ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಳೆದ 30 ವರ್ಷಗಳ ಹಿಂದೆ ದೇಶವು ಖಾಸಗೀಕರಣ ಹಾಗೂ ಜಾಗತೀಕರಣಕ್ಕೆ ತೆರೆದುಕೊಂಡಾಗಲೇ ಮನುಷ್ಯರ ನಡುವಿನ ಸಂಬಂಧಗಳ ಕೊಂಡಿ ಕಳಚಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯಿಂದ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಶೈಕ್ಷಣಿಕ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ ದಡದಪುರ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, 1991- 92ರಲ್ಲಿ ಪದವಿ ವಿದ್ಯಾಭ್ಯಾಸ ಪಡೆಯುತ್ತಿದ್ದ ವೇಳೆ ಖಾಸಗೀಕರಣ ಮತ್ತು ಜಾಗತೀಕರಣ ಜಾರಿಗೆ ಬಂತು. ನನ್ನ ನಿರೀಕ್ಷೆಯಂತೆ ಇಂದು ತಂದೆ- ತಾಯಿ, ಸೋದರ- ಸೋದರಿಯರ ಜೊತೆಗಿನ ಸಂಬಂಧಗಳ ಹಾಗೂ ಸ್ನೇಹ, ವಿಶ್ವಾಸಗಳು ಕಣ್ಮರೆಯಾಗುತ್ತಿರುವುದನ್ನು ನಾವು ನೀವೆಲ್ಲ ನೋಡಿಕೊಂಡು ಅದೇ ದಾರಿಯಲ್ಲಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಚಂದ್ರಶೇಖರ್ ದಡದಪುರ ರವರು ಸಂಬಂಧಿಕರು ಮಾತ್ರವಲ್ಲದೆ ತನ್ನ ಹಲವು ಸ್ನೇಹಿತರೊಂದಿಗೆ ಇಂದಿಗೂ ಉತ್ತಮ ಬಳಗವನ್ನು ಹೊಂದಿ ಜೊತೆಯಲ್ಲಿರುವುದು ಆಶ್ಚರ್ಯ ತಂದಿದೆ. ಅವರ ಸಾಮಾಜಿಕ ಕಾಳಜಿ ಮತ್ತಷ್ಟು ಹೆಚ್ಚಳವಾಗಲಿ ಎಂದು ಶುಭ ಹಾರೈಸಿದರು.ವೃತ್ತ ನಿರೀಕ್ಷಕ ಬಿ.ಜಿ.ಕುಮಾರ್ ಮಾತನಾಡಿ, ಹಣ, ಐಶ್ವರ್ಯ ಬಂದ ಕೂಡಲೇ ಮತ್ತಷ್ಟು ಹಣ ಸಂಪಾದನೆ ಮಾಡಬೇಕು ಎಂಬ ಆಲೋಚನೆಯಲ್ಲಿರುವವರ ನಡುವೆ ಚಂದ್ರಶೇಖರ್ ದಡದಪುರ ವಿಭಿನ್ನವಾಗಿದ್ದಾರೆ. ಅವರು ಮತ್ತಷ್ಟು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವ ಚಂದ್ರಶೇಖರ್ ದಡದಪುರ ಮಾತನಾಡಿ, ನಾನು ಬಡಕುಟುಂಬದಲ್ಲಿ ಹುಟ್ಟಿದ್ದರಿಂದ ವಿದ್ಯಾಭ್ಯಾಸ ಕಲಿಕೆ ವೇಳೆ ತುಂಬಾ ಕಷ್ಟು ಪಡುವಂತಾಯಿತು. ಆ ಕಾಲದಲ್ಲಿ ನನ್ನ ಕೈಹಿಡಿದವರು ನನ್ನ ಸ್ನೇಹಿತರು ಮತ್ತು ಹಿತೈಷಿಗಳು ಎಂದು ಸ್ಮರಿಸಿದರು. ಇದೀಗ ನಾನು ಶಾಲೆ ಸೇರಿದಂತೆ ಅನೇಕ ಉದ್ಯಮಗಳನ್ನು ಸ್ಥಾಪಿಸಿ ನೂರಾರು ಮಂದಿಗೆ ನೌಕರಿ ನೀಡಿದ್ದೇನೆ ಎಂದರು.ಪ್ರಾದ್ಯಾಪಕ ಡಾ.ಬಿ.ಟಿ.ರಜನಿಕಾಂತ್, ಸಮಿತಿ ರಾಜ್ಯಾಧ್ಯಕ್ಷ ಡಾ.ಸುಧಾಕರ್, ಚಂದ್ರಶೇಖರ್ ದಡದಪುರ ಅವರ ಸ್ನೇಹ ಬಳಗ ಸೇರಿದಂತೆ ಇತರರು ಉಪಸ್ಥಿತರಿದ್ದರು.