ಸಾರಾಂಶ
ಹಳೇ ಮೈಸೂರು ಪ್ರಾಂತ್ಯದಲ್ಲಿ ಗಾಳ ಹಾಕುವ ಕೆಲಸ ನಡೆಯುತ್ತಿದೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರಿಯಾಂಕ್ ಖರ್ಗೆ ಕಲಿಯುವುದು ಬಹಳ ಇದೆ, ಹಗುರವಾದ ಮಾತುಗಳು ಬೇಡ ಎಂದು ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟರಾಜು ಕಿವಿ ಮಾತು ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಗೆ ಎಲ್ಲಾ ಶಾಸಕರು ಬರುತ್ತಾರೆ, ಎಲ್ಲದರ ಬಗ್ಗೆಯೂ ಮಾತುಕತೆ ನಡೆಯುತ್ತೆ. ಎಲ್ಲರೂ ಒಂದು ಕಡೆ ಸೇರಿ ಖುಷಿಯಿಂದ ಇರೋಣ ಅಂತಾ ಇಲ್ಲಿಗೆ ಬಂದಿದ್ದೇವೆ, ಜೆಡಿಎಸ್ ಪಕ್ಷದಿಂದ ಯಾರೂ ಹೋಗಲ್ಲ ಎಂದರು. ನಾವೆಲ್ಲ ಒಗ್ಗಟ್ಟಿನಿಂದ ಇದ್ದೇವೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಗಾಳ ಹಾಕುವ ಕೆಲಸ ನಡೆಯುತ್ತಿದೆ. ಆದರೆ, ಯಾರೂ ಕಿವಿಗೊಡಲ್ಲ. ನಾವು ಎಚ್.ಡಿ. ದೇವೇಗೌಡರ ಕುಟುಂಬದ ಸದಸ್ಯರಿದ್ದಂತೆ. ಹೆಚ್ಡಿಕೆ, ದೇವೇಗೌಡರ ಬಗ್ಗೆ ಗೌರವವಿದೆ. ನಾವ್ಯಾರೂ ಎಲ್ಲಿಗೂ ಹೋಗಲ್ಲ ಅಂತ ಎಲ್ಲರೂ ಮಾತು ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು. ಎಚ್.ಡಿ. ಕುಮಾರಸ್ವಾಮಿಗೆ ಹೊಟ್ಟೆ ಕಿಚ್ಚು ಅದಕ್ಕಾಗಿ ಸುಳ್ಳು ಆರೋಪ ಮಾಡುತ್ತಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿರುವ ವಿಚಾರ ಪ್ರಸ್ತಾಪಿಸಿದ ಅವರು, ದೇವೇಗೌಡರ ಕುಟುಂಬ ಸೋಲು-ಗೆಲುವನ್ನ ಸಮಾನವಾಗಿ ಸ್ವೀಕರಿಸ್ತಾರೆ. ಯಾರೇ ಆದರೂ ಸಣ್ಣತನದ ಹೇಳಿಕೆ ಕೊಡುವುದು ಒಳ್ಳೆಯದಲ್ಲ ಎಂದು ತಿರುಗೇಟು ನೀಡಿದರು. ----- ಬಾಕ್ಸ್ ---ಯತೀಂದ್ರ ಸೂಪರ್ ಸಿಎಂ ಹೇಳಿಕೆ: ಎಚ್‌ಡಿಕೆ ಹೇಳಿದ್ದು ಸರಿಚಿಕ್ಕಮಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿರುವುದರಲ್ಲಿ ತಪ್ಪೇನಿದೆ, ಇದ್ದದ್ದು ಇದ್ದಂಗೆ ಮಾತನಾಡಿದರೆ ದ್ವೇಷದ ರಾಜಕಾರಣನಾ ಎಂದು ಮಾಜಿ ಶಾಸಕ ಕೃಷ್ಣಾರೆಡ್ಡಿ ಪ್ರಶ್ನಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತೀಂದ್ರ ಅವರು, ನಾನು ಕೊಟ್ಟಿರುವುದು ಮಾಡು ಅಂದ್ರೆ ಏನರ್ಥ ಎಂದರು. ಕುಮಾರಸ್ವಾಮಿ ಸರಿಯಾಗೇ ಹೇಳಿದ್ದಾರೆ, ತಪ್ಪೇನಿದೆ ಎಂದ ಅವರು, ಪ್ರಿಯಾಂಕ್ ಖರ್ಗೆ ಮೊದಲು ಅವರ ಮನೆಯಲ್ಲಿ ಏನಾಗ್ತಿದೆ ಅಂತ ನೋಡಿಕೊಳ್ಳಲಿ. 