ಕನ್ನಡಪ್ರಭ ವಾರ್ತೆ ಟಿ.ನರಸೀಪುರ
ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಯತ್ನವನ್ನು ರೈತ ಸಮುದಾಯ ಸಹಿಸುವುದಿಲ್ಲ, ಖಾಸಗಿ ಕಂಪನಿಗಳ ಕೈಗೆ ವಿದ್ಯುತ್ ವ್ಯವಸ್ಥೆ ಒಪ್ಪಿಸಿದರೆ ರೈತರು ಮತ್ತು ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಲಿದ್ದು, ಇದು ರೈತರ ಪಾಲಿಗೆ ಮರಣಶಾಸನವಾಗಲಿದೆ ಎಂದು ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಚೇರಿಯಲ್ಲಿ ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎಂ. ಮಹೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯಲ್ಲಿ ರೈತರು ಖಾಸಗೀಕರಣದ ವಿರುದ್ಧ ಧ್ವನಿ ಎತ್ತಿದರು.
ರೈತ ಮುಖಂಡ ಕಿರಗಸೂರು ಶಂಕರ್ ಮಾತನಾಡಿ, ಟಾಟಾ ಪವರ್ ಸಂಸ್ಥೆಯು ವಿದ್ಯುತ್ ಕ್ಷೇತ್ರ ನಿರ್ವಹಣೆಗೆ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಬೇಕು. ಖಾಸಗಿ ಸಂಸ್ಥೆಗಳು ಸೇವೆಗಿಂತ ಲಾಭದ ಉದ್ದೇಶವನ್ನೇ ಹೊಂದಿದ್ದು, ವಿದ್ಯುತ್ ವ್ಯವಸ್ಥೆಯನ್ನು ಅವರ ವಶಕ್ಕೆ ನೀಡಿದರೆ ರೈತರ ಹಿತಾಸಕ್ತಿ ಸಂಪೂರ್ಣ ಹಾಳಾಗಲಿದೆ. ಈ ಕುರಿತು ರೈತರ ಆಕ್ಷೇಪಣೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ಅಧಿಕಾರಿಗಳು ಕಡ್ಡಾಯವಾಗಿ ತಲುಪಿಸಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ರೈತರು ಕೃಷಿ ಪಂಪ್ ಸೆಟ್ ಗಳಿಗೆ ಅಳವಡಿಸಿರುವ ಸೋಲಾರ್ ವ್ಯವಸ್ಥೆಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ದೂರಿದರು.
ಹಲವೆಡೆ ಸೋಲಾರ್ ಘಟಕಗಳು ಕಾರ್ಯನಿರ್ವಹಿಸದ ಕಾರಣ ಬಾಳೆ ಸೇರಿದಂತೆ ವಿವಿಧ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಅಪರಾಧ ತಡೆಗಾಗಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸದಿರುವುದನ್ನೂ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೀರೇಶ್, ತಾಲೂಕಿನಲ್ಲಿ 11,240 ಕೃಷಿ ಪಂಪ್ ಸೆಟ್ ಗಳು ಅಧಿಕೃತವಾಗಿ ನೋಂದಾಯಿತವಾಗಿದ್ದು, ಅನಧಿಕೃತ ಪಂಪ್ ಸೆಟ್ ಗಳನ್ನು ಗುರುತಿಸಿ ಅಧಿಕೃತಗೊಳಿಸುವ ಕಾರ್ಯ ನಡೆಯುತ್ತಿದೆ ಎಂದರು.
ತಾಲೂಕಿನಲ್ಲಿ ಅಳವಡಿಸಿರುವ 22 ಸೋಲಾರ್ ಘಟಕಗಳ ಪೈಕಿ ಹೆಚ್ಚಿನವು ಸುಸ್ಥಿತಿಯಲ್ಲಿದ್ದು, ಉಳಿದವುಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.ರೈತ ಮುಖಂಡ ಚಂದ್ರು ಮಾತನಾಡಿ, ಮಹಾರಾಜರ ಕಾಲದಿಂದಲೂ ಸರ್ಕಾರ ಅಪಾರ ಹಣ ವೆಚ್ಚ ಮಾಡಿ ನಿರ್ಮಿಸಿರುವ ವಿದ್ಯುತ್ ವ್ಯವಸ್ಥೆಯನ್ನು ಖಾಸಗಿ ಬಂಡವಾಳಶಾಹಿಗಳಿಗೆ ಒಪ್ಪಿಸುವುದು ಜನವಿರೋಧಿ ಕ್ರಮವಾಗಿದೆ. ರೈತರ ಹೋರಾಟ ಮತ್ತು ಮನವಿಯನ್ನು ಸರ್ಕಾರದ ಗಮನಕ್ಕೆ ತಂದು ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡುವಂತೆ ಒತ್ತಾಯಿಸಬೇಕು ಎಂದರು.
ಬಿಜೆಪಿ ಮುಖಂಡ ಎನ್. ಲೋಕೇಶ್ ಮಾತನಾಡಿ, ಶಂಭುದೇವನಪುರ ಗ್ರಾಮದ ಬಿ. ಗುರುಮಲ್ಲಪ್ಪ ಅವರು 2005ರಲ್ಲಿಯೇ ನೀರಾವರಿ ಪಂಪ್ ಸೆಟ್ ಸಂಪರ್ಕಕ್ಕಾಗಿ ಹಣ ಪಾವತಿಸಿದ್ದರೂ ಇಂದಿಗೂ ಆರ್.ಆರ್. ಸಂಖ್ಯೆ ನೀಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಕೂಡಲೇ ಸಂಪರ್ಕ ನೀಡಬೇಕು ಅಥವಾ ಬಡ್ಡಿ ಸಮೇತ ಹಣವನ್ನು ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು.ಸಭೆಯಲ್ಲಿ ಜಂಗಲ್ ಕಟಿಂಗ್ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವುದು, ಸೀಹಳ್ಳಿ ಗ್ರಾಮದಲ್ಲಿನ ವಿದ್ಯುತ್ ಕಂಬಗಳ ಸಮಸ್ಯೆ ಬಗೆಹರಿಸುವುದು ಸೇರಿದಂತೆ ವಿವಿಧ ಗ್ರಾಮಗಳ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಬಗ್ಗೆ ರೈತರು ಮನವಿ ಸಲ್ಲಿಸಿದರು.
ಸಾರ್ವಜನಿಕರು ಹಾಗೂ ರೈತರು ನೀಡಿದ ಸಲಹೆ-ಸೂಚನೆಗಳನ್ನು ಪರಿಗಣಿಸಿ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.ಸಭೆಯಲ್ಲಿ ಸಹಾಯಕ ಎಂಜಿನಿಯರ್ ಚಂದ್ರಕಲಾ, ಕಿರಿಯ ಎಂಜಿನಿಯರ್‌ಗಳಾದ ಮಂಜು, ಗೀತಾ, ರಂಗಸ್ವಾಮಿ, ಫಿಯಾಜ್ ಪಾಶ, ನಾಗರಾಜು ಹಾಗೂ ರೈತ ಮುಖಂಡರಾದ ಪ್ರಸಾದ್ ನಾಯಕ್, ಶಿವಕುಮಾರ್, ಸಾರ್ವಜನಿಕರು ಇದ್ದರು.