ಪ್ರೀಯಾಂಕ್ ಸೂಪರ್ ಸಿಎಂ ರೀತಿಯಲ್ಲಿ ವರ್ತನೆ: ಸಿಟಿ ರವಿ

| Published : Jun 26 2024, 12:32 AM IST

ಸಾರಾಂಶ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರೀಯಾಂಕ್ ಖರ್ಗೆ ಸೂಪರ್ ಸಿಎಂ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಎಂಎಲ್‌ಸಿ ಸಿಟಿ ರವಿ ಪ್ರಿಯಾಂಕ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರೀಯಾಂಕ್ ಖರ್ಗೆ ಸೂಪರ್ ಸಿಎಂ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಎಂಎಲ್‌ಸಿ ಸಿಟಿ ರವಿ ಪ್ರಿಯಾಂಕ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತುರ್ತು ಪರಿಸ್ಥಿತಿಯ 49ನೇ ವರ್ಷಾಚರಣೆಯ ಉಪನ್ಯಾಸದಲ್ಲಿ ಪಾಲ್ಗೊಳ್ಳಲು ಕಲಬುರಗಿಗೆ ಆಗಮಿಸಿದ್ದ ಸಿಟಿ ರವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಇಲಾಖೆಯ ಅನೇಕ ಸಮಸ್ಯೆಗಳು ಪರಿಹಾರ ಕಾಣದೆ ನೆನೆಗುದಿಗೆ ಬಿದ್ರೂ ಕೂಡಾ ಅವನ್ನೆಲ್ಲ ನಿರ್ಲಕ್ಷ ತೋರುತ್ತ ಅನ್ಯರ ಇಲಾಖೆಗಳಲ್ಲೇ ಮೂಗು ತೂರಿಸುತ್ತಿದ್ದಾರೆಂದು ದೂರಿದರು.

ರಾಜ್ಯದಲ್ಲಿ ಕಲುಷಿತ ನೀರು ಸೇವಿಸಿ 17ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಯಾವ ಡಿಸಿ, ಸಿಇಓ ಮೇಲೆ ಕ್ರಮವಾಗಿದೆ ಹೇಳಲಿ? ಅದನ್ನು ಬಿಟ್ಟು ,ಅವರದ್ದೇ ಖಾತೆ ಈ ಬಗ್ಗೆ ಮಾತನಾಡುವುದು ಬಿಟ್ಟು ಪ್ರೀಯಾಂಕ್ ಖರ್ಗೆ ಉಳಿದೆಲ್ಲಾ ಖಾತೆಗೆ ಸಂಬಂಧಿಸಿದಂತೆ ಮಾತಾಡುತ್ತಿದ್ದಾರೆಂದು ಜರಿದರು.

ಎಲ್ಲಾ ಖಾತೆಯ ಪವರ್ ಆಫ್ ಅಟಾರ್ನಿ (ಜಿಪಿಎ) ಪ್ರೀಯಾಂಕ್ ಖರ್ಗೆ ತಗೊಂಡಿದ್ದಾರೆ. ಅವರಿಗೆ ಯಾರೂ ಈ ಅಧಿಕಾರ ಕೊಟ್ಟಿಲ್ಲ ಅವರೇ ಸ್ವತಃ ತಗೊಂಡಿದ್ದು. ಸಿಎಂ ಅವರ ಖಾತೆಯಿಂದ ಹಿಡಿದು ಎಲ್ಲಾ ಖಾತೆಗಳಲ್ಲೂ ಖರ್ಗೆ ಕೈ ಆಡಿಸುತ್ತಾರೆ. ಆದರೆ ಕಲುಷಿತ ನೀರು ಸೇವಿಸಿ 17 ಜನ ಬಲಿಯಾಗಿದ್ದಾರೆ. ತಮ್ಮ ಖಾತೆಯ ಈ ಸಮಸ್ಯೆ ಬಗ್ಗೆ ಮಾತ್ರ ಡೋಂಟ್ ಕೇರ್ ಎನ್ನುವ ಮನೋಸ್ಥಿತಿ ಅವರದ್ದು. ಇಂತಹವರು ಸಂಪುಟದಲ್ಲಿದ್ದರೆ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆಯೇ ಸರಿ ಎಂದು ಸಿಟಿ ರವಿಯವರು ಸಚಿವ ಖರ್ಗೆ ಕಾರ್ಯವೈಖರಿಯನ್ನು ಟೀಕಿಸಿದರು.

