವಸ್ತ್ರ ಪೂರೈಸುತ್ತಿದ್ದು, ಇದರಿಂದ ಸಾಂಪ್ರದಾಯಿಕವಾಗಿ ಶಾಲಾ ಮಕ್ಕಳ ಬಟ್ಟೆ ಹೊಲಿಯುವ ವೃತ್ತಿಯನ್ನೇ ಅವಲಂಬಿಸಿರುವ ನೂರಾರು ಟೈಲರ್‌ಗಳ ಆದಾಯಕ್ಕೆ ಪೆಟ್ಟು ಬಿದ್ದಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಶಾಲಾ ಸಮವಸ್ತ್ರದಲ್ಲೂ ಲಾಭ ಗಳಿಸುವ ಉದ್ದೇಶದಿಂದ ಕಳೆದ ಐದು ವರ್ಷಗಳಿಂದ ಬಹುತೇಕ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ತಾವೇ ಸಮವಸ್ತ್ರ ಪೂರೈಸುತ್ತಿದ್ದು, ಇದರಿಂದ ಸಾಂಪ್ರದಾಯಿಕವಾಗಿ ಶಾಲಾ ಮಕ್ಕಳ ಬಟ್ಟೆ ಹೊಲಿಯುವ ವೃತ್ತಿಯನ್ನೇ ಅವಲಂಬಿಸಿರುವ ನೂರಾರು ಟೈಲರ್‌ಗಳ ಆದಾಯಕ್ಕೆ ಪೆಟ್ಟು ಬಿದ್ದಿದೆ.

ಪ್ರತಿವರ್ಷ ಶಾಲೆಗಳು ಆರಂಭವಾಗುವ ಜೂನ್‌ನಿಂದ ಆಗಸ್ಟ್‌ ವರೆಗೆ ಹೆಚ್ಚಿನ ಪ್ರಮಾಣದಲ್ಲಿ ಶಾಲಾ ಸಮವಸ್ತ್ರ ಹೊಲಿಗೆ ಕೆಲಸ ದೊರೆಯುತ್ತಿತ್ತು. ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನ ಪೋಷಕರು ಮಕ್ಕಳಿಗೆ ಸಮವಸ್ತ್ರದ ಬಟ್ಟೆ ಖರೀದಿಸಿ, ಟೈಲರ್‌ಗಳ ಬಳಿ ಅಳತೆ ನೀಡಿ ಹೊಲಿಸಿಕೊಳ್ಳುತ್ತಿದ್ದರು. ಇದರಿಂದ ಮೂರು ತಿಂಗಳ ಅವಧಿಯಲ್ಲಿ ಉತ್ತಮ ಆದಾಯ ಬರುತ್ತಿತ್ತು. ಆದರೆ, ಖಾಸಗಿ ಶಾಲೆಗಳು ಸಮವಸ್ತ್ರವನ್ನೇ ಸಿದ್ಧಪಡಿಸಿ ಮಾರಾಟ ಮಾಡುವ ವ್ಯವಸ್ಥೆ ಅಳವಡಿಸಿಕೊಂಡ ಬಳಿಕ ಈ ಅವಕಾಶವೂ ಬಹುತೇಕ ಇಲ್ಲದಂತಾಗಿದೆ. ಶಾಲೆಗಳು ನಿರ್ದಿಷ್ಟ ಅಂಗಡಿ ಅಥವಾ ಸಂಸ್ಥೆಯ ಮೂಲಕ ಸಮವಸ್ತ್ರ ತಯಾರಿಸಿ, ಪೋಷಕರಿಗೆ ನಿಗದಿತ ದರದಲ್ಲಿ ಮಾರಾಟ ಮಾಡುತ್ತಿವೆ. ಕೆಲವೆಡೆ ಶಾಲೆಯ ಆವರಣದಲ್ಲಿಯೇ ಸಮವಸ್ತ್ರ ಮಾರಾಟ ಮಾಡುವ ವ್ಯವಸ್ಥೆಯೂ ಇದೆ. ಪರಿಣಾಮ ಪೋಷಕರು ಸ್ಥಳೀಯ ಟೈಲರ್‌ಗಳ ಬಳಿ ಹೊಲಿಸುವ ಅವಕಾಶ ಕಳೆದುಕೊಂಡಿದ್ದಾರೆ. ಖಾಸಗಿ ಶಾಲಾ ಆಡಳಿತ ಮಂಡಳಿಯ ಹಣದ ಹಪಾಹಪಿಯಿಂದಾಗಿ ಅನೇಕ ವರ್ಷಗಳಿಂದ ಟೈಲರ್ ವೃತ್ತಿಯ ಅವಲಂಬಿಸಿದವರ ಬದುಕು ಅಯೋಮಯವಾಗಿದೆ. ವಿಕಲಚೇತನ ಟೈಲರ್‌ಗಳ ಪರಿಸ್ಥಿತಿಯಂತೂ ಹೇಳತೀರದಾಗಿದೆ.

