ತವರು ಜಿಲ್ಲೆ ಅಧಿಕಾರಿಗಳಿಂದ್ಲೇ ಪ್ರಿಯಾಂಕ್‌ಗೆ ಸಡ್ಡು !

| Published : Oct 21 2025, 01:00 AM IST

ತವರು ಜಿಲ್ಲೆ ಅಧಿಕಾರಿಗಳಿಂದ್ಲೇ ಪ್ರಿಯಾಂಕ್‌ಗೆ ಸಡ್ಡು !
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹಾಕುವುದರ ಜತೆಗೆ ಪಥಸಂಚಲನದಲ್ಲಿ ಭಾಗಿಯಾಗುವ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲಿಯೇ ಅಧಿಕಾರಿಗಳು ಸಡ್ಡು ಹೊಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ / ಬಸವಕಲ್ಯಾಣ

ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹಾಕುವುದರ ಜತೆಗೆ ಪಥಸಂಚಲನದಲ್ಲಿ ಭಾಗಿಯಾಗುವ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲಿಯೇ ಅಧಿಕಾರಿಗಳು ಸಡ್ಡು ಹೊಡೆದಿದ್ದಾರೆ.

ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಆಚರಣೆಯ ಪಥ ಸಂಚಲನದಲ್ಲಿ ಸೇಡಂ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ನಾಗರಾಜ್‌ ಮನ್ನೇ ಭಾಗಿಯಾಗಿಯಾಗಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬರು ಪಥ ಸಂಚಲನದಲ್ಲಿ ಭಾಗಿಯಾಗಿರುವ ಸುದ್ದಿ ವೈರಲ್‌ ಆಗಿದ್ದು, ಸಚಿವ ಪ್ರೀಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿಯೇ ಈ ಘಟನೆ ನಡೆದಿರುವುದರಿಂದ ಭಾರೀ ಗಮನ ಸೆಳೆದಿದೆ.

ತಹಸಿಲ್ದಾರ್ ಅನುಮತಿ ನೀಡದಿದ್ದರೂ ಸೇಡಂನಲ್ಲಿ ಭಾನುವಾರ ಪಥ ಸಂಚಲನ ಕಾರ್ಯಕ್ರಮ ನಡೆದಿತ್ತು. ನಾಗರಾಜ್ ದಶಕಗಳಿಂದಲೂ‌ ಸಂಘದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಅವರು ಪ್ರಿಯಾಂಕ್‌ ಖರ್ಗೆ ತವರು ಜಿಲ್ಲೆಯಲ್ಲಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ತವರು ಕ್ಷೇತ್ರದಲ್ಲಿಯೇ ಸರ್ಕಾರಿ ವೈದ್ಯಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗಿರೋದು ಗಮನ ಸೆಳೆದಿದೆ.

ಕಲಬುರಗಿ ಅಧಿಕಾರಿ ಬೀದರ್‌ನಲ್ಲಿ ಭಾಗಿ:

ಇನ್ನೂ ಬೀದರ್‌ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಅ.14ರಂದು ನಡೆದ ಆರ್‌ಎಸ್‌ಎಸ್ ಶತಮಾನೋತ್ಸವದ ಪಥ ಸಂಚಲನದಲ್ಲಿ ಕಲಬುರಗಿ ಜಿಲ್ಲೆಯ ಜಿಎಸ್‌ಟಿ ಅಧಿಕಾರಿ ಭಾಗಿಯಾಗಿದ್ದರು ಎಂಬ ವಿಡಿಯೋ ತುಣುಕೊಂದು ವೈರಲ್ ಆಗಿದೆ.

ಬಸವಕಲ್ಯಾಣದಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಕಲಬುರಗಿ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಮಹೇಶ್ ಪಾಟೀಲ್‌ ಭಾಗಿಯಾಗಿದ್ದಾರೆ. ಸರ್ಕಾರಿ ಅಧಿಕಾರಿ ಆಗಿರುವ ಮಹೇಶ ಪಾಟೀಲ್ ಅವರು ಗಣವೇಶ ಧರಿಸಿ ಸಂಘದಲ್ಲಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಇವರ ಜತೆಗೆ ಹಲವಾರು ಶಿಕ್ಷಕರು, ಪಿಡಿಒಗಳು ಸಹ ಪಥ ಸಂಚಲನದಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.