ಪ್ರಿಯಾಂಕ್‌ ಖರ್ಗೆ ಅಸಮರ್ಥ ಸಚಿವ

| Published : Jul 17 2025, 12:34 AM IST

ಸಾರಾಂಶ

ಮಹತ್ವದ ಖಾತೆಗಳಾದ ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಎರಡು ಖಾತೆಗಳನ್ನು ಅಸಮರ್ಥ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೀಡಿದ್ದು, ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ ಆಗಿದೆ ಎಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಚಾಲಕ ಎಸ್.ದತ್ತಾತ್ರಿ ಕಿಡಿಕಾರಿದರು.

ಶಿವಮೊಗ್ಗ: ಮಹತ್ವದ ಖಾತೆಗಳಾದ ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಎರಡು ಖಾತೆಗಳನ್ನು ಅಸಮರ್ಥ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೀಡಿದ್ದು, ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ ಆಗಿದೆ ಎಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಚಾಲಕ ಎಸ್.ದತ್ತಾತ್ರಿ ಕಿಡಿಕಾರಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಇಲಾಖೆಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಗಳು ಪ್ರಿಯಾಂಕ್ ಖರ್ಗೆಗೆ ಈ ಖಾತೆಗಳನ್ನು ನೀಡಿದ್ದು, ರಾಜ್ಯಕ್ಕೆ ಭಾರಿ ನಷ್ಟವಾಗಿದೆ ಎಂದು ಆರೋಪಿಸಿದರು. ರಾಜ್ಯಕ್ಕೆ ಬಂದ ಸುಮರು 25 ಸಾವಿರ ಉದ್ಯೋಗ ನೀಡುವಂತಹ ಟೊಯೋಟೋ ಕಂಪನಿ ಮಹಾರಾಷ್ಟ್ರಕ್ಕೆ ಶಿಫ್ಟ್ ಆಗಿದೆ. ಇನ್ಫೋಸಿಸ್ ನೂತನ ಕ್ಯಾಂಪಸ್ ಹೈದರಾಬಾದ್‌ಗೆ ಶಿಫ್ಟ್ ಆಗಿದ್ದು, ಆಪಲ್ ಕಂಪನಿ ಕೂಡ ತಮಿಳುನಾಡು ಪಾಲಾಗಿದೆ. ರಾಜ್ಯದ ಯುವಕರಿಗೆ ಉದ್ಯೋಗ ದೊರಕದೇ ತುಂಬಲಾರದ ನಷ್ಟವಾಗಿದೆ. ಕೇವಲ ಬಿಜೆಪಿ, ಮೋದಿ ಮತ್ತು ಆರ್‌ಎಸ್ಎಸ್ ಅನ್ನು ಟೀಕಿಸುವುದೇ ಪರಮ ಕರ್ತವ್ಯ ಎಂದು ತಿಳಿದುಕೊಂಡ ಪ್ರಿಯಾಂಕ್ ಖರ್ಗೆ ಒಂದೇ ಒಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವರಾಗಿ ಯಾವುದೇ ಹೊಸ ಯೋಜನೆಗಳನ್ನು ತಂದಿಲ್ಲ ಎಂದು ದೂರಿದರು.ನೀರ್ ಸಾಬ್ ಎಂದು ಖ್ಯಾತರಾದ ಅಬ್ದುಲ್ ನಜೀರ್ ಸಾಬ್, ಎಂ.ಪಿ.ಪ್ರಕಾಶ್, ಎಂ.ವೈ.