ಡಿಸಿಎಂ ದಂಗಲ್ ಕಾಂಗ್ರೆಸ್ ಪತನಕ್ಕೂ ಕಾರಣವಾಗಬಹುದು: ಜಾತಿವಾರು ಡಿಸಿಎಂ ಕೂಗು ಸುಮ್ಮನೇ ಬರುತ್ತಿರುವ ಕೂಗಲ್ಲ. ಇದರ ಹಿಂದೆ ರಾಜಕಾರಣ ಇದೆ, ಕಾಂಗ್ರೆಸ್ ಶಾಸಕರ ಅಸಹನೆ ಇದೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಆಂತರಿಕ ಕಲಹದಿಂದ ಸರ್ಕಾರ ಬೀಳಬಹುದು. ಈಗಾಗಲೇ ಬಿಆರ್‌ ಪಾಟೀಲರು, ನಾಡಗೌಡ ಅವರು ಹೇಳಿಕೆ ಕೊಟ್ಟಿದ್ದಿದೆ. ಶಾಸಕರ ಅಸಹನೆಯ ಕಟ್ಟೆ ಬೇಗ ಒಡೆದು ಹೋಗುತ್ತೆ ಅನ್ನಿಸುತ್ತಿದೆ ಎಂದರು.

ಸರಕಾರ ಜನರ ಮತ್ತು ಶಾಸಕರ ವಿಶ್ವಾಸ ಕಳೆದುಕೊಂಡಾಗ ಸಂಖ್ಯಾಬಲ ಮುಖ್ಯವಾಗೋದಿಲ್ಲ. ಈಗಾಗಲೇ ಆ ಹಂತ ತಲುಪಿದತಾಗಿದೆ. ಕಾಂಗ್ರೆಸ್ ನ ಅತೃಪ್ತ ಶಾಸಕರು ಬರೀ ಸಭೆ ಮಾತ್ರವಲ್ಲ, ಮುಂಬೈ ,ದೆಹಲಿ ಹೈದ್ರಾಬಾದ ಗೆ ಹೋಗಿ ಬಂದಿದಾರೆಂಬ ಮಾಹಿತಿ ಇದೆ ಎಂದರು.

ಈ ಸರಕಾರ ಬೀಳಿಸಲು ನಾವು ಯೋಚನೆ ಮಾಡ್ತಿಲ್ಲ. ಕಾಂಗ್ರೆಸ್‌ನಲ್ಲಿ ಕೆಲವರಿಗೆ ಮೃಷ್ಟಾನ್ನ ಭೋಜನ, ಕೆಲವರಿಗೆ ಉಪವಾಸ ಎಂಬಂತಾಗಿದೆ. ಗ್ಯಾರೆಂಟಿಯಿಂದಾಗಿ ಹಣ ಇಲ್ಲ ಅಂತ ನಮಗೆ ಹೇಳ್ತಿರಿ, ಕೆಲವರು ಮಾತ್ರ ಲೂಟಿ ಮಾಡ್ತಾನೆ ಇದ್ದೀರಿ ಎಂದು ಕಾಂಗ್ರೆಸ್‌ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆಂದು ರವಿ ಹೇಳಿದರು.