ಕೃಷಿ ಸಂಕಷ್ಟದ ಪರಿಣಾಮ

ಜಿಲ್ಲೆಯ ರೈತರ ಕೃಷಿ ಪ್ರಗತಿಗೂ ಕಳೆದ ಮೂರು ವರ್ಷಗಳಿಂದ ಹಿನ್ನಡೆಯಾಗಿದ್ದು, ಈ ಬಾರಿಯ ಮುಂಗಾರು ಕೂಡ ನಿರೀಕ್ಷಿತ ಮಟ್ಟದಲ್ಲಿ ಕೈಹಿಡಿಯದಿರುವುದು ಗ್ರಾಮೀಣ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ರೈತರ ಆದಾಯ ಕುಸಿದಿರುವುದರಿಂದ ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೂ ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸಾಮಾನ್ಯವಾಗಿ ಬಟ್ಟೆ ಹೊಲಿಗೆ ಕೆಲಸ ಹೆಚ್ಚಾಗಬೇಕಿದ್ದ ಸಮಯದಲ್ಲೂ ಟೈಲರ್‌ಗಳಿಗೆ ನಿರೀಕ್ಷಿತ ಪ್ರಮಾಣದ ಕೆಲಸ ಸಿಗುತ್ತಿಲ್ಲ. ಇದೂ ಟೈಲರ್‌ಗಳ ವೃತ್ತಿಯ ಮೇಲೆ ಪರಿಣಾಮ ಬೀರಿದೆ ಎಂದು ಟೈಲರ್‌ಗಳು ಅಳಲು ತೋಡಿಕೊಳ್ಳುತ್ತಾರೆ.

ವೃತ್ತಿಯನ್ನೇ ನಂಬಿದವರ ಗೋಳು

ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣ ಹಾಗೂ ಗ್ರಾಮಗಳಲ್ಲಿ ಸಣ್ಣ ಪ್ರಮಾಣದಲ್ಲಿ ಟೈಲರಿಂಗ್‌ ಅಂಗಡಿಗಳನ್ನು ನಡೆಸುತ್ತಿರುವ ಅನೇಕರು ಇದೇ ವೃತ್ತಿಯನ್ನೇ ಜೀವನಾಧಾರ ಮಾಡಿಕೊಂಡಿದ್ದಾರೆ. ಬಳ್ಳಾರಿ ನಗರದಲ್ಲಿ ಜೀನ್ಸ್‌ ಟೈಲರಿಂಗ್ ಹೊರತುಪಡಿಸಿ ಸಾಂಪ್ರದಾಯಿಕ ಉಡುಪುಗಳನ್ನು ಹೊಲಿಯುವ ಟೈಲರ್‌ಗಳು 1 ಸಾವಿರಕ್ಕೂ ಅಧಿಕ ಜನರಿದ್ದಾರೆ. ಜಿಲ್ಲೆಯಲ್ಲಿ 3 ಸಾವಿರಕ್ಕೂ ಅಧಿಕ ಜನರು ಟೈಲರ್‌ ವೃತ್ತಿಯ ಮೇಲೆಯೇ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ಮದುವೆ, ಹಬ್ಬ, ಶಾಲಾ ಸಮವಸ್ತ್ರ ಸೇರಿದಂತೆ ವಿವಿಧ ಬಟ್ಟೆಗಳ ಹೊಲಿಗೆ ಕೆಲಸವೇ ಅವರ ಪ್ರಮುಖ ಆದಾಯದ ಮೂಲವಾಗಿತ್ತು. ಆದರೆ, ಸಿದ್ಧ ಉಡುಪುಗಳ ಬಳಕೆ ಹೆಚ್ಚಳ, ಆನ್‌ಲೈನ್‌ ಖರೀದಿ ಹಾಗೂ ಶಾಲೆಗಳೇ ಸಮವಸ್ತ್ರ ಪೂರೈಸುತ್ತಿರುವುದರಿಂದ ಸಾಂಪ್ರದಾಯಿಕ ಟೈಲರ್‌ ವೃತ್ತಿಗೆ ಹೊಡೆತ ಬಿದ್ದಿದೆ.

‘ಶಾಲೆಗಳು ಸಮವಸ್ತ್ರ ಪೂರೈಸುವುದನ್ನು ನಿಲ್ಲಿಸಿ, ಪೋಷಕರು ತಮ್ಮ ಇಷ್ಟದ ಟೈಲರ್‌ ಬಳಿ ಹೊಲಿಸಿಕೊಳ್ಳಲು ಅವಕಾಶ ನೀಡಬೇಕು. ಇದರಿಂದ ಸ್ಥಳೀಯ ಸಣ್ಣ ವೃತ್ತಿದಾರರಿಗೆ ಕೆಲಸ ಸಿಗಲಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮಂತೆಯೇ ಬೇರೆಯವರದ್ದೂ ಬದುಕು ಇದೆ ಎಂಬ ಮಾನವೀಯತೆ ಮೈಗೂಡಿಸಿಕೊಳ್ಳಬೇಕು ಎಂದು ಟೈಲರ್‌ಗಳು ಮನವಿ ಮಾಡುತ್ತಿದ್ದಾರೆ. ಇವರ ಸಮಸ್ಯೆಗಳ ನಿವಾರಣೆಗೆ ಪೂರಕ ಕ್ರಮದ ಅಗತ್ಯವಿದೆ.

ಕಳೆದ ಐದು ವರ್ಷಗಳಿಂದ ಕೆಲಸವಿಲ್ಲದೆ ಒದ್ದಾಡುತ್ತಿದ್ದೇನೆ. ಸಮವಸ್ತ್ರಗಳನ್ನು ಶಾಲೆಯಲ್ಲಿಯೇ ವಿತರಣೆ ಮಾಡುತ್ತಿರುವುದರಿಂದ ನಮಗೆ ಕಷ್ಟವಾಗಿದೆ. ಬದುಕು ನಿರ್ವಹಣೆಗೂ ಪರದಾಡುವಂತಾಗಿದೆ. ನಮ್ಮ ಕಷ್ಟ ಯಾರ ಮುಂದೆ ಹೇಳಿಕೊಳ್ಳಬೇಕು ಎಂಬುದೇ ತಿಳಿಯದಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಬಳ್ಳಾರಿಯ ಪಾರ್ವತಿನಗರದ ವಿಕಲಚೇತನ ಟೈಲರ್ ನಾಗರಾಜ್ ಅವರು.