ಘೋರ್ಪಡೆ ಮೊದಲಾದ ದಿಗ್ಗಜ ನಾಯಕರು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ ಇಲಾಖೆಯನ್ನು ಪ್ರಿಯಾಂಕ್ ಖರ್ಗೆ ಕೈಗೆ ನೀಡಿದ್ದು, ರಾಜ್ಯದ ದುರ್ದೈವ ಎಂದರು.ನಾನು ಕಲಬುರಗಿ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿ ಅನೇಕ ದೂರುಗಳು ಪ್ರಿಯಾಂಕ್ ಖರ್ಗೆ ಮೇಲೆ ಅಲ್ಲಿನ ಸಾರ್ವಜನಿಕರು ಮಾಡಿದ್ದು, ಸಚಿವರಾದ ಮೇಲೆ ಇವರು ಒಂದು ದಿನ ಕೂಡ ಗ್ರಾಮಗಳಿಗೆ ಭೇಟಿ ನೀಡಿಲ್ಲ. ಕಲಬುರಗಿಯ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡ್ರಗ್ಸ್ ರಾಕೆಟ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಈತ ಪ್ರಿಯಾಂಕ್ ಖರ್ಗೆ ಬೆಂಬಲಿಗನಾಗಿದ್ದಾನೆ. ಹೊರರಾಜ್ಯದ ಪೊಲೀಸರು ಈತನನ್ನು ಬಂಧಿಸಿ ಕರೆ ತಂದಿದ್ದಾರೆ. ಆದರೆ, ಮೂರು ತಿಂಗಳ ಹಿಂದೆ ಈತನನ್ನು ಹಿಡಿದಾಗ ಇದೇ ಖರ್ಗೆ ಆತನನ್ನು ಬಿಡಿಸಿದ್ದಾರೆ. ಡ್ರಗ್ ಮಾಫಿಯಾಕ್ಕೆ ಪರೋಕ್ಷವಾಗಿ ಬೆಂಬಲಿಸಿದ್ದಾರೆ ಎಂದು ಆರೋಪಿಸಿದರು.ಕುಡುಚಿ ಕ್ಷೇತ್ರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 17 ಕೋಟಿ ರು. ನರೇಗಾ ಅವ್ಯವಹಾರ ನಡೆದಿದೆ. ಅದಕ್ಕೆ ಸಂಪೂರ್ಣ ದಾಖಲೆ ಇದೆ. ಕೇಂದ್ರದ ಮಹೋನ್ನತ ಯೋಜನೆಯಾದ ಜಲ್ ಜೀವನ್ ಮಿಷನ್ ಯೋಜನೆ ಬಗ್ಗೆ ಖರ್ಗೆಯವರು ಯಾವುದೇ ಆಸಕ್ತಿ ತೋರದೆ ಅದನ್ನು ಕುಲಗೆಡಿಸಿದ್ದಾರೆ. ಮೊದಲು ಅವರು ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆಯ ರಿವ್ಯೂ ಮಾಡಲಿ. ಅಲ್ಲದೇ ಅವರದೇ ಜಿಲ್ಲೆಯಲ್ಲಿ ಸುಮಾರು ಎರಡೂವರೆ ಸಾವಿರ ಕೋಟಿ ರುಗಳ ಅಕ್ರಮ ಮರಳುದಂಧೆಯಾಗಿದೆ. ಸರ್ಕಾರಕ್ಕೆ ಸಲ್ಲಬೇಕಾದ ರಾಯಲ್ಟಿಯಲ್ಲಿ ಮೋಸವಾಗಿದೆ ಎಂದು ದೂರಿದರು.ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಐಟಿ ಬಿಟಿ ಸಚಿವ ಅಶ್ವತ್ಥನಾರಾಯಣ ಅವರು ಹಲವಾರು ಸುಧಾರಣೆ ಮಾಡಿದ್ದರು. ಆದರೆ, ಪ್ರಿಯಾಂಕ್ ಖರ್ಗೆ ಸಚಿವರಾದ ಮೇಲೆ ಈ ಎರಡೂ ಖಾತೆಗಳು ಹಾಳಾಗಿವೆ. ಕೇಂದ್ರದ ಕಾಂಗ್ರೆಸ್ ಪ್ರಮುಖರಾದ ಸುರ್ಜೇವಾಲಾ ಅವರು ಕೂಡಲೇ ಪ್ರಿಯಾಂಕ್ ಖರ್ಗೆ ಅವರನ್ನು ಈ ಇಲಾಖೆಯಿಂದ ತೆಗೆದು ಹಿರಿಯ ಅನುಭವಿಗಳಿಗೆ ಈ ಖಾತೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರಮುಖ್ ಕೆ.ವಿ.ಅಣ್ಣಪ್ಪ, ಶರತ್ ಕಲ್ಯಾಣಿ ಇದ್ದರು.