13 ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಹಗರಣಗಳಲ್ಲೇ ಮುಳುಗಿದೆ. ನಮಗೆ 40 ಪರ್ಸೆಂಟ್‌ ಅಂತಿದ್ದವರು ನೂರಕ್ಕೆ ನೂರು ಲೂಟಿ ಮಾಡುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ಹಗರಣದ ಹಣ ಕಾಂಗ್ರೆಸ್ ಚುನಾವಣೆಗೆ ಬಳಕೆಯಾಗಿರೋ ಶಂಕೆಯಿದೆ. ಇದು ಪರಿಶಿಷ್ಠ ಜಾತಿ ಪರಿಶಿಷ್ಟ ವರ್ಗಕ್ಕೆ ಮಾಡಿರುವ ಅನ್ಯಾಯ. ಈ ಬಗ್ಗೆ ವಿಧಾನಸೌಧ ಒಳಗೂ ಹೊರಗೂ ನಾವು ಹೋರಾಟ ಮಾಡುತ್ತೇವೆ ಎಂದರು.

ಸಿದ್ರಾಮಯ್ಯ ಕಾಲಿಗೆ ಬಿದ್ದು ಆಶಿರ್ವಾದ ಪಡೆದ ವಿಚಾರ:

ಸಿಎಂ ಸಿದ್ರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರವಿ, ಸಿದ್ರಾಮುಲ್ಲಾ ಖಾನ್ ಅಂತ ನಾನು ಅವರನ್ನು ಕರೆದಿದ್ದು ಅವರ ಓಲೈಕೆಯ ನೀತಿ ಪ್ರತಿಬಿಂಬಿಸಿ, ನಾನು ನಿನ್ನೆ ಅವರ ಕಾಲಿಗೆ ನಮಸ್ಕಾರ ಮಾಡಿದ್ದು ನನ್ನ ಸಂಸ್ಕಾರದ ಕಾರಣದಿಂದ, ಹಿರಿಯರಿಗೆ ನಮಸ್ಕಾರ ಮಾಡೋದು ನಮ್ಮ ಮನೆಯಿಂದ ಕಲಿತಿರುವ ಸಂಸ್ಕಾರ ಎಂದರು.

ಅರ್ಜುನ ಕುರುಕ್ಷೇತ್ರ ಯುದ್ದಕ್ಕೆ ಮುನ್ನ ಭಿಷ್ಮ ಮತ್ತು ದ್ರೋಣಾಚಾರ್ಯರ ಆಶಿರ್ವಾದ ಪಡೆಯುತ್ತಾನೆ. ಮುಂಬರುವ ಕುರುಕ್ಷೇತ್ರ ಯುದ್ದಕ್ಕೆ ಅರ್ಜುನನ ರೀತಿಯಲ್ಲಿ ನಾನೂ ಕೂಡ ಆಶಿರ್ವಾದ ಪಡೆದುಕೊಂಡಿದ್ದೇನೆ. ಮಹಾಭಾರತದ ರೀತಿ ಇದರಲ್ಲಿ ಸಿದ್ರಾಮಯ್ಯ ಅವರ ಪಾತ್ರ ಯಾವುದು ಎನ್ನುವುದು ನಿಮಗೆ ಬಿಟ್ಟಿದ್ದು. ಕೆಲವರು ಧೃತರಾಷ್ಟ್ರರು , ಇನ್ನು ಕೆಲವರು ಭಿಷ್ಮರು , ದ್ರೋಣಾಚಾರ್ಯರು , ಶಕುನಿ , ಶಲ್ಯನಂತಹ ಮಾವಂದಿರು ಸಹ ಇದ್ದಾರೆ. ಹಿರಿಯರಿಗೆ ನಮಸ್ಕಾರ ಮಾಡೋದು ನಮಗೆ ಕಲಿಸಿರುವ ಸಂಸ್ಕಾರ ಹಾಗಾಗಿ ಮಾಡಿದ್ದೇನೆಂದು ಸಮರ್ಥಿಸಿಕೊಂಡರು..ಬೆಲೆ ಏರಿಕೆ ಕಾಂಗ್ರೆಸ್‌ ಸರ್ಕಾರದ 6ನೇ ಗ್ಯಾರಂಟಿ

ಕಲಬುರಗಿ:

ಮುದ್ರಾಂಕ ಶುಲ್ಕ ಹೆಚ್ಚಳವಾಯ್ತು, ಆಲ್ಕೋ ಹಾಲ್ ಆಯಿತು, ಪೆಟ್ರೋಲ್, ಡೀಸೆಲ್ ದರ ಏರಿಕೆ ಆಯಿತು, ವಿದ್ಯುತ್ ದರವೂ ಏರಿಕೆ ಆಯಿತು, ಇದೀಗ ಹಾಲಿನ ದರ ಏರಿಕೆ ಸರದಿ. ಬೆಲೆ ಏರಿಕೆ ಕಾಂಗ್ರೆಸ್‌ ಸರ್ಕಾರದ 6 ನೇ ಗ್ಯಾರಂಟಿಯಾಗಿದೆ ಎಂದು ಬಿಜೆಪಿ ಮುಖಂಡ ಸಿಟಿ ರವಿ ಟೀಕಿಸಿದ್ದಾರೆ.

ಸರ್ಕಾರ ಇಂಧನ ಬೆಲೆಗಳನ್ನು ಹೆಚ್ಚಿಸಿದೆ. ಬಸ್‌ ದರವೂ ಶೀಘ್ರ ಹೆಚ್ಚಳವಾಗೋದರಲ್ಲಿದೆ, ಅದಕ್ಕೂ ಮೊದಲೇ ಇದೀಗ ರಾಜ್ಯದಲ್ಲಿ ಹಾಲಿನ ದರ ಏರಿಕೆಯಾಗಿದೆ. ಇನ್ನೇನು ಇದೆ ಏರಿಸೋದಕ್ಕೆ ಸತ್ತ ಹೆಣದ ಮೇಲೂ ತೆರಿಗೆ ಹಾಕಿ.

ಸತ್ತ ಹೆಣ ಸುಡಲು ಇಷ್ಟು ತೆರಿಗೆ ಅಂತ ಹಾಕಿದ್ರೆ ಮುಗೀತು ಎಂದು ರವಿ ಆಕ್ರೋಶ ಹೊರಹಾಕಿದರು. ಈ ಸರ್ಕಾರಕ್ಕೆ ಮತ ಹಾಕಿದ್ದಕ್ಕೆ ರಾಜ್ಯದ ಜನ ಹಿಡಿ ಶಾಪ್ ಹಾಕ್ತಿದ್ದಾರೆ. ಹಿಂದೆ ಕೇಂದ್ರ 1 ರು. ಇಂಧನ ದರಹ ಹೆಚ್ಚಿಸಿದಾಗ ಇದೇ ಕಾಂಗ್ರೆಸ್ಸಿಗರು ಬೊಬ್ಬೆ ಹಾಕಿದ್ದರು. ಈಗ ಅವರೇ ದರ ಹೆಚ್ಚಳ ಮಾಡಿದ್ದಾರೆ. ನಾವು ಇವರಿಗೆ ಏನೆಂದು ಹೇಳಬೇಕು. ಅಭಿವೃದ್ಧಿ ಅನುದಾನಕ್ಕಾಗಿ ದರ ಹೆಚ್ಚಳ ಎಂದು ಹೇಳುತ್ತಿದ್ದಾರೆ. ರಾಜ್ಯದ ಜನ ಎಲ್ಲ ಗಮನಿಸುತ್ತಿದ್ದಾರೆಂದರು. ಸಿಎಂ ಸಿದ್ದರಾಮಯ್ಯ ಮಾತೆತ್ತಿದರೆ ನುಡಿದಂತೆ ನಡೆದಿದ್ದೇವೆಂದು ಹೇಳುತ್ತಿದ್ದಾರೆ. ಇವ್ರು ಬೆಲೆ ಹೆಚ್ಚಳದ ಬಗ್ಗೆ ನುಡಿದಿದ್ದರಾ? ಹಾಗಾದ್ರೆ ಯಾಕೆ ಈಗ ಆ ಕೆಲಸ ಮಾಡುತ್ತಿದ್ದಾರೆ? ಜನ ಇವರಿಗೆ ಪಾಠ ಕಲಿಸೋದು ನಿಶ್ಚಿತ ಎಂದರು.