2018 ರಲ್ಲಿ ಈ ಮಾತು ಎಲ್ಲಿತ್ತು, ಪ್ರಿಯಾಂಕ್ ಖರ್ಗೆ ಅವರೇ, ಯಾರ್‍ಯಾರು ಬಂದು ಕುಮಾರಸ್ವಾಮಿ ಹಾಗೂ ದೇವೇಗೌಡರ ಕಾಲು ಹಿಡಿದ್ರು ಗೊತ್ತಿಲ್ವೆ, ಅವೆಲ್ಲವನ್ನೂ ಪ್ರಿಯಾಂಕ್ ಖರ್ಗೆ ಒಮ್ಮೆ ನೆನಪಿಸಿಕೊಳ್ಳಲಿ. ಅವರು ಸೋತಿಲ್ವಾ, ಹತಾಶೆಯಿಂದ ಮಾತನಾಡಿಲ್ವಾ, ಸೋತಾಗಾ ಹೇಳಿಕೆಗಳನ್ನೇ ಕೊಟ್ಟಿಲ್ವಾ ಎಂದರು. ಜಿ.ಟಿ.ದೇವೇಗೌಡ ಹಾಗೂ ಡಿಕೆಶಿ ಮಾತುಕತೆಗೆ ಅಪಾರ್ಥ ಬೇಡ. ಅವರು ಡಿಸಿಎಂ, ನಮ್ಮ ಶಾಸಕರು ಯಾರು ಅವರ ಮನೆಗೆ ಹೋಗಬಾರದಾ, ಅವರ ಮನೆಗೆ ಹೋದ ಕೂಡಲೇ ಪಕ್ಷ ಬಿಡುತ್ತೀವಾ, ಜನ ಮತ ಕೊಟ್ಟಿರ್ತಾರೆ, ಜನರನ್ನ ತಿರಸ್ಕಾರ ಮಾಡಿ ಯಾರೂ ಹೋಗಲ್ಲ. ನಮ್ಮನ್ನ ಯಾರೂ ಟಚ್ ಮಾಡಲ್ಲ ಎಂದು ಹೇಳಿದರು.
----ಕೈ ಹಾಕಿ ಕಾಂಗ್ರೆಸ್ ಒದೆ ತಿಂದಿದೆ: ಬಂಡೆಪ್ಪ ಕಾಶೆಂಪುರ್
ಚಿಕ್ಕಮಗಳೂರು: ಈ ಹಿಂದೆ ಕಾಂಗ್ರೆಸ್ ಬೇರೆಯವರಿಗೆ ಕೈ ಹಾಕಿ ಒದೆ ತಿಂದಿದೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 130 ಸ್ಥಾನ ಬಂದ್ರು ಬೇರೆಯವರನ್ನು ಕರೆದು ಕೊಂಡಾಗ 60ಕ್ಕೆ ಬಂದಿದ್ರು, ಈಗ್ಲೂ ಅದೇ ಆಗೋದು ಎಂದರು. ಸರ್ಕಾರ ಮೊದಲು ರೈತರ ಬಗ್ಗೆ ಯೋಚಿಸಲಿ, ಅದನ್ನ ಮಾಡ್ತಿಲ್ಲ, ಹೀಗೆ ಕೈ ಹಾಕಿದ್ದಾಗ ಹಿಂದೆಯೂ ಜನ ಇವರಿಗೆ ಪಾಠ ಕಲಿಸಿದ್ರು, ಮುಂದೆಯೂ ಕಲಿಸ್ತಾರೆ. ಶರಣಗೌಡರಿಗೆ ನಾನು ಮಾತನಾಡ್ತೀನಿ, ಅವರು ನಮ್ಮ ಶಾಸಕರು, ನಿಷ್ಟಾವಂತ ಕಾರ್ಯಕರ್ತ ಎಂದು ಹೇಳಿದರು. ನಮ್ಮ ಯಾರಲ್ಲೂ ಯಾವ ಅಸಮಾಧಾನವೂ ಇಲ್ಲ, ಓವರ್ ಲೋಡ್ ಒಳ್ಳೆದಲ್ಲ, ದೇವರು ಫೈನ್ ಹಾಕಿ ಮನೆಯಲ್ಲಿ ಕುರಿಸುತ್ತಾನೆ. ಬ್ರಿಡ್ಜ್ ಮೇಲೆ ಓವರ್ ಲೋಡ್ ಗಾಡಿ ಹೋದ್ರೆ ಏನಾಗುತ್ತೆ, ಈಗಲೂ ಅದೇ ಆಗೋದು ಎಂದರು. ಈ ಹಿಂದೆ ಅವರು ಎಲ್ಲರನ್ನೂ ಕರೆದುಕೊಂಡಿದ್ರು, ಅವರು ಆಡಳಿತ ಪಕ್ಷದ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಅಲ್ಲಿನ ಶಾಸಕರು ಬೇರೆ ಬೇರೆ ಕಡೆ ಹೋಗಿ ದೂರು ನೀಡುತ್ತಿದ್ದಾರೆ. ಅವರಿಗೆ ಈ ಮೆಜಾರಿಟಿ ಕೊಟ್ಟಿದ್ದೇ ತಪ್ಪಾಯ್ತು ಎಂದು ಹೇಳಿದರು. ---